ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ವರ್ಚುವಲ್ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ
ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರಾಜ್ಯದ ಮೊದಲ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕಕ್ಕೆ ವರ್ಚುವಲ್ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಪ್ರತಿದಿನ 5000 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ ತ್ಯಾಜ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಈ ಘಟಕದಲ್ಲಿ ದಿನಕ್ಕೆ 600 ಟನ್ ಸಂಸ್ಕರಿತ ತ್ಯಾಜ್ಯ ಬಳಸಿ, 11.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. 260 ಕೋಟಿ ರೂ. ವೆಚ್ಚದಲ್ಲಿ ಈ ಘಟಕವನ್ನು ನಿರ್ಮಿಸಲಾಗುತ್ತಿದ್ದು, ಕರ್ನಾಟಕ ವಿದ್ಯುತ್ ನಿಗಮ ಹಾಗೂ ಬಿಬಿಎಂಪಿ ಯವರು ತಲಾ 130 ಕೋಟಿ ವೆಚ್ಚ ಭರಿಸಲಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಈ ಘಟಕದ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಇದರಿಂದ ಬೆಂಗಳೂರಿನ  ಶೇಕಡಾ 25 ರಷ್ಟು ಮಿಶ್ರ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ.

ಸನ್ಮಾನ್ಯ ಪ್ರಧಾನ ಮಂತ್ರಿಯವರು ಚಾಲನೆ ನೀಡಿರುವ "ಆತ್ಮ ನಿರ್ಭರ್ ಭಾರತ್" ಯೋಜನೆಯನ್ವಯ ಈ ಯೋಜನೆಯ ನಿರ್ಮಾಣ ಕಾರ್ಯದಲ್ಲಿ ಬಳಸುವ ಹೆಚ್ಚಿನ ವಸ್ತುಗಳು ಸ್ವದೇಶಿಯದ್ದೇ ಆಗಿರುತ್ತದೆ ಎಂದು ಮುಖ್ಯಮಂತ್ರಿಯವರು ಸಂತಸ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಗಡಿ ಶಾಸಕ ಎ. ಮಂಜುನಾಥ್ ಅವರು ಮಾತನಾಡಿ, ಈ ಯೋಜನೆಗೆ ರಾಮನಗರ ಜಿಲ್ಲೆಯ ತ್ಯಾಜ್ಯವನ್ನೂ ಪೂರೈಸಲು ಅವಕಾಶ ಕಲ್ಪಿಸುವಂತೆ ಹಾಗೂ ಬೆಂಗಳೂರು ನಗರದ ಸುತ್ತಲಿನ ತಾಲ್ಲೂಕುಗಳಿಗೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಮುಖ್ಯಮಂತ್ರಿಯವರ ಸಲಹೆಗಾರ ಎಂ. ಲಕ್ಷ್ಮೀನಾರಾಯಣ, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್ ಮೊದಲಾದವರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com