ಅಲೋಪತಿ, ಆಯುರ್ವೇದವನ್ನು ಮಿಶ್ರಣ ಮಾಡಬೇಡಿ: ಡಿಸೆಂಬರ್ 8, 11ರಂದು ವೈದ್ಯಕೀಯ ಸಿಬ್ಬಂದಿಗಳ ಮುಷ್ಕರ

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಕುರಿತು ನೀಡಿರುವ ಅನುಮತಿಯನ್ನು ವಿರೋಧಿಸಿ ಇದೇ ಡಿಸೆಂಬರ್ 8 ಮತ್ತು 11ರಂದು ವೈದ್ಯಕೀಯ ಸಿಬ್ಬಂದಿಗಳು ಮುಷ್ಕರ ನಡೆಸಲಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಮಾಡುವ ಕುರಿತು ನೀಡಿರುವ ಅನುಮತಿಯನ್ನು ವಿರೋಧಿಸಿ ಇದೇ ಡಿಸೆಂಬರ್ 8 ಮತ್ತು 11ರಂದು ವೈದ್ಯಕೀಯ ಸಿಬ್ಬಂದಿಗಳು ಮುಷ್ಕರ ನಡೆಸಲಿದ್ದಾರೆ.

ಹೌದು.. ಆಯುರ್ವೇದ ವೈದ್ಯರಿಗೂ ಶಸ್ತ್ರ ಚಿಕಿತ್ಸೆ ನಡೆಸುವ ಕುರಿತು ನೀಡಿರುವ ಅನುಮತಿಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಗಳು ಮುಷ್ಕರ ನಡೆಸಲಿದ್ದಾರೆ. ಇದೇ ಡಿಸೆಂಬರ್ 8 ಮತ್ತು 11ರಂದು ಎಲ್ಲಾ ಕೋವಿಡ್ ಮತ್ತು  ತುರ್ತುರಹಿತ ವೈದ್ಯಕೀಯ ಸೇವೆಗಳನ್ನು 2 ಗಂಟೆಗಳ ಕಾಲ ಸ್ಥಗಿತ ಮಾಡುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಲಿದ್ದಾರೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯೊಳಗೆ ಮುಷ್ಕರ ನಡೆಯಲಿದೆ.

ಕಳೆದ ವಾರವಷ್ಟೇ ಸೆಂಟ್ರಾ ಕೌನ್ಸಿಲ್ ಆಫ್ ಇಂಡಿಯನ್ ಮೆಡಿಸಿನ್ (CCIM) ಆಯುರ್ವೇದ ವೈದ್ಯರಿಗೂ ಶಸ್ತ್ರ ಚಿಕಿತ್ಸೆ ನಡೆಸಲು ಅನುಮತಿ ನೀಡಿತ್ತು. ಅಪೆಂಡಿಕ್ಸ್‌, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್‌, ಹಲ್ಲಿನ ರೂಟ್‌ಕ್ಯಾನಲ್‌ ಮುಂತಾದ ಸಾಮಾನ್ಯ  ಶಸ್ತ್ರಚಿಕಿತ್ಸೆಗಳನ್ನು ನಡೆಸುವ ತರಬೇತಿಯನ್ನು ಪಡೆದ ನಂತರ, ಆಯುರ್ವೇದ ವೈದ್ಯರು ಸಹ ಇಂಥ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ ಎಂದು ಹೇಳಿತ್ತು. 

ಆಯುರ್ವೇದದಲ್ಲಿ ಶಲ್ಯತಂತ್ರ (ಸಾಮಾನ್ಯ ಶಸ್ತ್ರಚಿಕಿತ್ಸೆ) ಅಧ್ಯಯನ ನಡೆಸುವವರಿಗೆ 39 ರೀತಿಯ ಶಸ್ತ್ರಚಿಕಿತ್ಸೆ ಹಾಗೂ ಶಾಲಾಕ್ಯತಂತ್ರ (ಕಣ್ಣು, ಮೂಗು ಗಂಟಲು, ತಲೆ ಹಾಗೂ ದಂತ ಚಿಕಿತ್ಸೆ) ಸ್ನಾತಕೋತ್ತರ ಅಧ್ಯಯನ ಮಾಡುವವರಿಗೆ 19 ರೀತಿಯ ಶಸ್ತ್ರಚಿಕಿತ್ಸೆ ನಡೆಸುವ ತರಬೇತಿಯನ್ನು  ನೀಡಲಾಗುವುದು. ಪದವಿ ಪೂರ್ಣಗೊಂಡ ನಂತರ ಅವರು ಸ್ವತಂತ್ರವಾಗಿ ಈ ಚಿಕಿತ್ಸೆಗಳನ್ನು ನಡೆಸಬಹುದು ಎಂದು ಹೇಳಲಾಗಿತ್ತು.

