ಹೆಚ್ಚಿನ ನೆರೆ ಪರಿಹಾರ ಬಿಡುಗಡೆ ಮಾಡಲು ಶಿಫಾರಸ್ಸು; ಕೇಂದ್ರ ತಂಡಕ್ಕೆ ಮುಖ್ಯಮಂತ್ರಿ ಮನವಿ

ಕೇಂದ್ರದಿಂದ ಹೆಚ್ಚಿನ ಅನುದಾನ ನೆರವು ಬಿಡುಗಡೆ ಮಾಡಲು ಶಿಫಾರಸ್ಸು ಮಾಡಲು ಮುಖ್ಯಮಂತ್ರಿಗಳ ಮನವಿ, ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಅಧ್ಯಯನ ನಡೆಸಲು ಆಗಮಿಸಿದ್ದ ರಮೇಶ್ ಕುಮಾರ್ ಗಂಟ ಅವರ ನೇತೃತ್ವದ ಕೇಂದ್ರ ಇಂಟರ್ ಮಿನಿಸ್ಟೀರಿಯಲ್ ತಂಡ
ಕೇಂದ್ರದಿಂದ ಹೆಚ್ಚಿನ ಅನುದಾನ ನೆರವು ಬಿಡುಗಡೆ ಮಾಡಲು
ಕೇಂದ್ರದಿಂದ ಹೆಚ್ಚಿನ ಅನುದಾನ ನೆರವು ಬಿಡುಗಡೆ ಮಾಡಲು

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಹಾನಿ ಎದುರಿಸಿರುವ ಜನತೆಗೆ ಪರಿಹಾರ ನೀಡುವುದಕ್ಕೆ ಹಾಗೂ ಹಾನಿಗೊಳಗಾಗಿರುವ ಮೂಲಸೌಕರ್ಯಗಳ ದುರಸ್ತಿ ಕಾಮಗಾರಿಗೆ ಅನುಕೂಲವಾಗುವಂತೆ ರಾಜ್ಯಕ್ಕೆ ನೆರವು ಬಿಡುಗಡೆ ಮಾಡಲು ಸಿಎಂ ಯಡಿಯೂರಪ್ಪ  ಕೇಂದ್ರ ಇಂಟರ್ ಮಿನಿಸ್ಟೀರಿಯಲ್ ತಂಡಕ್ಕೆ ಮನವಿ ಮಾಡಿದ್ದಾರೆ. 

ರಾಜ್ಯದಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಅಧ್ಯಯನ ನಡೆಸಲು ರಮೇಶ್ ಕುಮಾರ್ ಗಂಟ ಅವರ ನೇತೃತ್ವದ ಕೇಂದ್ರ ಇಂಟರ್ ಮಿನಿಸ್ಟೀರಿಯಲ್ (ಐಎಂಸಿಟಿ) ತಂಡ ಆಗಮಿಸಿದ್ದು, ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಅನುದಾನ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಖುದ್ದು, ಎರಡು ಬಾರಿ ವೀಡಿಯೋ ಸಂವಾದ ನಡೆಸಿ ಪರಿಸ್ಥಿತಿಯನ್ನು ಪರಿಶೀಲಿಸಿ ಪ್ರವಾಹ ಪರಿಸ್ಥಿತಿಯ ನಿರ್ವಹಣೆಗೆ ಎಲ್ಲ ನೆರವು ನೀಡಿದ್ದಕ್ಕಾಗಿ ಆಭಾರಿಯಾಗಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಎನ್.ಡಿ.ಆರ್ ಎಫ್ ನಿಂದ ಕೇಂದ್ರವು 577.84 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ ಎರಡನೇ ಇಂಟರ್ ಮಿನಿಸ್ಟೀರಿಯಲ್ ತಂಡವನ್ನು ರಾಜ್ಯಕ್ಕೆ ಕಳುಹಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. 

