ಚಿಕ್ಕಮಗಳೂರು: ನವಜಾತ ಶಿಶು ಮಾರಾಟ ಮಾಡಿದ್ದ ವೈದ್ಯ, ನರ್ಸ್ ವಿರುದ್ಧ ಪ್ರಕರಣ ದಾಖಲು

ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯನೇ ನವಜಾತ ಶಿಶುವನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಕೊಪ್ಪದ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯನೇ ನವಜಾತ ಶಿಶುವನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. 

ಪ್ರಕರಣ ಸಂಬಂಧ ಮಗುವನ್ನು ಮಾರಾಟ ಮಾಡಿದ್ದ ವೈದ್ಯ ಹಾಗೂ ನರ್ಸ್ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮದುವೆಗೂ ಮೊದಲೇ ಗರ್ಭಿಣಿಯಾಗಿದ್ದ ತೀರ್ಥಹಳ್ಳಿ ಯುವತಿ ಕೊಪ್ಪ ತಾಲೂಕಿನ ಆಸ್ಪತ್ರೆಯಲ್ಲಿ ಮಾರ್ಚ್ 14, 2020 ರಂದು ಮಗುವಿಗೆ ಜನ್ಮ ನೀಡಿದ್ದಾಳೆ. ಆಕೆಗೆ ಹೆರಿಗೆ ಮಾಡಿಸಿದ್ದ ವೈದ್ಯ, ಮಗುವನ್ನು ಸಾಕಲು ಸಾಧ್ಯವೇ? ಮದುವೆಯಾಗದೆ ಸಾಕಲು ಸಾಧ್ಯವಿಲ್ಲ. ಇಲ್ಲೇ ಬಿಟ್ಟು ಹೋಗಿ, ಇಲ್ಲದಿದ್ದರೆ ಪೊಲೀಸರಿಗೆ ದೂರು ನೀಡುದ್ದೇವೆ, ಡಿಸ್ಚಾರ್ಜ್ ಮಾಡುವುದಿಲ್ಲವೆಂದು ಬೆದರಿಸಿದ್ದಾನೆ. 

ಈ ವೇಳೆ ಯುವತಿ ಮಗುವನ್ನು ವೈದ್ಯರಿಗೆ ನೀಡಿದ್ದಾಳೆ. ಬಳಿಕ ವೈದ್ಯರು ಯುವತಿಗೆ ರೂ.55,000 ನೀಡಿದ್ದಾರೆಂದು ಹೇಳಲಾಗುತ್ತಿದೆ. ಯುವತಿಯ ತಾಯಿ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮಗುವನ್ನು ಕಳೆದುಕೊಂಡು ಯುವತಿ ಖಿನ್ನತೆಗೊಳಗಾಗಿ ಶಿವಮೊಗ್ಗದ ಎನ್'ಜಿಒಗೆ ಸೇರಿಕೊಂಡಿದ್ದಾಳೆ. ಆಸ್ಪತ್ರೆಯ ದಾಖಲೆಗಳಲ್ಲಿ ಯುವತಿಗೆ ಹೆರಿಗೆಯಾಗಿಲ್ಲ ಎಂದು ನಮೂದಿಸಲಾಗಿದೆ. ಆದರೆ, ಮಗುವನ್ನು ಖರೀದಿ ಮಾಡಿದ್ದ ಮಹಿಳೆಗೆ ಹೆರಿಗೆಯಾಗಿರುವಂತೆ ದಾಖಲು ಮಾಡಿದ್ದಾರೆಂದು ತಿಳಿಸಿದ್ದಾರೆ. 

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ವೈದ್ಯ ಬಾಲಕೃಷ್ಣ, ನರ್ಸ್ ರೇಷ್ಮಾ ಮತ್ತು ಶೋಭಾ ಹಾಗೂ ಮಗುವನ್ನು ಖರೀದಿ ಮಾಡಿದ್ದ ಶೃಂಗೇರಿಯ ಪ್ರೇಮಾ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಂದು ತಿಳಿದುಬಂದಿದೆ. 

ನರ್ಸ್ ಹಾಗೂ ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಇದೀಗ ನಾಲ್ವರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ನಾಲ್ವರನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com