ನಿಯಮ ಉಲ್ಲಂಘನೆ: ಆ್ಯಪಲ್ ನಿಂದ ವಿಸ್ಟ್ರನ್ ಗೆ ಸರಬರಾಜು ಸ್ಥಗಿತ ಸಾಧ್ಯತೆ

ಆ್ಯಪಲ್ ಉತ್ಪನ್ನಗಳ ತಯಾರಿಕಾ ಘಟಕ ವಿಸ್ಚ್ರನ್ ಕಾರ್ಪೋರೇಷನ್ ಆ್ಯಪಲ್ ಸಂಸ್ಥೆ ಬಿಡಿಭಾಗಗಳ ಸರಬರಾಜು ಸ್ಥಗಿತಗೊಳಿಸುವ ಸಾಧ್ಯತೆ ಇದೆ.
ವಿಸ್ಟ್ರನ್ ಸಂಸ್ಥೆ ಮತ್ತು ಆ್ಯಪಲ್
ವಿಸ್ಟ್ರನ್ ಸಂಸ್ಥೆ ಮತ್ತು ಆ್ಯಪಲ್

ಕೋಲಾರ: ಆ್ಯಪಲ್ ಉತ್ಪನ್ನಗಳ ತಯಾರಿಕಾ ಘಟಕ ವಿಸ್ಚ್ರನ್ ಕಾರ್ಪೋರೇಷನ್ ಆ್ಯಪಲ್ ಸಂಸ್ಥೆ ಬಿಡಿಭಾಗಗಳ ಸರಬರಾಜು ಸ್ಥಗಿತಗೊಳಿಸುವ ಸಾಧ್ಯತೆ ಇದೆ.

ಹೌದು.. ಕೋಲಾರದ ನರಸಾಪುರ ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ವಿಸ್ಚ್ರನ್ ಕಾರ್ಪೋರೇಷನ್ ಸಂಸ್ಥೆ ಮೇಲಿನ ದಾಳಿ ಮತ್ತು ಗಲಭೆ ಪ್ರಕರಣವನ್ನು ಆ್ಯಪಲ್ ಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು, ಸಂಸ್ಥೆ ನೀತಿ ಉಲ್ಲಂಘನೆ ಮಾಡಿದೆ ಎಂದು ವಿಸ್ಟ್ರನ್ ಘಟಕಕ್ಕೆ ಸರಬರಾಜು ನಿಲ್ಲಿಸುವ ಸಾಧ್ಯತೆ ಇದೆ.

ತೈವಾನ್ ಮೂಲದ ವಿಸ್ಚ್ರನ್ ಕಾರ್ಪೊರೇಷನ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಉತ್ಪಾದನಾ ಘಟಕವನ್ನು ವಿಸ್ತರಿಸಲು ಮುಂದಾಗಿರುವ ಹೊತ್ತಿನಲ್ಲೇ ಇಂತಹ ಸುದ್ದಿ ಭಾರಿ ಶಾಕ್ ನೀಡಿದೆ. ಸಂಸ್ಥೆಯಲ್ಲಿ ನಡೆದ ಗಲಭೆ ಪ್ರಕರಣ ಮತ್ತು ಅದನ್ನು ವಿಸ್ಚ್ರನ್ ಸಂಸ್ಥೆ ನಿಭಾಯಿಸಿದ ರೀತಿಯಿಂದಾಗಿ ಆ್ಯಪಲ್ ಘನತೆಗೆ  ಚ್ಯುತಿಯಾದಂತಾಗಿದೆ ಎಂದು ಆ್ಯಪಲ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ವಿಸ್ಟ್ರನ್ ಸಂಸ್ಥೆಗೆ ತಾತ್ಕಾಲಿಕವಾಗಿ ಸರಬರಾಜು ನಿಲ್ಲಿಸುವ ಕುರಿತು ಆ್ಯಪಲ್ ಸಂಸ್ಥೆ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ವಿಸ್ಟ್ರನ್ ವ್ಯವಸ್ಥಾಪಕ ನಿರ್ದೇಶಕ ಸುದೀಪ್ಟೋ ಗುಪ್ತಾ ಅವರು, ಡಿಸೆಂಬರ್ 14 ರಂದು ಕರ್ನಾಟಕ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಕಂಪನಿಯು ತನ್ನ ಜಾಗತಿಕ ಯೋಜನೆಗಳಿಗಾಗಿ ಪ್ರಮುಖವಾದ ಭಾರತದಲ್ಲಿ 250 ಮಿಲಿಯನ್ ಡಾಲರ್‌ಗಿಂತ ಹೆಚ್ಚಿನ ಎಲೆಕ್ಟ್ರಾನಿಕ್ ಉತ್ಪಾದನಾ ಯೋಜನೆಗೆ ಬದ್ಧವಾಗಿದೆ  ಮತ್ತು ಅದರ ಅಸ್ತಿತ್ವವನ್ನು ವಿಸ್ತರಿಸಲು ಎದುರು ನೋಡುತ್ತಿದೆ. ನಾವು ನಮ್ಮ ಘಟಕ ಮತ್ತು ಕಾರ್ಯಾಚರಣೆಗಳಿಗೆ ವಿಶ್ವಾದ್ಯಂತ ಉತ್ತಮ ಕಾರ್ಯಾಚರಣಾ ವಿಧಾನಗಳನ್ನು ತರುತ್ತೇವೆ ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ಸಂಸ್ಥೆ ಬಯಸುತ್ತದೆ. ಘಟಕದ ಕಾರ್ಯಾಚರಣೆಯನ್ನು ಶೀಘ್ರವಾಗಿ  ಪುನರಾರಂಭಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ರಾಜ್ಯ ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತೇವೆ. ನರಸಪುರ ಘಟಕದಲ್ಲಿ ಇತ್ತೀಚೆಗೆ ನಡೆದ ಘಟನೆಗಳಿಂದ ವಿಸ್ಟ್ರನ್ ಸಂಸ್ಥೆ ತೀವ್ರ ತೊಂದರೆಗೀಡಾಗಿದೆ ಎಂದೂ ಅವರು ಹೇಳಿದರು. 

