ಈ ವರ್ಷ ಹೊಸ ವರ್ಷಾಚರಣೆ ಇಲ್ಲ, ಸಾರ್ವಜನಿಕ ಸಮಾರಂಭದಲ್ಲಿ ಜನರ ಸಂಖ್ಯೆ ಮಿತಿಗೆ ನಿರ್ಬಂಧ

ಕೋವಿಡ್‌ ಕಾರಣದಿಂದಾಗಿ ಹೊಸ ವರ್ಷಾಚರಣೆಯ ಬದಲು ಈ ವರ್ಷ ಶೋಕಾಚರಣೆಯನ್ನಾಗಿ ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. 
ಕೆ.ಸುಧಾಕರ್
ಕೆ.ಸುಧಾಕರ್

ಬೆಂಗಳೂರು: ಕೋವಿಡ್‌ ಕಾರಣದಿಂದಾಗಿ ಹೊಸ ವರ್ಷಾಚರಣೆಯ ಬದಲು ಈ ವರ್ಷ ಶೋಕಾಚರಣೆಯನ್ನಾಗಿ ಮಾಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದ್ದಾರೆ. 

ಟಾಸ್ಕ್ ಫೋರ್ಸ್ ಸಭೆ ನಡೆಸಿ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ರಾಜ್ಯದಲ್ಲಿ ಎಲ್ಲಿಯೂ ಹೊಸ ವರ್ಷದ ಸಂಭ್ರಮಾಚರಣೆ ನಡೆಸುವಂತಿಲ್ಲ ಎಂದು ಸುಧಾಕರ್ ತಿಳಿಸಿದ್ದಾರೆ.

2020 ಕೋವಿಡ್‌ನಿಂದಾಗಿ ಎಲ್ಲರಿಗೂ ಶೋಕಾಚರಣೆಯಂತಾಗಿದೆ. ಕೋವಿಡ್‌ಗೆ ತುತ್ತಾಗಿ ಹಲವರು ಸಾವಿಗೀಡಾಗಿದ್ದಾರೆ. ಹಾಗಾಗಿ ಈ ಬಾರಿಯ ಹೊಸ ವರ್ಷ ಆಚರಿಸುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು.

ಕೊರೋನಾ ಎರಡನೇ ಅಲೆ ಬರುವ ಹಿನ್ನೆಲೆಯಲ್ಲಿ ತಪಾಸಣೆ ಹೆಚ್ಚು ಮಾಡುವಂತೆ 10 ಜಿಲ್ಲೆಗಳಿಗೆ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲೆಗೆ ಗುರಿ ನೀಡಲಾಗಿದ್ದು,ಅದನ್ನು ಕಡ್ಡಾಯವಾಗಿ ತಲುಪಬೇಕು. ಅಷ್ಟೇ ಅಲ್ಲದೆ, ಎರಡು ತಿಂಗಳು ಸಾಮಾಜಿಕ ಕಾರ್ಯಕ್ರಮ, ಮದುವೆ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ತಿಳಿಸಿದರು.

ಮುಂಜಾಗರೂಕತಾ ಕ್ರಮವಾಗಿ ಡಿಸೆಂಬರ್ 20 ರಿಂದ ಜನವರಿ 2 ವರೆಗೆ ನಡೆಯಲಿರುವ ಸಭೆ ಸಮಾರಂಭಕ್ಕೆ 200 ಜನರು ಸೀಮಿತವಾಗಿರಬೇಕು. ಎರಡನೇ ಅಲೆ ಆರಂಭವಾದರೆ ಆಕ್ಸಿಜನ್ ಜನರೇಟರ್ ಸಿದ್ದ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಹೋಟೆಲ್ ಹಾಗೂ ಪಬ್‌ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಪಾಸ್ ಪಡೆದುಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಕಳಿಸಿಕೊಡಲಾಗಿದ್ದು, ಅವರು ಅನುಮೋದನೆ ಕೊಟ್ಟ ಬಳಿಕ ನಿಮಯ ಜಾರಿಗೊಳಿಸಲಾಗುವುದು ಎಂದು ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.

ಮಾರಕ ಕೊರೊನಾ ವೈರಸ್ ಹಾವಳಿಯಿಂದಾಗಿ ನಾವು ಹಲವು ಆಪ್ತರನ್ನು ಕಳೆದುಕೊಂಡಿದ್ದೇವೆ. ‌ಹೀಗಾಗಿ ಈ ಬಾರಿ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವುದು ಬೇಡ ಎಂದು ಆರ್. ಅಶೋಕ್ ಮನವಿ ಮಾಡಿದರು. ಟಾಸ್ಕ್ ಫೋರ್ಸ್ ಸಮಿತಿಗೆ ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com