ಕೋವಿಡ್-19 ಎರಡನೇ ಅಲೆ ಭೀತಿ: ಮೈಸೂರಿನಲ್ಲಿ ಐಸಿಯು ಬೆಡ್ ಗಳದ್ದೇ ಚಿಂತೆ!

ಕೋವಿಡ್-19 2ನೇ ಭೀತಿಯ ನಡುವೆಯೇ ಮೈಸೂರಿನಲ್ಲಿ ಐಸಿಯು ಬೆಡ್ ಗಳ ಕೊರತೆ ವೈದ್ಯಾಧಿಕಾರಿಗಳ ಚಿಂತೆಗೆ ಕಾರಣವಾಗಿದೆ.
ಕೋವಿಡ್-ಮೈಸೂರು
ಕೋವಿಡ್-ಮೈಸೂರು

ಮೈಸೂರು: ಕೋವಿಡ್-19 2ನೇ ಭೀತಿಯ ನಡುವೆಯೇ ಮೈಸೂರಿನಲ್ಲಿ ಐಸಿಯು ಬೆಡ್ ಗಳ ಕೊರತೆ ವೈದ್ಯಾಧಿಕಾರಿಗಳ ಚಿಂತೆಗೆ ಕಾರಣವಾಗಿದೆ.

ಹೌದು..ರಾಜ್ಯದಲ್ಲಿ ರಾಜಧಾನಿ ಬೆಂಗಳೂರು ಬಳಿಕ ಅತೀ ಹೆಚ್ಚು ಸೋಂಕಿತರನ್ನು ಹೊಂದಿದ್ದ ಮೈಸೂರಿನಲ್ಲಿ ಇದೀಗ ಮತ್ತೆ ಕೋವಿಡ್ 2ನೇ ಅಲೆ ವೇಳೆ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಆವರಿಸಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಐಸಿಯು ಬೆಡ್ ಗಳಿಲ್ಲದೇ ಇರುವುದು ಆರೋಗ್ಯ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

ಪ್ರಸ್ತುತ ಮೈಸೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ 238 ಐಸಿಯು ಬೆಡ್ ಗಳಿದ್ದು, ಇತ್ತೀಚೆಗಷ್ಟೇ 46 ಐಸಿಯು ಬೆಡ್ ಗಳನ್ನು ಸಿದ್ಧತೆ ಮಾಡಲಾಗಿತ್ತು. ತಜ್ಞರ ಪ್ರಕಾರ ಮೈಸೂರಿನಲ್ಲಿ 480ರಿಂದ 500 ಐಸಿಯು ಬೆಡ್ ಗಳ ಅಗತ್ಯದೆ. ಈ ಹಿಂದೆ ಸಾಕಷ್ಟು ಕೋವಿಡ್ ಸೋಂಕಿತರು ಐಸಿಯು ಬೆಡ್ ಗಳು ಸಿಗದೇ ಸಾವಿಗೀಡಾಗಿದ್ದರು. ಮೈಸೂರಿನಲ್ಲಿ ಉಂಟಾಗಿರುವ ಒಟ್ಟಾರೆ ಕೋವಿಡ್ ಸಾವಿನ ಪೈಕಿ ಶೇ.23 ರಷ್ಟು ಮಂದಿ ಐಸಿಯು ಬೆಡ್ ಗಳ ಕೊರತೆಯಿಂದಾಗಿ, ಸೂಕ್ತ ಸಂದರ್ಭದಲ್ಲಿ ಆಕ್ಸಿಜನ್ ವ್ಯವಸ್ಥೆ ಸಿಗದೇ ಸಾವನ್ನಪ್ಪಿದ್ದಾರೆ ಎಂದು ದಾಖಲೆಗಳಿಂದ ತಿಳುದುಬಂದಿದೆ.

ಅಂತಿಮ ಕ್ಷಣದಲ್ಲಿ ಆಸ್ಪತ್ರೆಗೆ ಕರೆತಂದ ಕಾರಣ ಸಾಕಷ್ಟು ಮಂದಿ ಅಸು ನೀಗಿದ್ದಾರೆ. ತಜ್ಞರ ಪ್ರಕಾರ ಈ ಹಿಂದಿನ ಪ್ರಕರಣಗಳಿಗಿಂತಲೂ 2ನೇ ಅಲೆ ವೇಳೆ ಶೇ.3-4ರಷ್ಟು ಹೆಚ್ಚು ಸೋಂಕಿತರಿಗೆ ತೀವ್ರ ನಿಗಾ ಘಚಕದ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಸಮಸ್ಯೆ ಎದುರಿಸಲು ನುರಿತ ವೈದ್ಯರು, ನರ್ಸ್ ಗಳು, ಗ್ರೂಪ್ ಡಿ ನೌಕರ ಅಗತ್ಯತೆ ಇದೆ. 

ಈ ಬಗ್ಗೆ ಮಾತನಾಡಿರುವ ಜಿಲ್ಲಾ ಆರೋಗ್ಯಾಧಿಕಾರಿ ಟಿ ಅಮರ್ ನಾಥ್ ಅವರು, ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದೆ. ನಾವು ಮುಂಬರುವ ಪರಿಸ್ಥಿತಿ ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದೇವೆ, ಈ ಹಿಂದೆ ಪರಿಸ್ಥಿತಿಯಿಂದಾಗಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಜಿಲ್ಲೆಯಲ್ಲಿ ನಿತ್ಯ 4500ಕ್ಕೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಆದರೂ ಪಾಸಿಟಿವ್ ಪ್ರಮಾಣ ತೀರಾ ಕಡಿಮೆ ಇದೆ. ಆದಷ್ಟು ಬೇಗ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡುವುದು ನಮ್ಮ ಆಶಯವಾಗಿದೆ.  ಇದರಿಂದ ಸೋಂಕಿತರ ಸಂಖ್ಯೆ ಕೂಡ ನಿಯಂತ್ರಣವಾಗುತ್ತದೆ. ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೂ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದೇವೆ. ಖಾಸಗಿ ಆಸ್ಪತ್ರೆಗಳೊಂದಿಗೂ ಕೂಡ ಚರ್ಚೆನಡೆಸಿದ್ದು, ಅವರೂ ಕೂಡ ನಮಗೆ ನೆರವು ನೀಡಲು ಸಿದ್ಧರಾಗಿದ್ದಾರೆ. ಆದರೂ ನಾವು ನಮ್ಮ ಮೂಲಭೂತ ಸೌಕರ್ಯ ಹೆಚ್ಚಿಸಿಕೊಳ್ಳುವುದಕ್ಕಿಂತ ಮುಖ್ಯವಾಗಿ ಜನರು ಕಾಳಜಿ ವಹಿಸಿವುದು ಮುಖ್ಯ. ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ, ಸೋಂಕಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com