ಬೇಡಿಕೆ ಈಡೇರಿಕೆ ಬಗ್ಗೆ ಲಿಖಿತವಾಗಿ ನೀಡಲು ಸಿದ್ಧ; ಲಕ್ಷ್ಮಣ ಸವದಿ, ಆರ್.ಅಶೋಕ
ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಅವುಗಳನ್ನು ಲಿಖಿತವಾಗಿ ನೀಡಲೂ ನಾವು ಸಿದ್ಧರಿದ್ದೇವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
Published: 14th December 2020 01:40 PM | Last Updated: 14th December 2020 01:40 PM | A+A A-

ಲಕ್ಷ್ಮಣ ಸವದಿ ಮತ್ತು ಆರ್ .ಅಶೋಕ
ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಅವುಗಳನ್ನು ಲಿಖಿತವಾಗಿ ನೀಡಲೂ ನಾವು ಸಿದ್ಧರಿದ್ದೇವೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ನೇತೃತ್ವದಲ್ಲಿ ಕಾರ್ಮಿಕರ ಪರವಾಗಿ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿದೆ. ದಯವಿಟ್ಟು ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಿ ಜನರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಹೇಳಿದರು.
ಕೆಎಸ್ ಆರ್ ಟಿಸಿ ಯೂನಿಯನ್ ಗೆ ಸೇರಿದ ಎಸ್ ಸಿ ಎಸ್ ಟಿ ಮುಖಂಡರು ಕರ್ತವ್ಯಕ್ಕೆ ಹಾಜರಾಗಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ, ಬೇಡಿಕೆ ಈಡೇರಿಕೆಗೆ ಬಗ್ಗೆ ಲಿಖಿತ ರೂಪದಲ್ಲಿ ಕೊಡಲು ಸರ್ಕಾರ ಸಿದ್ಧವಿದೆ ಎಂದು ಹೇಳಿದರು.
ಕಂದಾಯ ಸಚಿವ ಆರ್.ಅಶೋಕ ಮಾತನಾಡಿ, ಸಾರಿಗೆ ನೌಕರರ ಇಡೀ ನಾಟಕವನ್ನು ರಾಜ್ಯದ ಜನ ನೋಡುತ್ತಿದ್ದಾರೆ. ಇಲಾಖೆಗೆ ಸಂಬಂಧಪಡದ ವ್ಯಕ್ತಿಯೊಬ್ಬರ ಸ್ವ ಪ್ರತಿಷ್ಠೆಯಿಂದಾಗಿ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ. ವಿಶೇಷವಾಗಿ ರೋಗಿಗಳು, ಡಯಾಲಿಸಿಸ್ ಗೆ ಹೋಗುವವರಿಗೆ ತೀವ್ರ ತೊಂದರೆಯಾಗಿದೆ. ಅಧಿಕೃತ ಯೂನಿಯನ್ ಮುಖಂಡರ ಹೇಳಿಕೆಯನ್ನು ನೌಕರರು ಧಿಕ್ಕರಿಸಿದ್ದಾರೆ. ಯಾರೋ ಒಬ್ಬರ ಸ್ವಪ್ರತಿಷ್ಠೆಗಾಗಿ ಮುಷ್ಕರ ನಡೆಸಲಾಗುತ್ತಿದೆ.
1500 ಕ್ಕೂ ಅಧಿಕ ಬಸ್ ಓಡಾಡುತ್ತಿದೆ. ವಿಧಾನಸೌಧದಲ್ಲಿ ಮಾತನಾಡುವುದು ಒಂದು ಅಲ್ಲಿ ಹೋದ ಬಳಿಕ ಮೇಲೆ ನಿಲುವು ಬದಲಿಸುವುದು ಸರಿಯಲ್ಲ. ಬೆಳಗ್ಗೆ ಮುಷ್ಕರ ಹಿಂಪಡೆಯುತ್ತಿದ್ದೇವೆ ಎಂದು ಹೇಳಿಕೆ ನೀಡಿ ಬಳಿಕ ನಿಲುವು ಬದಲಿಸಿರುವುದು ಸರಿಯಲ್ಲ. ಮತ್ತೆ ಬಂದ್ ಮುಂದುವರಿಸುವುದು ಎಂದು ಹೇಳುವುದು ಸರಿಯಲ್ಲ ಎಂದರು.
9 ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ. ಮಾಧ್ಯಮದ ಮುಂದೆ ಇದನ್ನು ಮೂವರು ಸಚಿವರು ಹೇಳಿದ್ದಾರೆ. ಅದು ಸುಳ್ಳಾಗಲು ಸಾಧ್ಯವಿಲ್ಲ. ಸಚಿವರು ನೀಡಿದ ಹೇಳಿಕೆಯನ್ನು ನೌಕರರು ನಂಬಬೇಕು, ಸಾರ್ವಜನಿಕರ ನೋವನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ನೌಕರರ ಮುಖಂಡರು ನಮ್ಮ ಜೊತೆ ಬಂದಿದ್ದು ನಿಜ. ಎರಡು ಮೂರು ಗಂಟೆ ನಮ್ಮ ಜೊತೆ ಅವರು ಮಾತುಕತೆ ನಡೆಸಿರುವುದು ನಿಜ. ತಮ್ಮನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಯಾರು ಹುಳಿ ಹಿಂಡುತ್ತಿದ್ದಾರೆ, ಯಾರು ಪ್ರಚೋದನೆ ಮಾಡುತ್ತಿದ್ದಾರೆ ಎಂಬುದು ರಾಜ್ಯದ ಜನರು ಅರಿಯಬೇಕು ಎಂದು ಹೇಳಿದರು.
ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸುವುದಾಗಿ ಸರ್ಕಾರ ನೀಡಿರುವ ಭರವಸೆಯನ್ನು ಲಿಖಿತ ರೂಪದಲ್ಲಿ ನೀಡಬೇಕು. ಅಲ್ಲಿಯವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ.
ಫ್ರೀಡಂ ಪಾರ್ಕ್ ನಲ್ಲಿ ಕೆಎಸ್ ಆರ್ ಟಿಸಿ ನೌಕರರ ಸಂಘದ ರಾಜ್ಯಾಧ್ಯಕ್ಷ ಚಂದ್ರು ಮಾತನಾಡಿ, ಸರ್ಕಾರ ಹೇಳಿದ ಭರವಸೆಯನ್ನು ಲಿಖಿತವಾಗಿ ಕೊಡಬೇಕು. ಸಾರ್ವಜನಿಕರು ಮತ್ತು ಕಾರ್ಮಿಕರ ಹಿತ ಕೂಡ ನಮಗೂ ಮುಖ್ಯ. ಸರ್ಕಾರ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಹೇಳಿಕೆ ನೀಡಿದೆ. ನಿನ್ನೆ ಸಭೆಯಲ್ಲಿ ಭರವಸೆ ಈಡೇರಿಸುವ ಬಗ್ಗೆ ನೀಡಿರುವ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಸರ್ಕಾರದ ಪ್ರತಿನಿಧಿಯೊಬ್ಬರು ಇಲ್ಲಿಗೆ ಬಂದು ನೀಡಬೇಕು. ಅಲ್ಲಿಯವರೆಗೂ ನಮ್ಮ ಮುಷ್ಕರ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕೆಲವು ಜಾತಿ ಸಂಘಟನೆಗಳ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಯಾವುದೇ ಜಾತಿ ಸಂಘಟನೆ ಮುಖಂಡರಿಂದ ನಮಗೆ ಆಮಿಷ ಬಂದಿಲ್ಲ. ಯಾವುದೇ ಆಮಿಷಕ್ಕೆ ಬಲಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. 6ನೇ ವೇತನ ಆಯೋಗದ ವೇತನ ಯಾವಾಗಿನಿಂದ ಅನ್ವಯವಾಗುತ್ತದೆ. ನೌಕರರ ಮೇಲೆ ಹೂಡಿರುವ ಪ್ರಕರಣ ಹಿಂಪಡೆಯಬೇಕು ಎಂದು ಹೇಳಿದರು.
ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನಿನ್ನೆ ಇಡೀ ದಿನ ಮಾತುಕತೆ ನಡೆದಿದೆ. ತೀರ್ಮಾನಕ್ಕೆ ಬರುವ ಮೊದಲು ಸರ್ಕಾರಕ್ಕೆ ಸಂದೇಶ ರವಾನಿಸಿದ್ದೇವೆ. 10ರಲ್ಲಿ 9 ಬೇಡಿಕೆ ಪೂರೈಸಿದ್ದೇವೆ, ಒಂದು ಬೇಡಿಕೆ ಈಡೇರಿಸಲು ಹಣಕಾಸಿನ ಸಮಸ್ಯೆಯಿಂದ ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಬೇಡಿಕೆ ಬಗ್ಗೆ ಸರ್ಕಾರ ತನ್ನ ತೀರ್ಮಾನವನ್ನು ತಿಳಿಸಲು ಸಚಿವರೊಬ್ಬರನ್ನು ಫ್ರೀಡಂ ಪಾರ್ಕ್ ಗೆ ಕಳುಹಿಸಬೇಕು ಎಂದು ಹೇಳಿದರು.
ನಮ್ಮ ಸಂಘಟನೆಯ ಕೆಲವು ಸದಸ್ಯರು ನಿನ್ನೆ ರಾತ್ರಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಕೊನೆಗೆ ಅವರು ನಂದೀಶ್ ರೆಡ್ಡಿ ಜತೆ ಅವರ ಜೊತೆ ಇರುವುದು ತಿಳಿಯಿತು. ನಮ್ಮ ಕೆಲವು ನಾಯಕರು ಕಾಣೆಯಾಗಿದ್ದಾರೆ ಎಂದು ಬೆಳಗ್ಗೆ ದೂರು ನೀಡಿಲು ನಿರ್ಧರಿಸಿದ್ದೆವು ಎಂದು ಹೇಳಿದರು.