ಕೊರೋನಾ ಲಸಿಕೆ ಪ್ರಯೋಗ, ಚಿಕಿತ್ಸೆಗಾಗಿ ರಾಜ್ಯ ಸರ್ಕಾರ 300 ಕೋಟಿ ರೂ. ಬಿಡುಗಡೆ ಮಾಡಿದೆ: ಸಚಿವ ಸುಧಾಕರ್

ಕೊರೋನಾ ಲಸಿಕೆ ಪ್ರಯೋಗ ಹಾಗೂ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ರೂ.300 ಕೋಟಿ ಬಿಡುಗಡೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 
ಸುಧಾಕರ್
ಸುಧಾಕರ್

ಬೆಂಗಳೂರು: ಕೊರೋನಾ ಲಸಿಕೆ ಪ್ರಯೋಗ ಹಾಗೂ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ರೂ.300 ಕೋಟಿ ಬಿಡುಗಡೆ ಮಾಡಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ. 

ಬೆಂಗಳೂರಿನ ವೈಟ್'ಫೀಲ್ಡ್ ನಲ್ಲಿರುವ ವೈದೇಹಿ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ಭಾರತ ಬಯೋಟೆಕ್ ನಿರ್ಮಿತ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಬುಧವಾರದಿಂದ ಆರಂಭಗೊಂಡಿದೆ. ಈ ಪ್ರಯೋಗಕ್ಕೆ ವರ್ಚುವಲ್ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬುಧವಾರ ಚಾಲನೆ ನೀಡಿದರು. 

ಕಾರ್ಯಕ್ರಮದ ಬಳಿಕ ಮಾತನಾಡಿದ ಸುಧಾಕರ್ ಅವರು, ರಾಜ್ಯಕ್ಕೆ ಇದು ಹೆಮ್ಮೆಯ ವಿಷಯವಾಗಿದೆ. ದೇಶದ 12 ರಾಜ್ಯಗಳ 25 ಭಾಗಗಳಲ್ಲಿ ಪ್ರಯೋಗ ನಡೆಯುತ್ತಿದ್ದು, ಸುಮಾರು 26 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 1,600-1,800 ಜನರಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ. ಲಸಿಕೆ ನೀಡುವ ಸಮಯದಲ್ಲಿ ಊಹಾಪೋಹಗಳು ಕೇಳಿಬರುತ್ತವೆ. ಆದರೆ ಇದಕ್ಕೆ ಯಾರೂ ಕಿವಿಗೊಡಬಾರದು ಎಂದು ಹೇಳಿದ್ದಾರೆ.

ಲಸಿಕೆ ವಿತರಣೆಗೆ ಸರ್ಕಾರ ಸಂಪೂರ್ಣವಾಗಿ ಸಜ್ಜಾಗಿದೆ. ಬೆಂಗಳೂರು, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಪ್ರಾದೇಶಿಕ ಲಸಿಕಾ ಶೇಖರಣಾ ಕೇಂದ್ರಗಳನ್ನು ತೆರೆಯಲಾಗುವುದು.

ರಾಜ್ಯದಲ್ಲಿ 10 ವ್ಯಾಕ್ಯೂಮ್ ಕೂಲರ್, 4 ವ್ಯಾಕ್ಯೂಮ್ ಫ್ರೀಜರ್ ಸೌಲಭ್ಯ ಈಗಾಗಲೇ ಇದೆ. ಕೇಂದ್ರ ಸರ್ಕಾರ ಹೊಸದಾಗಿ ಮೂರು ವ್ಯಾಕ್ಯೂಮ್ ಕೂಲರ್, ಎರಡು ವ್ಯಾಕ್ಯೂಮ್ ಫ್ರೀಜರ್ ನೀಡಲಿದೆ. ರಾಜ್ಯದಲ್ಲಿ 29,451 ವ್ಯಾಕ್ಸಿನ್ ಕೇಂದ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. 10,008 ಮಂದಿ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. 2,855 ಶೀತಲೀಕೃತ ದಾಸ್ತಾನು ಕೇಂದ್ರಗಳು ಲಭ್ಯವಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಆ ಬಳಿಕ ಕೊರೋನಾ ವಾರಿಯರ್ಸ್, 50 ವರ್ಷ ಮೇಲ್ಪಟ್ಟವರು ಮತ್ತು ಪೂರ್ವ ಕಾಯಿಲೆ ಇರುವವರಿಗೆ ಲಸಿಕೆ ನೀಡುತ್ತೇವೆಂದು ಹೇಳಿದ್ದಾರೆ. 

ರಾಜ್ಯ ಸರ್ಕಾರ ಕೋವಿಡ್ ಲಸಿಕೆ ಹಾಗೂ ಚಿಕಿತ್ಸೆಗಾಗಿ ರೂ.300 ಕೋಟಿ ಬಿಡುಗಡೆ ಮಾಡಿದೆ. ದೇಶದಲ್ಲಿ ಐದು ಕೋವಿಡ್ ಲಸಿಕೆಗಳು ಪ್ರಯೋಗದ ವಿವಿಧ ಹಂತದಲ್ಲಿವೆ. ಕೆಲ ಅಡ್ಡ ಪರಿಣಾಮಗಳು ಕಂಡು ಬಂದಿರಬಹುದು. ಆದರೆ, ತಜ್ಞರು ಅದನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಈ ಹಂತದಲ್ಲಿ ಆತಂಕ ಪಡುವ ಆಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com