ರಾಜ್ಯದ ಆರ್ಥಿಕ ಸ್ಥಿತಿಗತಿ ಶ್ವೇತಪತ್ರಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ

ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ

ಕಲಬುರಗಿ: ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಕೆಪಿಸಿಸಿ ವಕ್ತಾರ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ. 

ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿ ಶೋಚನೀಯ ಹಂತ ತಲುಪಿದ್ದು, ವಿವಿಧ ಇಲಾಖೆಗಳ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ. ಈಗಾಗಲೇ ಸುಮಾರು 33,000 ಕೋಟಿ ರೂ. ಸಾಲ ಮಾಡಲು ನಿರ್ಧರಿಸಲಾಗಿದೆ. ನೆರೆಹಾವಳಿಗೆ ತುತ್ತಾದ ಪ್ರದೇಶಗಳಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಹಾಗಾಗಿ ಈ ಕುರಿತು ಶ್ವೇತಪತ್ರ ಹೊರಡಿಸಿ ಜನರಿಗೆ ವಾಸ್ತವ ಸ್ಥಿತಿ ತಿಳಿಸಲಿ ಎಂದು ಒತ್ತಾಯಿಸಿದ್ದಾರೆ. 

ಸರ್ಕಾರ ತನ್ನ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲದಂತ ಸ್ಥಿತಿ ನಿರ್ಮಾಣವಾಗಿದ್ದರೂ ಕೂಡ ಇತ್ತೀಚೆಗೆ ಡಿಸಿಎಂ ಅಶ್ವತ್ಥ ನಾರಾಯಣ ಅವರು ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ ರೂ.1.50 ಕೋಟಿ ರೂ. ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ರಾಜ್ಯದ ಸುಮಾರು 6000 ಗ್ರಾಪಂಗಳಿಗೆ ಬೇಕಾಗುವ ರೂ.9000 ಕೋಟಿ ರೂ. ಗೂ ಅಧಿಕ ಹಣ ಎಲ್ಲಿಂದ ತರುತ್ತಾರೆಂದು ಪ್ರಶ್ನಿಸಿದರು. 

ಕೆಎಸ್ಆರ್'ಟಿಸಿ, ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳ ನಿವೃತ್ತ ನೌಕರರಿಗೆ ಪಿಂಚಣಿ, ಸಾಲದ ಮೇಲಿನ ಬಟ್ಟಿ ಕಟ್ಟಲು ಸರ್ಕಾರದ ಬಳಿ ದುಡ್ಡಿಲ್ಲ. ರಾಜ್ಯದ ಸುಮಾರು 14,500 ಅತಿಥಿ ಉಪನ್ಯಾಸಕರಿಗೆ ಮಾರ್ಚ್'ನಿಂದ ಸಂಬಳವಿಲ್ಲ. ಸುಮಾರು 428 ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 1000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಖಾಯಂ ಮಾಡುವ ಕುರಿತು ಯಾವುದೇ ಸ್ಪಷ್ಟ ನಿರ್ಧಾರವಿಲ್ಲ. 

ರಾಜ್ಯದ ಜಿಡಿಪಿ ಶೇ.17ಕ್ಕೆ ಕುಸಿದಿದೆ. ಎಸ್'ಪಿಟಿ/ಟಿಎಸ್'ಪಿ ಯೋಜನೆಯಡಿಯ ವಾರ್ಷಿಕ ಅನುದಾನವನ್ನು ರೂ.30 ಸಾವಿರ ಕೋಟಿಯಿಂದ ರೂ.20 ಸಾವಿರ ಕೋಟಿಗೆ ಕಡಿತಗೊಳಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ನೀಡಬೇಕಾಗಿರುವ ವಾರ್ಷಿಕ ರೂ.2 ಸಾವಿರ ಕೋಟಿ ಬಿಡುಗಡೆ ಮಾಡಿಲ್ಲ. ಇತ್ತೀಚಿಗೆ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ಉಂಟಾದ ಸುಮಾರು ರೂ.688.34 ಕೋಟಿ ಹಾನಿಗೆ ಪರಿಹಾರ ಬಿಡುಗಡೆ ಮಾಡಿಲ್ಲ. ಹಾಗಾಗಿ ಸರ್ಕಾರ ತಮ್ಮ ಹಾನಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ನೊಂದವರು ಹಾಗೂ ಸಂಬಳ ನೀಡಲು ಅಸಮರ್ಥವಾದ ಸ್ಥಿತಿ ತಲುಪಿದೆ ಎಂದು ನೌಕರರು ಯೋಚಿಸುವಂತಾಗಿದೆ. ಆದ್ದರಿಂದ ಸರ್ಕಾರ ಶ್ವೇತಪತ್ರ ಹೊರಡಿಸುವ ಮೂಲಕ ಆರ್ಥಿಕ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಿ ಎಂದು ಆಗ್ರಹಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com