ಸಾರಿಗೆ ನೌಕರರ ಏಕಾಏಕಿ ಮುಷ್ಕರ: ಸೇವೆಯಲ್ಲಿ ಸ್ಥಗಿತ; ಸಾರ್ವಜನಿಕರ ಪರದಾಟ

ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಗೆ ಇಳಿದಿದ್ದು, ಇದರಿಂದ ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ನಾಲ್ಕೂ ಸಾರಿಗೆ ನಿಗಮಗಳ ನೌಕರರು ಪ್ರತಿಭಟನೆಗೆ ಇಳಿದಿದ್ದು, ಇದರಿಂದ ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ ಸಾರಿಗೆ ಸೇವೆಯಲ್ಲಿ ವ್ಯತ್ಯಯವಾಗಿದೆ.

ಇದೇ ಬೇಡಿಕೆ ಮುಂದಿಟ್ಟು ನಿನ್ನೆ ಬೆಂಗಳೂರಿನಲ್ಲಿ ನೌಕರರು ಪ್ರತಿಭಟನೆ ನಡೆಸಿದಾಗ ಆ ನೌಕರರನ್ನು ಬಂಧಿಸಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಇಂದು ಏಕಾಏಕಿ ನೌಕರರು ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆಗೆ ಇಳಿದಿದ್ದಾರೆ.

ಮೆಜೆಸ್ಟಿಕ್, ಶಾಂತಿನಗರ ಸೇರಿದಂತೆ ವಿವಿಧ ಬಸ್ ನಿಲ್ದಾಣಗಳಿಂದ ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಹೊರಟಿಲ್ಲ. ಡಿಪೋಗಳಲ್ಲಿದ್ದ ಬಿಎಂಟಿಸಿ ಬಸ್‌ಗಳನ್ನು ನೌಕರರು ಹೊರಕ್ಕೆ ತೆಗೆಯದೆ ಮುಷ್ಕರ ನಡೆಸುತ್ತಿದ್ದಾರೆ. ಬಸ್‌ ಸಂಚಾರ ಇಲ್ಲದ ಕಾರಣ ಪ್ರಯಾಣಿಕರು ಪರದಾಡುತ್ತಿದ್ದಾರೆ.

ಕೆಎಸ್ಆರ್ಟಿಸಿ ಸಿಬ್ಬಂದಿ ಮುಷ್ಕರದ ಹೇಳಿಕೆ ಕೊಟ್ಟಿಲ್ಲ. ಸಾರಿಗೆ ವ್ಯವಸ್ಥೆಗೆ ತೊಂದರೆಯಾಗದಂತೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ. ಕೋವಿಡ್-19ರ ಸಂಕಷ್ಟ ಸಮಯದಲ್ಲಿ ನಮ್ಮಿಂದ ಜನರಿಗೆ ತೊಂದರೆಯಾಗುವುದು ಬೇಡ ಎಂದು ನಮ್ಮ ಸಚಿವರು ಈಗಾಗಲೇ ನೌಕರರಿಗೆ ಮನವಿ ಮಾಡಿದ್ದಾರೆ, ತಾವು ಕೂಡ ಮನವಿ ಮಾಡುತ್ತೇನೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಹೋರಾಟದ ಸಮಯದಲ್ಲಿ ಬಂಧಿಸಿದ ನೌಕರರನ್ನು ಪೊಲೀಸರು ರಾತ್ರಿ 9 ಗಂಟೆ ವೇಳೆಗೆ ಬಿಡುಗಡೆ ಮಾಡಿದ್ದಾರೆ. ನಮ್ಮ ಬೇಡಿಗೆಗೆ ಸರ್ಕಾರ ಸ್ಪಂದಿಸುವ ತನಕ ಈ ಹೋರಾಟ ಮುಂದುವರಿಯಲಿದೆ. ಅಲ್ಲಿಯ ತನಕ ಬಸ್ ಸಂಚಾರ ಆರಂಭ ಆಗುವುದಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ಕೋಲಾರದಲ್ಲಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. 

ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯಿಸಿ, ಕೋವಿಡ್ -19 ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತಿದೆ. ಇಂತಹ ಸಂದರ್ಭದಲ್ಲಿ ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ಹಾಜರಾಗಬೇಕು. ಸಾರ್ವಜನಿಕರಿಗೆ ತೊಂದರೆ ನೀಡಬಾರದು ಎಂದು ಮನವಿ ಮಾಡಿದ್ದಾರೆ.

ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಪ್ರತಿಕ್ರಿಯಿಸಿ, ನೌಕರರ ಸಮಸ್ಯೆ ಆಲಿಸುತ್ತಿದ್ದೇವೆ, ಅವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ. ಕೋವಿಡ್ ಸಂದರ್ಭದಲ್ಲಿಯೂ ನೌಕರರಿಗೆ ಸರ್ಕಾರ ವೇತನ ಕಡಿತ ಮಾಡಿಲ್ಲ. ನಿಗಮ ಮತ್ತು ಸರ್ಕಾರದಿಂದ ಪೂರ್ಣ ವೇತನ ನೀಡಿದ್ದೇವೆ. ಇದನ್ನು ನೌಕರರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ನೌಕರರ ಬೇಡಿಕೆ ಬಗ್ಗೆ ಅಧಿಕಾರಿಗಳೊಂದಿಗೆ ತಕ್ಷಣ ಸಭೆ ನಡೆಸುವುದಾಗಿಯೂ ಸಚಿವರು ಭರವಸೆ ನೀಡಿದರು.

ಮಧ್ಯಾಹ್ನ 12 ಗಂಟೆಯೊಳಗೆ ಸರ್ಕಾರ ಸ್ಪಂದಿಸಲಿದ್ದರೆ ಫ್ರೀಡಂ ಪಾರ್ಕ್ ಗೆ ತೆರಳಿ ಧರಣಿ ನಡೆಸುವುದಾಗಿ ನೌಕರರು ಎಚ್ಚರಿಕ ನೀಡಿದ್ದಾರೆ.

ಈ ಮಧ್ಯೆ ಬಸ್ ಚಲಾಯಿಸಿ ಎಂದು ಹೇಳಿದ ಪ್ರಯಾಣಿಕನ ಮೇಲೆ ನೌಕರರು ಹಲ್ಲೆ ನಡೆಸಿದ ಘಟನೆಯೂ ನೆಲಮಂಗಲದಲ್ಲಿ ನಡೆದಿದೆ. ರಾಜ್ಯಾದ್ಯಂತ ನೌಕರರ ಮುಷ್ಕರದಿಂದ ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com