ಭಾರತ್ ಬಂದ್ ಗೆ ಬೆಂಬಲ: ರಾಜ್ಯದ ಹಲವೆಡೆ ಭಾರೀ ಪ್ರತಿಭಟನೆ

ಕೃಷಿ ಕಾನೂನು ವಿರೋಧಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಂಗಳೂರು ಹೊರತುಪಡಿಸಿ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಟೌನ್ ಹಾಲ್ ನಲ್ಲಿ ತರಕಾರಿ ಬೆಳೆಗಾರರಿಂದ ಪ್ರತಿಭಟನೆ (ಎಎನ್ಐ ಚಿತ್ರ)
ಟೌನ್ ಹಾಲ್ ನಲ್ಲಿ ತರಕಾರಿ ಬೆಳೆಗಾರರಿಂದ ಪ್ರತಿಭಟನೆ (ಎಎನ್ಐ ಚಿತ್ರ)

ಬೆಂಗಳೂರು: ಕೃಷಿ ಕಾನೂನು ವಿರೋಧಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ ಗೆ ಬೆಂಗಳೂರು ಹೊರತುಪಡಿಸಿ ವಿವಿಧ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆ ವಿರೋಧಿಸಿ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಾನವ ಸರಪಳಿ ರಚಿಸಿ, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ರೂಪ  ಅವರ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 

ರೈತ ಸಂಘದ ಜಿಲ್ಲಾಧ್ಯಕ್ಷ ಮನು ಸೋಮಯ್ಯ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಜಾರಿಮಾಡುವ ಮೂಲಕ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಕಾಯ್ದೆ ಬದಲಾವಣೆಯ ಹಿಂದಿನ ಉದ್ದೇಶವೇನು? ಎಂದು ಪ್ರಶ್ನಿಸಿದರು. ಕೊಡಗಿನ ಕಾಫಿ, ಕರಿಮೆಣಸು ಬೇರೆಡೆಗೆ ರಫ್ತಾಗುತ್ತಿದೆ. ಆದರೂ, ದರ ಪಾತಾಳಕ್ಕಿಳಿದಿದೆ‌. ಭ್ರಷ್ಟಾಚಾರ ಎಲ್ಲ ಕಡೆಗಳಲ್ಲಿ ನಡೆಯುತ್ತಿದೆ. ದಲ್ಲಾಳಿಗಳನ್ನು ನಿಯಂತ್ರಣ ಮಾಡಲು ಯೋಜನೆ ರೂಪಿಸುವ ಬದಲು ರೈತ ವಿರೋಧಿ ಕಾಯ್ದೆಯನ್ನು ತರುವುದು ಸರಿಯಲ್ಲ. ಕರಿಮೆಣಸಿಗೆ ರೂ 500 ಕನಿಷ್ಠ ರಫ್ತು ದರ ನಿಗದಿಯಾಗಿದ್ದರೂ ಅದು ಕೈ ಸೇರುತ್ತಿಲ್ಲ. ವಿಯೆಟ್ನಾಂ ಕರಿಮೆಣಸು ಕೊಡಗು ಮೆಣಸಿನೊಂದಿಗೆ ಮಿಶ್ರಿತವಾಗಿ ಮಾರಾಟ ಮಾಡಲಾಗುತ್ತಿದೆ. ರೈತ ಮುಖಂಡರನ್ನು ಕರೆಸಿ ಅವರೊಂದಿಗೆ ಚರ್ಚಿಸಿ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದರು. 

