ಹರಾಜು ಹಾಕಿದರೆ ಅಂತಹ ಗ್ರಾಮ ಪಂಚಾಯತ್ ಸ್ಥಾನಗಳ ಆಯ್ಕೆ ಅನೂರ್ಜಿತ: ಚುನಾವಣಾ ಆಯೋಗ ಎಚ್ಚರಿಕೆ

ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸ್ಥಾನಗಳನ್ನು ಹರಾಜು ಹಾಕುವ, ಚುನಾವಣಾ ನಿಯಮಗಳಿಗೆ ವಿರುದ್ಧವಾದ ಸ್ಥಾನಗಳ ಆಯ್ಕೆಯನ್ನೇ ಅಸಿಂಧುಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.
ಚುನಾವಣಾ ಆಯೋಗ
ಚುನಾವಣಾ ಆಯೋಗ

ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಂಚಾಯತ್ ಸ್ಥಾನಗಳನ್ನು ಹರಾಜು ಹಾಕುವ, ಚುನಾವಣಾ ನಿಯಮಗಳಿಗೆ ವಿರುದ್ಧವಾದ ಸ್ಥಾನಗಳ ಆಯ್ಕೆಯನ್ನೇ ಅಸಿಂಧುಗೊಳಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಕೆ ನೀಡಿದೆ.

ಯಾವುದೇ ಸ್ಥಾನಗಳನ್ನು ಹರಾಜು ಹಾಕಬಾರದು. ಈ ರೀತಿಯ ಪ್ರಕರಣಗಳು ದೃಢಪಟ್ಟರೆ ಅಂತಹ ಸ್ಥಾನಗಳ ಚುನಾವಣೆಯನ್ನು ರದ್ದುಮಾಡಲು ಅವಕಾಶವಿದ್ದು, ಇಂತಹ ಆಯ್ಕೆ ಯಾವುದೇ ಕಾರಣಕ್ಕೂ ಊರ್ಜಿತವಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಚುನಾವಣಾ ನಿಯಮಗಳಿಗೆ ವಿರುದ್ಧವಾಗಿ ಹರಾಜು ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನಿಯಮಬದ್ಧವಾಗಿ ಅಂದರೆ ಅವಿರೋಧವಾಗಿ ಆಯ್ಕೆಯಾಗಿದ್ದರೆ ಅಂತಹ ಸ್ಥಾನಗಳು ಊರ್ಜಿತವಾಗುತ್ತದೆ. ಇಂತಹ ಆಯ್ಕೆಗಳಿಗೆ ಕಾನೂನಿನ ಸಮ್ಮತಿ ದೊರೆಯುತ್ತದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯಾವುದೇ ಸ್ಥಾನಗಳನ್ನು ಹರಾಜು ಹಾಕುವುದು ಸರಿಯಲ್ಲ ಎಂದು ಆಯೋಗ ತಿಳಿಸಿದೆ.

ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಆಯೋಗ ಸ್ಪಷ್ಟ ನಿರ್ದೇಶನ ನೀಡಿದೆ. ಪ್ರಜಾಪ್ರತಿನಿಧಿ ಕಾಯ್ದೆ, ಗ್ರಾಮ ಸ್ವರಾಜ್ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಯೋಗ ಸೂಚಿಸಿದೆ. ಹರಾಜು ಹಾಕುವುದು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎನ್ನುವ ಮೂಲ ತತ್ವಕ್ಕೆ ವ್ಯತಿರಿಕ್ತವಾಗಿದೆ ಎಂದು ಆಯೋಗ ಹೇಳಿದೆ.

ಪ್ರತಿನಿತ್ಯ ಹರಾಜು ಹಾಕುತ್ತಿರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಬಸವರಾಜು ಎಲ್ಲಾ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ, ಈ ರೀತಿ ಹರಾಜು ಹಾಕುವ, ಆಮೀಷ ಒಡ್ಡುವ, ಚುನಾವಣಾ ನಿಯಮಗಳನ್ನು ಮೀರಿ ಪಂಚಾಯತ್ ಗಳಿಗೆ ಆಯ್ಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಈ ಕುರಿತು ಅರಿವು ಮೂಡಿಸುವ ಕೆಲಸ ಮಾಡುವಂತೆ ಆಯೋಗ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಬಳಿಕ ಹರಾಜು ಹಾಕುವ ಹೀನ ಕ್ರಮಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಂಡು ಕಟ್ಟುನಿಟ್ಟಿನ ಸಂದೇಶ ನೀಡುತ್ತಿದ್ದಾರೆ. ಈಗಾಗಲೇ ಬಳ್ಳಾರಿಯಲ್ಲಿ 13, ಕಲಬುರಗಿಯಲ್ಲಿ 5 ಜನರ ವಿರುದ್ಧ ಮೊಕದ್ದಮೆ ಹೂಡಲಾಗಿದೆ. ಹಾಸನದಲ್ಲಿ ತನಿಖೆ ನಡೆಸಲಾಗಿದ್ದು, ಮಂಡ್ಯದಲ್ಲಿ ಸಹ ಪ್ರಕರಣ ದಾಖಲಾಗಿದೆ. ತುಮಕೂರಿನ ಅಮೃತಹಳ್ಳಿಯ ಪಡುವಗೆರೆ ಪಂಚಾಯತ್ ನಲ್ಲಿ ಪಂಚಾಯತ್ ಸ್ಥಾನಕ್ಕಾಗಿ ಕೋಟಿಗಟ್ಟಲೆ ಹರಾಜು ಹಾಕಿರುವ ಘಟನೆ ಬಗ್ಗೆಯೂ ಕಠಿಣ ಕ್ರಮಕ್ಕೆ ಆಯೋಗ ನಿರ್ದೇಶನ ನೀಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ರಾಜ್ಯದ 60004 ಗ್ರಾಮ ಪಂಚಾಯತ್ ಗಳ ಪೈಕಿ 162 ಗ್ರಾಮ ಪಂಚಾಯತ್ ಗಳ ಅವಧಿ ಡಿಸೆಂಬರ್ ನಂತರ ಮುಕ್ತಾಯಗೊಳ್ಳಲಿದೆ. 74 ಪಂಚಾಯತ್ ಗಳು ಪಟ್ಟಣ ಪಂಚಾಯತ್ ಗಳಾಗಿ ಮೇಲ್ದರ್ಜೆಗೇರುತ್ತಿವೆ. ಹೀಗಾಗಿ ಉಳಿದ 35,884 ಕ್ಷೇತ್ರಗಳಿಗೆ 92,121 ಗ್ರಾಮ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಕೆಲವೆಡೆ ಹರಾಜು ಹಾಕುವುದು ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಕ್ರಮಗಳನ್ನು ತಡೆಗಟ್ಟಲು ತಾಲ್ಲೂಕು ಮತ್ತು ಹೊಬಳಿವಾರು ಎಂ.ಸಿ.ಸಿ. ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಗೂ ಸಹ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com