ಮೈಸೂರು ಡಿಸಿ ರೋಹಿಣಿ ಸಿಂಧೂರಿಗೆ 'ಸಿಂಹ' ಬಲ: ಒಳ್ಳೆ ಕೆಲಸ ಮಾಡಲು ಯಾರ ಅಪ್ಪಣೆ ಬೇಕಾಗಿಲ್ಲ ಎಂದ ಸಂಸದ ಪ್ರತಾಪ ಸಿಂಹ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೆಂಬಲಕ್ಕೆ ಸಂಸದ ಪ್ರತಾಪ ಸಿಂಹ ನಿಂತಿದ್ದಾರೆ. ಮೈಸೂರಿಗೆ ಈಗಾಗಲೇ ಇಬ್ಬರು ಮಹಾರಾಣಿಯರು ಇದ್ದಾರೆ, ಮೂರನೆಯವರು ಬೇಡ ಎಂದು ವೈಯಕ್ತಿಕ ಟೀಕೆ ಮಾಡುವುದು ತಪ್ಪು. ಪ್ರಜಾಪ್ರಭುತ್ವ ಬಂದ ಮೇಲೆ ಎಲ್ಲರೂ ಸಾಮಾನ್ಯ ಪ್ರಜೆಗಳೇ ಎಂದಿದ್ದಾರೆ.
Published: 03rd December 2020 07:42 AM | Last Updated: 03rd December 2020 12:39 PM | A+A A-

ರೋಹಿಣಿ ಸಿಂಧೂರಿ- ಸಂಸದ ಪ್ರತಾಪ್ ಸಿಂಹ
ಮೈಸೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬೆಂಬಲಕ್ಕೆ ಸಂಸದ ಪ್ರತಾಪ ಸಿಂಹ ನಿಂತಿದ್ದಾರೆ. ಮೈಸೂರಿಗೆ ಈಗಾಗಲೇ ಇಬ್ಬರು ಮಹಾರಾಣಿಯರು ಇದ್ದಾರೆ, ಮೂರನೆಯವರು ಬೇಡ ಎಂದು ವೈಯಕ್ತಿಕ ಟೀಕೆ ಮಾಡುವುದು ತಪ್ಪು. ಪ್ರಜಾಪ್ರಭುತ್ವ ಬಂದ ಮೇಲೆ ಎಲ್ಲರೂ ಸಾಮಾನ್ಯ ಪ್ರಜೆಗಳೇ. ಮೈಸೂರು ರಾಜವಂಶಕ್ಕೆ ಮರ್ಯಾದೆ, ಗೌರವ ಈಗಲೂ ಜನರು ಕೊಡುತ್ತಿದ್ದಾರೆ ಎಂದರೆ ಅವರು ಈ ಭಾಗದಲ್ಲಿ ಅಷ್ಟು ಒಳ್ಳೆ ಕೆಲಸ ಮಾಡಿದ್ದಾರೆ ಎಂದು, ಹಾಗೆಂದು ಅವರ ಜೊತೆ ಜಿಲ್ಲಾಧಿಕಾರಿಗಳನ್ನು ಹೋಲಿಸಿ ಪ್ರಶ್ನೆ ಮಾಡುವುದು, ಟೀಕೆ ಮಾಡುವುದು ಸರಿಯಲ್ಲ ಎಂದು ಮೈಸೂರಿನಲ್ಲಿ ನಿನ್ನೆ ಸಂಸದ ಪ್ರತಾಪ ಸಿಂಹ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಹೇಳಿದರು.
ವಸ್ತುನಿಷ್ಠವಾಗಿ ಡಿಸಿಯವರನ್ನು ಪ್ರಶ್ನೆ ಮಾಡುವ ಹಕ್ಕು ಎಲ್ಲರಿಗೂ ಇದೆ, ಅದು ಬಿಟ್ಟು ವೈಯಕ್ತಿಕವಾಗಿ ಮೂರನೇ ಮಹಾರಾಣಿ ಬೇಡ ಎಂದೆಲ್ಲ ಟೀಕಿಸುವುದು ಸರಿಯಲ್ಲ. ರಾಜಕಾರಣಿಗಳು ಯಾರನ್ನು ಏನು ಬೇಕಾದರೂ ಮಾತನಾಡಬಹುದೇ, ಅಧಿಕಾರಿಗಳನ್ನು ತುಚ್ಛವಾಗಿ ಕಾಣಬೇಕೆಂದು ಇದೆಯೇ, ಒಬ್ಬ ಜಿಲ್ಲಾಧಿಕಾರಿ ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ನಾವು ಯಾಕೆ ಮುಕ್ತಮನಸ್ಸಿನಿಂದ ನೋಡಬಾರದು, ಪ್ರಶಂಸಿಸಬಾರದು ಎಂದು ಕೇಳಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿ ಎಂದರೆ ಅವರಿಗೆ ಆಡಳಿತಾತ್ಮಕ ಮತ್ತು ನ್ಯಾಯಾಂಗದ ಎರಡೂ ಅಧಿಕಾರ ಅವರೊಬ್ಬರಿಗೇ ಇರುವುದು. ಉಸ್ತುವಾರಿ ಸಚಿವರು ಏನಾದರೊಂದು ಆದೇಶ ನೀಡಿದರೂ ಕೂಡ ಅದನ್ನು ಅಧಿಕಾರದ ರೂಪದಲ್ಲಿ ಆದೇಶ ಹೊರಡಿಸುವ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ. ಈ ಕ್ಷೇತ್ರ ನಿಮ್ಮದೇ ಎಂದು ಮತದಾರರು ಶಾಸಕ ಅಥವಾ ಸಂಸದರಿಗೆ ಬರೆದುಕೊಟ್ಟಿರುವುದಿಲ್ಲ. ಹಾಗಾಗಿ, ಜನರ ಸಮಸ್ಯೆಗಳನ್ನು ಕೇಳಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪರ ಸಿಂಹ ಬ್ಯಾಟ್ ಬೀಸಿದರು.