ದಲ್ಲಾಳಿ ಹಾವಳಿ ನಿಯಂತ್ರಣ ಕಡಿವಾಣ ಹೇರಲು ಸರ್ಕಾರ ಯೋಜನೆ ರೂಪಿಸಬೇಕು. ರೈತರ ಆತ್ಮಹತ್ಯೆ ಪ್ರಕರಣ ದೇಶದಲ್ಲಿ ನಡೆಯುತ್ತಿದೆ. ಕಾಯ್ದೆಗಳು ಪ್ರಾಯೋಗಿಕವಾಗಿ ಸರಿಯಾಗಿರಬೇಕು. ಡಾ.ಸ್ವಾಮಿನಾಥನ್ ವರದಿಯಲ್ಲಿ ಬೆಳೆಗಳು ಬೆಳೆಯುವ ಖರ್ಚಿನ ವರದಿ ಇದೆ. ಇದರ  ಆಧಾರದಲ್ಲಿ ಎಂಎಸ್ ಪಿ ನಿಗದಿ ಮಾಡಬೇಕು. ಇದರಿಂದ ರೈತನಿಗೆ ಸೂಕ್ತ ಬೆಂಬಲ ಬೆಲೆ ದೊರಕಲಿದೆ. ಕೇಂದ್ರ ಸರ್ಕಾರ ರೈತಪರ ನಿಲುವು ತೋರಬೇಕು. ಬೆಳೆಗೆ ದರ ನಿಗದಿ ಮಾಡುವವರು ಯಾರು?., ಹೇಗೆ? ಎಂದು ಸರ್ಕಾರ ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದರು. ರೈತ ಸಂಘ ಪ್ರಧಾನ ಕಾರಚಯದರ್ಶಿ ಚೆಟ್ರುಮಾಡ ಸುಜಯ್ ಮಾತನಾಡಿ, ಇದು ರೈತ ವಿರೋಧಿ ಕಾಯ್ದೆಯಾಗಿದ್ದು ಕೇಂದ್ರ ಸರ್ಕಾರ ರೈತ ವಿರೋಧಿ ನಡೆ ಅನುಸರಿಸುತ್ತಿದೆ. ಜಿಡಿಪಿ ಏರಿಕೆಗೆ ರೈತರು ಕಾರಣರಾಗಿದ್ದಾರೆ. ದೇಶದ ಆದಾಯ ಮೂಲವಾಗಿರುವ ಕೃಷಿಗೆ ಸೂಕ್ತ ಬೆಂಬಲ ಬೆಲೆ ದೊರಕುತ್ತಿಲ್ಲ. ಈ ಬಗ್ಗೆ ನಿರಂತರ ಹೋರಾಟ ರೂಪಿಸಿದರು ಸರ್ಕಾರ ಸ್ಪಂದಿಸುತ್ತಿಲ್ಲ. ಸ್ವಾಮಿನಾಥನ್ ವರದಿ ಜಾರಿಗೆ ಸರ್ಕಾರ ಹಿಂದೇಟೂ ಹಾಕುತ್ತಿದೆ. ಸುಗ್ರೀವಾಜ್ಞೆ ಮೂಲಕ ಯೋಜನೆ ಜಾರಿಗೆ ತರುವ ಉದ್ದೇಶ ಏಕೆ ಎಂದು ಪ್ರಶ್ನಿಸಿದರು‌. 

ಕಾಫಿ, ಕರಿಮೆಣಸು ಬೆಲೆ ಕುಸಿದಿದೆ. ಈ ಬಗ್ಗೆ ಸರ್ಕಾರ ಕ್ರಮವಹಿಸದೆ ರೈತರನ್ನು ಮತ್ತಷ್ಟು ಶೋಷಿಸುತ್ತಿದೆ ಎಂದರು. ರೈತ ಮುಖಂಡ ಪುಚ್ಚಿಮಾಡ ಅಶೋಕ್ ಮಾತನಾಡಿ, ರೈತರ ಬಗ್ಗೆ ಅನುಕಂಪ ಇರಲಿ. ರೈತರು ಕೂಡ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದರು. ದಸಂಸ ಸಂಚಾಲಕ ಪರಶುರಾಮ್ ಮಾತನಾಡಿ, ಕಾರ್ಮಿಕರು, ದಲಿತರು, ರೈತರ ಮೇಲೆ ನಿರಂತರ ಶೋಷಣೆಯಾಗುತ್ತಿದೆ. ಸಿರಿವಂತರ ಪರ ಸರ್ಕಾರ ಕೆಲಸ ಮಾಡುತ್ತ ನಂಬಿಕೆ ಕಳೆದುಕೊಂಡಿದೆ‌. ರೈತ ವಿರೋಧಿ ನಡೆ ಬಿಡದಿದ್ದರೆ. ರಕ್ತ ಕ್ರಾಂತಿ ಆಗುತ್ತದೆ ಎಂದು ಎಚ್ಚರಿಸಿದರು. ಜಮಾತ್ ಇಸ್ಲಾಮಿ ಹಿಂದ್ ಅಧ್ಯಕ್ಷ ಹನೀಫ್ ಮಾತನಾಡಿ, ಕಾಯ್ದೆ ಕಾರ್ಪೋರೆಟ್ ಕಂಪನಿಗಳ ಪರ ಇದೆ. ರೈತರ ಬೆನ್ನೆಲುಬು ಮುರಿಯುವ ಕೆಲಸವಾಗಿದೆ. ಬೆಳೆ ದಲ್ಲಾಳಿಗಳ ಕೈಯಲ್ಲಿ ಸಿಲುಕಿದೆ. ಈ ನಡುವೆ ಕಾರ್ಪೋರೆಟ್ ಕಂಪನಿಗಳಿಗೆ ನೀಡಿ ಮತ್ತಷ ಸಮಸ್ಯೆ ಸೃಷ್ಠಿಗೆ ಕಾರಣವಾಗಿದೆ. ರೈತ ವಿರೋಧಿ ಅಂಶ ಕೈಬಿಡಬೇಕು. ಮಧ್ಯವರ್ತಿಗಳಿಂದ ದೂರ ಮಾಡಿ ನೇರ ಮಾರುಕಟ್ಟೆ ಸೃಷ್ಠಿಸಿ ಉತ್ತಮ ಬೆಲೆ ದೊರಕಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು. 

