ಕೃಷಿ ಕಾಯ್ದೆ: ಜನರಲ್ಲಿ ಜಾಗೃತಿ ಮೂಡಿಸಲು ಶೀಘ್ರದಲ್ಲೇ ಬಿಜೆಪಿಯಿಂದ ಅಭಿಯಾನ

ಕೇಂದ್ರದ 3 ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ಕುರಿತ ರೈತರ ಅನುಮಾನ ನಿವಾರಿಸಲು ಮತ್ತು ಕಾಯ್ದೆಯನ್ನು ಸಮರ್ಥಿಸುವ ಸಲುವಾಗಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. 
ಸಚಿವ ಆರ್.ಅಶೋಕ್
ಸಚಿವ ಆರ್.ಅಶೋಕ್

ಬೆಂಗಳೂರು: ಕೇಂದ್ರದ 3 ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿರೈತರು ನಡೆಸುತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಕಾಯ್ದೆ ಕುರಿತ ರೈತರ ಅನುಮಾನ ನಿವಾರಿಸಲು ಮತ್ತು ಕಾಯ್ದೆಯನ್ನು ಸಮರ್ಥಿಸುವ ಸಲುವಾಗಿ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ. 

ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್ ಹಾಗೂ ಎಸ್'ಟಿ ಸೋಮಶೇಖರ್ ಅವರು, ನಾಲ್ಕು ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಅಭಿಯಾನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಲಿದ್ದಾರೆಂದು ಹೇಳಿದ್ದಾರೆ. 

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಕುರಿತಂತೆ ಮಾತನಾಡಿದ ಅಶೋಕ್ ಅವರು, ರೈತರು ಭೂಮಿಯನ್ನು ಮಾರಲು ಮುಂದಾದರೆ, ಮಧ್ಯವರ್ತಿಗಳಿಗೆ ಹೆಚ್ಚೆಚ್ಚು ಲಾಭವಾಗುತ್ತಿತ್ತು. ಪ್ರಸ್ತುತ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಕಾಯ್ದೆಗಳೂ ರೈತರ ಪರವಾಗಿಯೇ ಇವೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಮಾಡುವುದನ್ನು ಕಾಂಗ್ರೆಸ್ ಪ್ರಾರಂಭಿಸಿತು. ಇದೀಗ ನಾವು ಜಾರಿಗೆ ತಂದರೆ ಪ್ರತಿಭಟನೆ ನಡೆಸುತ್ತಿದ್ದಾರೆಂದು ತಿಳಿಸಿದ್ದಾರೆ. 

ಇದೇ ವೇಳೆ ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಮಾತನಾಡಿದ ಅವರು, ನಮ್ಮ ದೇಶದಲ್ಲಿ ಗೋವಿಗೆ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ಸಿದ್ದರಾಮಯ್ಯ ಅವರು ವಯಸ್ಸಾದ ಹಸುಗಳನ್ನು ತಂದು ಬಿಜೆಪಿ ಕಚೇರಿಗೆ ಬಿಡಿ ಎಂದಿದ್ದಾರೆ. ವಯಸ್ಸಾದ ಹಸು, ವಯೋವೃದ್ಧರು ನಮ್ಮ ಬಳಿಗೇ ತಂದು ಬಿಡಿ. ಅವರನ್ನು ನಾವೇ ನೋಡಿಕೊಳ್ಳುತ್ತೇವೆ. ಕಾಯ್ದೆಗೆ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುವಂತೆ ಮಾಡಲು ಕಾಂಗ್ರೆಸ್ ಉದ್ದೇಶಿಸಿದೆ. ಈ ರೀತಿ ಆಗಲು ನಾವು ಬಿಡುವುದಿಲ್ಲ. ಹೀಗಾಗಿ ನಾವು ವಿಧಾನಪರಿಷತ್ ನಲ್ಲಿ ಮಸೂದೆ ಮಂಡನೆ ಮಾಡದಿರಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿ, ಕಾಯ್ದೆ ಜಾರಿಗೆ ತರುತ್ತೇವೆ ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com