ಪ್ರತಿಭಟನಾನಿರತ ರೈತರು
ಪ್ರತಿಭಟನಾನಿರತ ರೈತರು

ಭಾರತ್ ಬಂದ್ ಗೆ ಜೆಡಿಎಸ್ ಬೆಂಬಲ, ಆಮ್ ಆದ್ಮಿ ಪಕ್ಷದಿಂದ ನಾಳೆ ಬೆಂಗಳೂರಿನಲ್ಲಿ ಧರಣಿ

ಭಾರತ್ ಬಂದ್ ಗೆ ಜೆಡಿಎಸ್ ಬೆಂಬಲ ಘೋಷಣೆ ಮಾಡಿದ್ದು, ವಿಧಾನಸಭೆ ಕಲಾಪ ಬಹಿಷ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರು: ಭಾರತ್ ಬಂದ್ ಗೆ ಜೆಡಿಎಸ್ ಬೆಂಬಲ ಘೋಷಣೆ ಮಾಡಿದ್ದು, ವಿಧಾನಸಭೆ ಕಲಾಪ ಬಹಿಷ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಜಾತ್ಯಾತೀತ ಜನತಾದಳ ರಾಜ್ಯಾಧ್ಯಕ್ಷ ಎಚ್ ಕೆ ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕೇಂದ್ರ ಸರ್ಕಾರ ಜನ ವಿರೋಧಿ ಕಾನೂನು ಜಾರಿಗೆ ತರುತ್ತಿದೆ. ಇದರ ವಿರುದ್ಧ ರೈತರು ಭಾರತ ಬಂದ್ ಕರೆದಿದ್ದಾರೆ. ಭಾರತ ಬಂದ್ ಗೆ ನಮ್ಮ ಬೆಂಬಲವಿದೆ. ಉತ್ತರ ಭಾರತದ ರೈತರು ಹೋರಾಟ ಮಾಡುತ್ತಿದ್ದಾರೆ.  ನಮ್ಮ ದಕ್ಷಿಣ ಭಾರತದ ರೈತರು ಹೋರಾಟ ಮಾಡಿ ಸಾಕಾಗಿದೆ. ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ನಾಳೆ ನಡೆಯುವ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

'ರೈತರ ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ವಿರೋಧ ಮಾಡಿ ಯಾವ ರಾಜಕಾರಣಿಗಳೂ ಉಳಿದಿಲ್ಲ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸಬೇಕಾಗುತ್ತದೆ. ರೈತರ ಪರವಾಗಿ ನಾವು ಇರುವುದಾದರೆ ನಾಳೆ ಸದನ ಬಂದ್ ಮಾಡಬೇಕು. ಆಡಳಿತ ಪಕ್ಷದವರು  ಏನು ಬೇಕಾದರೂ ಮಾಡಲಿ, ಆದರೆ ಪ್ರತಿಪಕ್ಷದವರು ನಾಳೆ ಕಲಾಪ ಬಹಿಷ್ಕರಿಸಬೇಕು. ಈ ಮೂಲಕ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕು, ಇದರ ಬಗ್ಗೆ ನಾವು ಪಕ್ಷದ ವರಿಷ್ಠ ದೇವೇಗೌಡರ ಜೊತೆ ಚರ್ಚೆ ಮಾಡುತ್ತೇವೆ, ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.

ಜೆಡಿಎಸ್ ಶಾಸಕ ಶಿವಲಿಂಗೇಗೌಡ ಮಾತನಾಡಿ, ನಾಳೆಯ ರೈತರ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ವಿಪಕ್ಷಗಳು ನಾಳೆ ರೈತರ ಬೆಂಬಲಕ್ಕೆ ನಿಲ್ಲಬೇಕು. ನಾಳೆ ವಿಧಾನ ಸಭೆ ಕಲಾಪವನ್ನು ಬಹಿಷ್ಕರಿಸಬೇಕು. ರೈತರ ಪರ ನಿಜವಾದ ಕಾಳಜಿ ಇದ್ದರೆ ವಿಧಾನ ಸಭೆ ಕಲಾಪ  ಬಹಿಷ್ಕರಿಸಲಿ. ತಾವು ಕೂಡ ನಮ್ಮ ನಾಯಕರ ಜೊತೆ ಈ ಬಗ್ಗೆ ಮಾತನಾಡುತ್ತೇವೆ ಎಂದು ಅವರು ತಿಳಿಸಿದರು.