ಈ ಸಂದರ್ಭ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೇಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪಂಡ ಪ್ರವೀಣ್, ಹುದಿಕೇರಿ ಹೋಬಳಿ ಅಧ್ಯಕ್ಷ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಕಂಬ ಕಾರ್ಯಪ್ಪ, ಮುಖಂಡರಾದ ಪುಚ್ಚಿಮಾಡ ಅಶೋಕ್, ಮಹೇಶ್, ತೀತ್ರಮಾಡ ರಾಜ, ಅಶೋಕ್, ಝಾಕು, ಗಿರೀಶ, ದಿನೇಶ್, ಚೆಪ್ಪುಡೀರ ರೋಶನ್, ಎಂ.ಬಿ ಅಶೋಕ್, ರಮೇಶ್, ದಿನೇಶ್, ಗಾಣಗಂಡ ಉತ್ತಯ್ಯ, ಕಾಯಮಂಡ ಡಾಲಿ, ಜಯಪ್ರಕಾಶ್ ಇದ್ದರು. ಪ್ರತಿಭಟನೆ ವೇಳೆ ಪೊಲೀಸರು ಮತ್ತು ರೈತ ಸಂಘದವರ ನಡುವೆ ಮಾತಿನ ಚಕಮಕಿ ನಡೆಯಿತು. 

ರಸ್ತೆ ತಡೆ ಮಾಡುವ ವೇಳೆ ಪೊಲೀಸರು ಮಾಡದಂತೆ ಹೇಳಿದಾಗ ರೈತ ಸಂಘದವರು ಪೊಲೀಸ್ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಜನರಿಗೆ ತೊಂದರೆ ಮಾಡುವುದಿಲ್ಲ, ರೈತರ ಹೋರಾಟ ಹತ್ತಿಕ್ಕಬೇಡಿ ಎಂದು ಪ್ರತಿಭಟನ ನಿರತರು ಆಕ್ರೋಶ ಹೊರಹಾಕಿದರು. ಬಳಿಕ  ಡಿವೈಎಸ್ಪಿ ಬಾರಿಕೆ ದಿನೇಶ್ ಮದ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮೈಸೂರಿನಲ್ಲಿ ರಸ್ತೆ ತಡೆದು ಪ್ರತಿಭಟನೆ; ಮೈಸೂರಿನಲ್ಲಿ ಭಾರತ್ ಬಂದ್ ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು ಬೆಳ್ಳಂ ಬೆಳಿಗ್ಗೆ ಅನ್ನದಾತರು ರಸ್ತೆಗಿಳಿದು ರೈತ ವಿರೋದಿ ಕಾಯ್ದೆಗಳ ವಿರುದ್ದ ಹೋರಾಟಕ್ಕೆ ಮುಂದಾಗಿದ್ದಾರೆ. ರೈತ ಕಾರ್ಮಿಕ ಹಾಗೂ ದಲಿತ ಸಂಘಟನೆಗಳ ಐಖ್ಯ ಹೋರಾಟ ಸಮಿತಿಯಿಂದ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಎರಡು ದ್ವಾರದಲ್ಲಿ ಬಸ್ ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಲಾಗಿದ್ದು ನಂತರ ರಸ್ತೆ ಬದಿಯಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಮೆರೆವಣಿಗೆ ಮೂಲಕ ಮೈಸೂರು ಪ್ರಮುಖ ರಸ್ತೆಗಳಾದ ಅಶೋಕ ರಸ್ತೆ , ಟೌಲಾನ್ ರಸ್ತೆ ಸಯಾಜಿ ರಸ್ತೆ ಹಾಗೂ ದೇವರಾಜ ಮಾರುಕಟ್ಟೆಯನ್ನು ಪ್ರತಿಭಟನಾಕರರು ಮುಚ್ಚಿಸಿದರು. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನೆಡೆಯದಂತೆ ಬಿಗಿ ಪೋಲಿಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.


 ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಉಂಟಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೋರಾಟಗಾರರಿಗೆ ಪೋಲಿಸ್ ಇಲಾಖೆ ಎಚ್ಚರಿಕೆ ನೀಡಿದ್ದರು ಮತ್ತೊಂದೆಡೆ ಮೈಸೂರಿನಿಂದ ವಿವಿದೆಡೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ನೂರಾರು ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿದ್ದು ಪ್ರಯಾಣಿಕರು  ಹೈರಾಣಗಿದ್ದರು. ಭಾರತ್ ಬಂದ್ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿದೆ. ಬಹುತೇಕ ಸಂಘಟನೆಗಳು ಬಂದ್ ಗೆ ನೈತಿಕ ಬೆಂಬಲ ನೀಡಿವೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬಳ್ಳಾರಿ ನಗರದ ಗಡಗಿ ಚೆನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಒತ್ತಾಯ ಪೂರ್ವಕ ಬಂದ್ ಮಾಡದಂತೆ, ಅಹಿತಕರ ಘಟನೆ ನಡೆಯದಂತೆ ಡಿಎಆರ್ ತುಕಡಿಗಳೊಂದಿಗೆ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

ಬೆಂಗಳೂರಿನಲ್ಲಿ ಬಂದ್ ಗಿಲ್ಲ ಕಿಮ್ಮತ್ತು, ಜನ ಜೀವನ ಸಾಮಾನ್ಯ; 10 ಸಾವಿರ ರೈತರಿಂದ ರ್ಯಾಲಿ
ಭಾರತ್‌ ಬಂದ್‌ ಕರೆಗೆ ವಿವಿಧ ಸಂಘಟನೆಗಳು ಸೇರಿದಂತೆ ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿದ್ದು, ಬೆಂಗಳೂರಿನ ಟೌನ್‌ಹಾಲ್‌ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ಐಕ್ಯಾ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ್ಯಾಲಿಯಲ್ಲಿ ಸುಮಾರು 10 ಸಾವಿರ ರೈತರು ಪಾಲ್ಗೊಂಡಿದ್ದರು. ಟೌನ್ ಹಾಲ್ ನಿಂದ ರ್ಯಾಲಿ ನಡೆಸಿದ ಪರಿಣಾಮ ಮೌರ್ಯ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಕಾರ್ಪೊರೇಷನ್ ಸರ್ಕಲ್ ನಲ್ಲಿ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು.

ಕುರುಬೂರು ಶಾಂತಕುಮಾತ್ ಮತ್ತು ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ವೃತ್ತದಿಂದ ಹೊರಟ ರೈತರು, ಮೈಸೂರು ಬ್ಯಾಂಕ್ ವೃತ್ತದ ತನಕ ಜಾಥಾ ನಡೆಸಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೂ, ರೈತ ಮತ್ತು ದಲಿತ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಸಾಥ್ ನೀಡಿದ್ದರು. ಜಾಥಾ ಮುಂದುವರಿಸದಂತೆ ಪೊಲೀಸರು ತಡೆದ ಕಾರಣ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರೈತರೊಬ್ಬರು ಪೊಲೀಸರ ಕಾಲಿಗೆ ಎರಗಿ ಜಾಥಾ ಮುಂದುವರಿಸಲು ಅವಕಾಶ ಕೋರಿದರು. ಕೆಲವರು ರಸ್ತೆಯಲ್ಲೇ ಉರುಳು ಸೇವೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರೊಬ್ಬರು ಅಸ್ವಸ್ಥಗೊಂಡರು. ಮತ್ತೊಂದೆಡೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದ ತನಕವೂ ರೈತರು ಮೆರವಣಿಗೆ ನಡೆಸಿದರು. ರೈತರ ಈ ಹೋರಾಟ ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋರಾಟದಲ್ಲಿ ಭಾಗವಹಿಸಿದ್ದರು.

ಉಳಿದಂತೆ  ಕೆ.ಆರ್‌.ಮಾರುಕಟ್ಟೆ ಸೇರಿ ಎಲ್ಲೆಡೆ ವ್ಯಾಪಾರ ವಹಿವಾಟು, ವಾಹನ ಸಂಚಾರ ಎಂದಿನಂತೆಯೇ ಇತ್ತು. ರೈತರ ಪ್ರತಿಭಟನೆಯಿಂದ ಕೆಲ ರಸ್ತೆಗಳಲ್ಲಿ ಸ್ವಲ್ಪ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು. ಆದರೆ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ಸಂಚಾರಗಳು ಎಂದಿನಂತೆ ಇದ್ದವು. ಆಟೋ ಮತ್ತು ಕ್ಯಾಬ್ ಸೇವೆಗಳೂ ಕೂಡ ಅಭಾದಿತವಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com