ಸರ್ಕಾರಿ ಕಚೇರಿಗಳಿಗಾಗಿ 50 ಮಹಡಿಗಳ ಅವಳಿಗೋಪುರ ನಿರ್ಮಾಣ: ಗೋವಿಂದ ಕಾರಜೋಳ

ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಸದುದ್ದೇಶದಿಂದ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಆನಂದರಾವ್ ಸರ್ಕಲ್ ಬಳಿ 50 ಮಹಡಿಗಳ ಅವಳಿಗೋಪುರವನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ. 
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

ಬೆಂಗಳೂರು: ಬಾಡಿಗೆ ಕಟ್ಟಡಗಳಲ್ಲಿರುವ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಸದುದ್ದೇಶದಿಂದ ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಆನಂದರಾವ್ ಸರ್ಕಲ್ ಬಳಿ 1250 ಕೋಟಿ ರೂ. ವೆಚ್ಚದ ಸುಸಜ್ಜಿತ  50 ಮಹಡಿಗಳ ಅವಳಿಗೋಪುರವನ್ನು ನಿರ್ಮಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ. 

ಉದ್ದೇಶಿತ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಹಲವು ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಇದನ್ನು ಮನಗಂಡು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ,  2020-21 ನೇ ಸಾಲಿನ ಆಯವ್ಯಯದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಕಳೆದ ಸಚಿವ ಸಂಪುಟದಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ಈ ಪ್ರದೇಶ ವಿಧಾನಸೌಧ, ವಿಕಾಸಸೌಧ, ಮೆಜೆಸ್ಟಿಕ್, ರೈಲ್ವೆ ನಿಲ್ದಾಣ, ಮೆಟ್ರೋ ನಿಲ್ದಾಣಕ್ಕೆ ಸಮೀಪದಲ್ಲಿರುವುದರಿಂದ ನೌಕರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಪಿಪಿಪಿ ಮಾದರಿಯಲ್ಲಿ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್ (ಎನ್‍ಬಿಸಿಸಿ) ಸಹಭಾಗಿತ್ವದಲ್ಲಿ ಈ ಕಾಮಗಾರಿಯನ್ನು  ಅನುಷ್ಠಾನಗೊಳಿಸಲಾಗುವುದು. 8.5 ಎಕರೆ ಸರ್ಕಾರಿ ನಿವೇಶನದಲ್ಲಿ 23.94 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ಈ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುವುದು.  ಶೇ. 60: 40 ಅನುಪಾತದಲ್ಲಿ ಭಾಗಶ: ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಎನ್‍ಬಿಸಿಸಿಗೆ  30 ವರ್ಷಗಳ ಲೀಸ್ ನೀಡಲಾಗುತ್ತಿದೆ. ಈ ಸಂಬಂಧ ಎನ್‍ಬಿಸಿಸಿ ಅವರೊಂದಿಗೆ ಶೀಘ್ರವಾಗಿ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. 

ಶೇ. 60 ರಷ್ಟು ಕಟ್ಟಡ ಪ್ರದೇಶವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು. ರಾಜ್ಯ ಸರ್ಕಾರಕ್ಕೆ ಯಾವುದೇ ವೆಚ್ಚವಿಲ್ಲದೇ ಕಟ್ಟಡ ನಿರ್ಮಾಣ ವಾಗುತ್ತದೆ. ಕಟ್ಟಡ ನಿರ್ವಹಣೆಯ ವೆಚ್ಚವನ್ನು ಕಟ್ಟಡದ ವಾಸಿಗಳಿಂದಲೇ ಭರಿಸಲು ಉದ್ದೇಶಿಸಿರುವುದರಿಂದ ನಿರ್ವಹಣೆಯ ವೆಚ್ಚವೂ ಉಳಿಕೆಯಾಗಲಿದೆ.  ಯಾವುದೇ ವೆಚ್ಚವಿಲ್ಲದೇ ಸರ್ಕಾರಕ್ಕೆ 263 ಕೋಟಿ ರೂ. ನಿವ್ವಳ ಲಾಭವಾಗಲಿದೆ. ಈ ಕಾಮಗಾರಿಯನ್ನು 2 ವರ್ಷಗಳ ಅವಧಿಯಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. 

ಇಲ್ಲಿರುವ 1940 ಕ್ಕಿಂತಲೂ ಹಿಂದೆ ನಿರ್ಮಿಸಲಾದ ಲೋಕೋಪಯೋಗಿ ಇಲಾಖೆಯ ಕಟ್ಟಡಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಟ್ಟಡಗಳು ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳನ್ನು ಶೀಘ್ರವಾಗಿ  ತೆರವುಗೊಳಿಸಲಾಗುವುದು ಎಂದು ಗೋವಿಂದ ಕಾರಜೋಳ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com