ಉಡುಪಿ: ಕೋಡಿ ಕಲ್ಯಾಣ ದಂಡೆ ಕೆಲಸ ಸ್ಥಗಿತ, ಗ್ರಾಮಸ್ಥರಿಂದ ಪಂಚಾಯತ್ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ!

ಜಿಲ್ಲೆಯ ಕೋಡಿ ಗ್ರಾಮ ಪಂಚಾಯತ್ ನ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪಂಚಾಯತ್ ಸರಹದ್ದಿನ ಒಳಗೆ ಕೋಡಿ ಕಲ್ಯಾಣದಲ್ಲಿ ಜೆಟ್ಟಿ ಕೆಲಸವನ್ನು ನಿಲ್ಲಿಸಿದ್ದಕ್ಕಾಗಿ ಪ್ರತಿಭಟಿಸಿ ಚುನಾವಣೆಗೆ ಬಹಿಷ್ಕಾರ ಹಾಕಲು ನಿಶ್ಚಯಿಸಿದ್ದಾರೆ.
ಕೋಡಿ ಕಲ್ಯಾಣ ದಂಡೆಯಲ್ಲಿ ಹೂಳು
ಕೋಡಿ ಕಲ್ಯಾಣ ದಂಡೆಯಲ್ಲಿ ಹೂಳು

ಉಡುಪಿ: ಜಿಲ್ಲೆಯ ಕೋಡಿ ಗ್ರಾಮ ಪಂಚಾಯತ್ ನ ಗ್ರಾಮಸ್ಥರು ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಪಂಚಾಯತ್ ಸರಹದ್ದಿನ ಒಳಗೆ ಕೋಡಿ ಕಲ್ಯಾಣದಲ್ಲಿ ಜೆಟ್ಟಿ ಕೆಲಸವನ್ನು ನಿಲ್ಲಿಸಿದ್ದಕ್ಕಾಗಿ ಪ್ರತಿಭಟಿಸಿ ಚುನಾವಣೆಗೆ ಬಹಿಷ್ಕಾರ ಹಾಕಲು ನಿಶ್ಚಯಿಸಿದ್ದಾರೆ.

ಕೋಡಿ ಕಲ್ಯಾಣ, ಕೋಡಿ ತಲೆ, ಕೋಡಿ ಹೊಸಬೆಂಗ್ರೆ ಮತ್ತು ಕೋಡಿ ಬೆಂಗ್ರೆ ನಿವಾಸಿಗಳು ಪಂಚಾಯತ್ ನ ಸರಹದ್ದಿಗೆ ಒಳಪಡುತ್ತಿದ್ದು, ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಜಿ ಜಗದೀಶ್ ಮತ್ತು ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ಬೇಡಿಕೆಯನ್ನು ಮೊದಲು ಈಡೇರಿಸಬೇಕು ಎಂದಿದ್ದಾರೆ.

ಹಲವಾರು ದೋಣಿಗಳು ಮಣ್ಣಿನಲ್ಲಿ, ನದಿಯ ಸಮೀಪ ಹೂತು ಹೋಗಿರುವುದರಿಂದ ತಮ್ಮ ಜೀವನೋಪಾಯಕ್ಕೆ ಕಷ್ಟವಾಗುತ್ತಿದೆ ಎಂದು ಇಲ್ಲಿನ ಮೀನುಗಾರರು ಆರೋಪಿಸುತ್ತಿದ್ದಾರೆ. 2017ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿ ಹೂಳು ತೆಗೆಯಲು 6 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದವು. ಮಂಗಳೂರು ಮೂಲದ ಯೋಜಕ ಇಂಡಿಯಾ ಪ್ರೈ ಲಿಮಿಟೆಡ್ ಕಂಪೆನಿ ಗುತ್ತಿಗೆ ಪಡೆದಿತ್ತು.

ಆದರೆ ಗುತ್ತಿಗೆ ಪಡೆದ ಕಂಪೆನಿ ಮಧ್ಯದಲ್ಲಿಯೇ ಕೆಲಸ ನಿಲ್ಲಿಸಿರುವುದರಿಂದ ಈಗ ಉಡುಪಿ ಜಿಲ್ಲಾ ಬಂದರು ಮತ್ತು ಮೀನುಗಾರಿಕಾ ಇಲಾಖೆ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದೆ. ಕೋಡಿ ಕಲ್ಯಾಣದಲ್ಲಿ ತಮ್ಮ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತದೆ ಎಂದು ಸಹ ಗ್ರಾಮಸ್ಥರು ಆರೋಪಿಸುತ್ತಾರೆ. 100 ಎಕರೆಗಿಂತಲೂ ಹೆಚ್ಚು ಭೂಮಿ, ಭತ್ತ, ಉದ್ದಿನ ಬೇಳೆ ಮತ್ತು ನೆಲಗಡಲೆ ಬೆಳೆಗಳು ನಾಶವಾಗಿವೆ ಎನ್ನುತ್ತಾರೆ ಗ್ರಾಮಸ್ಥ ಲಕ್ಷ್ಮಣ ಸುವರ್ಣ.

ಕಳೆದ ಶುಕ್ರವಾರ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಗ್ರಾಮಸ್ಥರು ಚುನಾವಣೆಗೆ ಬಹಿಷ್ಕಾರ ಹಾಕಿರುವುದರಿಂದ ತಾವು ಸ್ಪರ್ಧಿಸುವುದಿಲ್ಲ ಎಂದು ನಾಮಪತ್ರ ಸಲ್ಲಿಸಿದ್ದ 12 ಅಭ್ಯರ್ಥಿಗಳು ಹಿಂತೆಗೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com