ಒಕ್ಕಲಿಗರಿಗೆ ಪ್ರತ್ಯೇಕ ರಾಜ್ಯ ಕುರಿತ ಸೋಮೇಶ್ವರ ನಾಥ ಸ್ವಾಮೀಜಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ರೀತಿಯ ಹೇಳಿಕೆ ಸರಿಯಲ್ಲ. ಇದು ಬಾಲಿಶ ಹೇಳಿಕೆ. ಜಾತಿವಾರು ರಾಜ್ಯ ಮಾಡಲು ಸಾಧ್ಯವೇ ? ಇದು ಸಂಘರ್ಷಕ್ಕೆ ದಾರಿಮಾಡಿಕೊಟ್ಟಂತಾಗುತ್ತದೆ. ಕರ್ನಾಟಕ ರಾಜ್ಯವನ್ನು  ಜಾತಿವಾರು ಒಡೆದು ಸಂಘರ್ಷಕ್ಕೆ ಹಾದಿ ಮಾಡಿಕೊಡುತ್ತಿದ್ದಾರೆ. ಯಾರೇ ಈ ರೀತಿಯ ಹೇಳಿಕೆ ಕೊಟ್ಟರೂ ಸರಿಯಲ್ಲ. ಸ್ವಾಮೀಜಿಯೇ ಆಗಲಿ, ಯಾರೇ ಆಗಲಿ ಇಂತಹ ಹೇಳಿಕೆ ನೀಡಬಾರದು ಎಂದು ಜೆಡಿಎಸ್ ಶಾಸಕ ಶಿವಲಿಂಗೇಗೌಡ ಖಡಕ್ ಆಗಿ ಹೇಳಿದರು.

ಆಮ್ ಆದ್ಮಿ ಪಕ್ಷದಿಂದ ನಾಳೆ ಬೆಂಗಳೂರಿನಲ್ಲಿ ಧರಣಿ
ಇನ್ನು ಜೆಡಿಎಸ್ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಕೂಡ ರೈತರ ಭಾರತ್ ಬಂದ್ ಗೆ ಬೆಂಬಲ ನೀಡಿದ್ದು, ರೈತರ ಪ್ರತಿಭಟನೆಯನ್ನು ಬೆಂಬಲಿಸಿ ನಾಳೆ ಬೆಂಗಳೂರಿನಲ್ಲಿ ಧರಣಿ ನಡೆಸುವುದಾಗಿ ಪಕ್ಷ ಘೋಷಣೆ ಮಾಡಿದೆ. ಈ ಬಗ್ಗೆ ಮಾತನಾಡಿದ ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ  ಮೋಹನ್ ದಾಸರಿ ಅವರು, 'ಈ ದೇಶದ ಬೆನ್ನೆಲುಬಾದ ರೈತ ಕಳೆದ 20 ದಿನಗಳಿಂದ ಕೊರೆವ ಚಳಿಯನ್ನೂ ಲೆಕ್ಕಿಸದೆ ದೆಹಲಿ/ ಪಂಜಾಬ್ ಗಡಿಯಲ್ಲಿ‌ ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸದೆ ಅನ್ನದಾತನಿಗೆ ಅವಮಾನ ಮಾಡಿದೆ. ಜಾರಿಗೆ ತಂದಿರುವ, ತರಲು  ಹೊರಟಿರುವ ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ರೈತರು ನಾಳೆ ಭಾರತ್ ಬಂದ್‌ಗೆ ಕರೆ ನೀಡಿದ್ದು ಇದಕ್ಕೆ ಬೆಂಬಲವಾಗಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬೆಳಿಗ್ಗೆ 11 ಗಂಟೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ಅನೇಕ ಕಾಯ್ದೆಗಳ ಮೂಲಕ ದೇಶದ ಮೂಲ ಕಸುಬನ್ನೆ ಹಾಳು ಮಾಡಲು ಹೊರಟಿರುವ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ. ಯಡಿಯೂರಪ್ಪನವರ ನೇತೃತ್ವದ  ರಾಜ್ಯ ಸರ್ಕಾರವೂ ಸಹ ಕೇಂದ್ರದ ತಾಳಕ್ಕೆ ಕುಣಿಯುತ್ತಿದ್ದು, ರೈತರ ಪರವಾಗಿ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ರೈತರನ್ನು ಕೂಡಿಹಾಕಲು ಮೈದಾನಗಳನ್ನು ಕೊಡದೆ ರೈತರ ಬೆನ್ನಿಗೆ ನಿಂತಿದೆ ಹಾಗೂ ನೀರು, ಊಟ, ಹೊದಿಕೆಯ ವ್ಯವಸ್ಥೆ  ಮಾಡಿದೆ. ಆದರೆ ಕೇಂದ್ರ ಸರ್ಕಾರ ನೀಚ ಬುದ್ದಿ ತೋರಿಸಿ ಅನ್ನದಾತನ ವಿರುದ್ದ ನಿಂತಿದೆ ಎಂದು ಕಿಡಿಕಾರಿದರು.ಈ ದೇಶದ ಬಹುಜನ ಸಂಸ್ಕೃತಿಗೆ ಕೊಡಲಿ ಪೆಟ್ಟು ಹಾಕಲು ಹೊರಟಿರುವ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು, ರೈತರ ಜೊತೆ ಇಡೀ ದೇಶದ  ಜನರಿದ್ದಾರೆ ಎನ್ನುವುದು ಸರ್ಕಾರದ ಅರಿವಿಗೆ ಬರುವಂತೆ ಮಾಡಬೇಕು, ಆದ ಕಾರಣ ಪಕ್ಷಾತೀತವಾಗಿ ಎಲ್ಲಾ ನಾಗರಿಕರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.
 

Related Stories

No stories found.

Advertisement

X
Kannada Prabha
www.kannadaprabha.com