ಸಿಸಿಐಎಂನ ಈ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ವಿರೋಧಿಸಿತ್ತು. ಅಲ್ಲದೆ ಆಧುನಿಕ ಔಷಧಕ್ಕಾಗಿ ಸ್ವಾತಂತ್ರ್ಯ ಹೋರಾಟ ಮತ್ತು ಮಿಕ್ಸೋಪತಿಯ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಹೇಳಿತ್ತು.

ಇನ್ನು ಸಿಸಿಐಎಂ ನ ಈ ನಡೆಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿಸಿಐಎಂನ ಈ ಕ್ರಮವು ರೋಗಿಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ. ಎಂದು ರಾಜ್ಯದ ಅಲೋಪತಿ ವೈದ್ಯರ ಹೇಳಿದ್ದು, ಇದರ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಆಯುರ್ವೇದ ವೈದ್ಯರಿಗೆ  ಅಂಗರಚನಾಶಾಸ್ತ್ರ ಅಥವಾ ಶಸ್ತ್ರಚಿಕಿತ್ಸೆಯ ಬಗ್ಗೆ ತಿಳಿದಿಲ್ಲ. ಇದು ಕಾರ್ ಡ್ರೈವರ್‌ಗೆ ವಿಮಾನ ಹಾರಾಟ ಮಾಡುವಂತೆ ಕೇಳುವಂತಿದೆ ಎಂದು ವೈದ್ಯರೊಬ್ಬರು ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ವಿಕ್ಟೋರಿಯಾ ಆಸ್ಪತ್ರೆಯ ಹಿರಿಯ ಅರಿವಳಿಕೆ ತಜ್ಞ ಡಾ.ಭಗತ್ ರಾಮ್ ಅವರು, 'ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಮಾಡಲು ಸಮರ್ಥರೆಂದು ಇದ್ದಕ್ಕಿದ್ದಂತೆ ಹೇಳಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಿನ ಶಸ್ತ್ರಚಿಕಿತ್ಸೆಗಳಲ್ಲಿ ಮೂಲಭೂತ  ಅಗತ್ಯವಾದ ಅರಿವಳಿಕೆ ಹೇಗೆ ನೀಡಬೇಕೆಂದು ಅವರಿಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ. 

ಆದರೆ ಸಿಸಿಐಎಂ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಈಗಾಗಲೇ ಔಷಧ ವ್ಯವಸ್ಥೆಯ ಭಾಗವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಯುಷ್ ಇಲಾಖೆಯ ಆಯುಕ್ತರಾದ ಮೀನಾಕ್ಷಿ ನೇಗಿ ಅವರು, 'ಶಸ್ತ್ರಚಿಕಿತ್ಸೆ ಯಾವಾಗಲೂ  ಆಯುರ್ವೇದದ ಒಂದು ಭಾಗವಾಗಿದೆ. ಶಸ್ತ್ರ ಚಿಕಿತ್ಸೆ ಆಯುರ್ವೇದ ಪಠ್ಯಕ್ರಮದ ಭಾಗವಾಗಿದ್ದು, ಇದನ್ನು ದೇಶಾದ್ಯಂತ ಕಲಿಸಲಾಗುತ್ತದೆ. ಇದು ಈಗಿರುವ ಕಾನೂನು ಆಡಳಿತದ ಪ್ರಕಾರ. ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ಕಲಿಸಿದ ನಂತರ, ಅವರು ಅದನ್ನು ಅಭ್ಯಾಸ ಮಾಡಲು ಸಾಧ್ಯವಿಲ್ಲ  ಎಂದು ಹೇಳುವುದು ನ್ಯಾಯವೇ? ಪ್ರಶ್ನಿಸಿದ್ದಾರೆ.

ಅಂತೆಯೇ ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ಕಲಿಸಿದಾಗ, ರೋಗಿಗಳಿಗೆ ಆಯ್ಕೆ ಇರಬೇಕು. ಜಪಾನ್, ಚೀನಾ ಮತ್ತು ಜರ್ಮನಿಯಂತಹ ದೇಶಗಳನ್ನು ನೋಡಿ, ಅಲ್ಲಿ ಅವರು ಕೋವಿಡ್  ಸೋಂಕಿಗೆ ಆಯುರ್ವೇದ ಮಧ್ಯಸ್ಥಿಕೆಗಳನ್ನು ಬಳಸುತ್ತಿದ್ದಾರೆ. ಈ ಕುರಿತು ವಾದ-ವಿವಾದಗಳಿಗೆ  ಸಿಲುಕುವ ಬದಲು ದೇಶಕ್ಕೆ ಯಾವುದು ಒಳ್ಳೆಯದು ಎಂದು ನಾವು ನೋಡಬೇಕು ಎಂದು ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com