ಅಂತೆಯೇ ಸಂಸ್ಥೆಯ ಆಡಳಿತ ಮಂಡಳಿ ಪೊಲೀಸ್ ತನಿಖೆಗೆ ಸಹಕಾರ ನೀಡಲಿದೆ ಎಂದು ಸುದೀಪ್ಟೋ ಗುಪ್ತಾ ಅವರು ಹೇಳಿದ್ದಾರೆ. ಇನ್ನು ವಿಸ್ಟ್ರನ್ ಸಂಸ್ಥೆ ತನ್ನ ನಷ್ಟದ ಅಂದಾಜುಗಳನ್ನು 50 ಕೋಟಿಗೆ ಕಡಿತಗೊಳಿಸಿದ್ದರೂ ಸಹ, ಬಾಕಿ/ವೇತನ-ಕಡಿತವನ್ನು ಪಾವತಿಸದಿರುವ ಆರೋಪಗಳು ಗಂಭೀರ ಆರೋಪವಾಗಿದ್ದು, ಇದು ಆ್ಯಪಲ್‌ನ ಬ್ರಾಂಡ್ ಇಮೇಜ್‌ಗೆ ಧಕ್ಕೆ ತರುತ್ತದೆ. ಇದೇ ಕಾರಣಕ್ಕಾಗಿ ಆ್ಯಪಲ್ ಸಂಸ್ಥೆ ಪ್ರಸ್ತುತ ವಿಸ್ಟ್ರನ್ ಸಂಸ್ಥೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆಯೇ ಎಂದು ತನಿಖೆ ನಡೆಸುತ್ತಿದೆ. ಆ್ಯಪಲ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಲೆಕ್ಕ ಪರಿಶೋಧಕರನ್ನು ವಿಸ್ಟ್ರನ್ ಘಟಕಕ್ಕೆ ಕಳುಹಿಸಲಾಗಿದ್ದು. ಒಂದು ವೇಳೆ ಆರೋಪ ಸಾಬೀತಾದರೆ ವಿಸ್ಟ್ರನ್ ಸಂಸ್ಥೆಗೆ ಆ್ಯಪಲ್ ತನ್ನ ಸರಬರಾಜು ನಿಲ್ಲಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಅಂತೆಯೇ ಹಾಲಿ ವಿಸ್ಟ್ರನ್ ಸಂಸ್ಥೆಗೆ ನೀಡಲಾಗುತ್ತಿರುವ ಸರಬರಾಜನ್ನು ವಿಸ್ಟ್ರನ್ ಸಂಸ್ಥೆಯ ಎದುರಾಳಿ ಐಫೋನ್ ತಯಾರಕ ಸಂಸ್ಥೆಗಳಾದ ನೆರೆಯ ತಮಿಳುನಾಡಿನಲ್ಲಿರುವ ಫಾಕ್ಸ್‌ಕಾನ್ ಮತ್ತು ಪೆಗಾಟ್ರಾನ್‌ ಗೆ ವರ್ಗಾಯಿಸುವ ಕುರಿತೂ ಆ್ಯಪಲ್ ಚಿಂತನೆಯಲ್ಲಿ ತೊಡಗಿದೆ ಎನ್ನಲಾಗಿದೆ. ಫಾಕ್ಸ್‌ಕಾನ್ ಸಂಸ್ಥೆ ಶ್ರೀಪೆರುಂಬುದೂರ್ನಲ್ಲಿ ಒಂದು ಸ್ಥಾವರವನ್ನು ಹೊಂದಿದ್ದರೆ, ಪೆಗಾಟ್ರಾನ್ 2022 ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ಪೆಗಾಟ್ರಾನ್ ಭಾರತದಲ್ಲಿ ತನ್ನ ಐಫೋನ್ ತಯಾರಿಕೆಗಾಗಿ1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬದ್ಧವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com