ಆಗಸ್ಟ್ ಮಾಹೆಯಲ್ಲಿ ಉಂಟಾದ ಪ್ರವಾಹದ ನಂತರ ರಾಜ್ಯದಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ 2 ಮತ್ತು 3ನೇ  ವಾರದಲ್ಲಿ ಭಾರಿ ಮಳೆ ಉಂಟಾಯಿತು. ಇದರೊಂದಿಗೆ ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚಿನ ನೀರು ಬಿಡುಗಡೆಯಾಗಿ ಒಂದೇ ವರ್ಷದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಭೀಮಾ ಮತ್ತು ಕೃಷ್ಣಾ ಜಲಾಶಯಗಳಲ್ಲಿ ಪ್ರವಾಹ ಉಂಟಾಯಿತು ಎಂದರು. 
ಪ್ರವಾಹ ಮತ್ತು ಭೂ ಕುಸಿತದಿಂದಾಗಿ 16 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.  ಮೂಲಭೂತ ಸೌಲಭ್ಯಗಳಿಗೆ ತೀವ್ರ ಹಾನಿಯುಂಟಾಗಿರುವುದಲ್ಲದೆ, 34, 794 ಮನೆಗಳಿಗೆ ಹಾನಿಯುಂಟಾಗಿದ್ದು, ಒಟ್ಟಾರೆ 15,410 ಕೋಟಿ ರೂ.ಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. 

ತಕ್ಷಣದ ಪರಿಹಾರವಾಗಿ ರಾಜ್ಯ ಸರ್ಕಾರವು 7.12 ಲಕ್ಷ ರೈತರಿಗೆ 551.14 ಕೋಟಿ ರೂ.ಗಳ ಇನ್‍ಪುಟ್ ಸಹಾಯಧನವನ್ನು ಹಂಚಿಕೆ ಮಾಡಿದೆ ಎಂದು ವಿವರಿಸಿದ ಮುಖ್ಯಮಂತ್ರಿಗಳು,  ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ 5 ಲಕ್ಷ ರೂ, ತೀವ್ರ ಹಾನಿಗೊಳಗಾದ ಮನೆಗಳಿಗೆ 3 ಲಕ್ಷ ರೂ.ಗಳು ಹಾಗೂ ಭಾಗಶ: ಹಾನಿಗೊಳಗಾದ ಮನೆಗಳಿಗೆ ರೂ.50 ಸಾವಿರಗಳ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ಒದಗಿಸುತ್ತಿದೆ.  ಈ ಮೊತ್ತವು ಎಸ್.ಡಿ.ಆರ್.ಎಫ್ ಮಾರ್ಗಸೂಚಿಗಿಂತಲೂ ಹೆಚ್ಚುವರಿಯಾಗಿ ರಾಜ್ಯದ ಅನುದಾನದಿಂದ ಭರಿಸಿದೆ.  ಈ ಸಾಲಿನಲ್ಲಿ 465 ಕೋಟಿ.ರೂ.ಗಳನ್ನು ಗೃಹ ನಿರ್ಮಾಣ ನೆರವಿಗಾಗಿ ಭರಿಸಲಿದೆ ಎಂದರು.  

ರಾಜ್ಯದಲ್ಲಿ ಪ್ರವಾಹದಿಂದ ಅಂದಾಜು 15410 ಕೋಟಿ ರೂ.ಗಳ ಹಾನಿಉಂಟಾಗಿರುವ ಹಿನ್ನೆಲೆಯಲ್ಲಿ ಸಂತ್ರಸ್ಥರಿಗೆ ಹಾಗೂ ಹಾನಿಗೊಳಗಾಗಿರುವ ಮೂಲಭೂತ ಸೌಕರ್ಯಗಳ ದುರಸ್ಥಿಗೆ ಐ.ಎಂ.ಸಿ.ಟಿ ತಂಡವು ಕೇಂದ್ರ ನೆರವನ್ನು ಒದಗಿಸಲು ಶಿಫಾರಸ್ಸು ಮಾಡಬೇಕೆಂದು ಮುಖ್ಯಮಂತ್ರಿಗಳು ತಿಳಿಸಿದರು. 
 
ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಾನೂನು ಹಾಗೂ‌‌ ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ‌ನೀರಾವರಿ‌ ಸಚಿವರಾದ  ಜೆ.ಸಿ.‌ಮಾಧುಸ್ವಾಮಿ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ,  ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್,  ರಾಜ್ಯ ಸರ್ಕಾರದ ವಿಶೇಷ ಕಾರ್ಯದರ್ಶಿ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com