ಕೇಂದ್ರದ ಕೃಷಿ ಕಾಯ್ದೆ ಪ್ರಯೋಜನ ಕುರಿತು ಜಾಗೃತಿ: ಯಡಿಯೂರಪ್ಪ ಸಂಪುಟ ಸದಸ್ಯರಿಂದ ಜನವರಿಯಲ್ಲಿ ರಾಜ್ಯ ಪ್ರವಾಸ

ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳಿಂದಾಗುವ ಪ್ರಯೋಜನಗಳ ಬಗ್ಗೆ ರೈತರು, ರೈತ ಸಂಘಟನೆಗಳಲ್ಲಿ ಅರಿವು ಮೂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಎಲ್ಲ ಸಚಿವರು ಜನವರಿ ತಿಂಗಳಿನಲ್ಲಿ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ.
ಬಿಎಸ್ ವೈ ಸಂಪುಟ ಸಚಿವರು
ಬಿಎಸ್ ವೈ ಸಂಪುಟ ಸಚಿವರು

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾಯ್ದೆಗಳಿಂದಾಗುವ ಪ್ರಯೋಜನಗಳ ಬಗ್ಗೆ ರೈತರು, ರೈತ ಸಂಘಟನೆಗಳಲ್ಲಿ ಅರಿವು ಮೂಡಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದ ಎಲ್ಲ ಸಚಿವರು ಜನವರಿ ತಿಂಗಳಿನಲ್ಲಿ ರಾಜ್ಯ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ.

ದೇಶಾದ್ಯಂತ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಸಮೂಹ, ರೈತ ಸಂಘಟನೆಗಳು ಮತ್ತು ರೈತರಿಗೆ ಕೃಷಿ ಸುಧಾರಣಾ ಕಾಯ್ದೆಗಳಿಂದಾಗುವ ಅನುಕೂಲಗಳ ಬಗ್ಗೆ ಮನವೊಲಿಸುವುದು ಈ ಪ್ರವಾಸದ ಉದ್ದೇಶವಾಗಿದೆ. ಕೃಷಿ ಕಾಯ್ದೆಯ ಪ್ರಯೋಜನಗಳನ್ನು  ರೈತರಿಗೆ ಸರಿಯಾಗಿ ಮನದಟ್ಟು ಮಾಡಿಕೊಡದ ಕಾರಣದಿಂದಾಗಿ ಆ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯಪ್ರವಾಸ ಮಾಡಿ ಅವರಿಗೆ ಕಾಯ್ದೆಯ ಕುರಿತು ಸ್ಪಷ್ಟತೆ ನೀಡಬೇಕು ಎಂದು ಯಡಿಯೂರಪ್ಪ ಮಂತ್ರಿ ಮಂಡಲದ ಸಹೋದ್ಯೋಗಿಗಳಿಗೆ ನಿರ್ದೇಶನ  ನೀಡಿದ್ದಾರೆ ಎನ್ನಲಾಗಿದೆ.

ಈಗ ಜಾರಿಗೆ ತಂದಿರುವ ಕೃಷಿ ಕಾಯ್ದೆಗೆ ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷವೇ ಒಲವು ವ್ಯಕ್ತಪಡಿಸಿತ್ತು.ಎಪಿಎಂಸಿ ವ್ಯವಸ್ಥೆಯಲ್ಲಿ ದಲ್ಲಾಳಿಗಳಿಂದಾಗಿ ರೈತರಿಗಾಗುತ್ತಿರುವ ಅನ್ಯಾಯಗಳ ಕುರಿತು ಆಕ್ರೋಶ ವ್ಯಕ್ತಪಡಿಸಿತ್ತು. ಇವತ್ತು ಪ್ರತಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ  ಅವರೇ ಎಪಿಎಂಸಿಯಲ್ಲಿ ಹೆಚ್ಚಿರುವ ದಲ್ಲಾಳಿಗಳ ಹಾವಳಿಯನ್ನು ತಡೆಯಲು ರೈತರು ತಾವು ಬೆಳೆದ ಉತ್ಪನ್ನಗಳನ್ನು ತಮಗಿಚ್ಚೆ ಬಂದ ಕಡೆ ಮಾರಲು ಅವಕಾಶ ನೀಡಬಯಸಿದ್ದರು.ಈ ಸಂಬಂಧ ಅಧಿಕಾರಿಗಳಿಗೆ ಒಂದು ಪತ್ರವನ್ನೂ ಬರೆದಿದ್ದರು.

ಇದೇ ರೀತಿ ಕೃಷಿ ಭೂಮಿಯನ್ನು ಯಾರು ಬೇಕಾದರೂ ಖರೀದಿಸಲು ಅವಕಾಶ ನೀಡುವ ಮೂಲಕ ಕೃಷಿ ವ್ಯವಸ್ಥೆಗೆ ವೇಗ ನೀಡುವುದು ಕೇಂದ್ರದ ಉದ್ದೇಶವಾಗಿದ್ದು,ಈಗಾಗಲೇ ಪೂರಕ ಪರಿಣಾಮಗಳು ಕಂಡು ಬಂದಿವೆ.ಕೊರೋನಾ ಕಾಲಘಟ್ಟದಲ್ಲಂತೂ ಇದು ದೇಶದ ಕೃಷಿಕರ ಸಂಖ್ಯೆಯನ್ನು  ಹೆಚ್ಚು ಮಾಡಿದ್ದು ವಿದ್ಯಾವಂತರೂ ಭೂಮಿ ಖರೀದಿಸಿ ಕೃಷಿಗೆ ಇಳಿದಿದ್ದಾರೆ.ಅದೇ ರೀತಿ ಅತ್ಯಾಧುನಿಕ ತಂತ್ರಜ್ಞಾನದ ಪ್ರಯೋಜನ ಪಡೆದು ಯಶಸ್ವಿಯಾಗುತ್ತಿದ್ದಾರೆ.

ಇದು ಕೃಷಿ ವಲಯದ ಶಕ್ತಿಯನ್ನು ಹೆಚ್ಚಿಸಿದ್ದು ಆಹಾರದ ವಿಷಯದಲ್ಲಿ ಭಾರತ ಜಾಗತಿಕ ಶಕ್ತಿಯಾಗುವ ಕಡೆ ಹೆಜ್ಜೆ ಇಟ್ಟಂತಾಗಿದೆ.ಈ ಹಿನ್ನೆಲೆಯಲ್ಲಿ ಕೃಷಿ ಭೂಮಿಯನ್ನು ಖರೀದಿಸಲು ಅವಕಾಶ ನೀಡಿರುವ ಕ್ರಮ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವಂತೆ ಮಾಡುತ್ತಿದೆ.ಅದೇ ರೀತಿ ಕೃಷಿ  ಭೂಮಿಯನ್ನು ಖರೀದಿಸುವಾಗ ನೀರಾವರಿ ಭೂಮಿಯನ್ನು ಮಾರಾಟ ಮಾಡಲು,ಖರೀದಿ ಮಾಡಲು ಅವಕಾಶ ನೀಡುತ್ತಿಲ್ಲ.ಈ ಹಿನ್ನೆಲೆಯಲ್ಲಿ ಸದರಿ ಕಾಯ್ದೆಯನ್ನು ಗಮನಿಸಬೇಕು ಎಂದು ಈ ಸಚಿವರು ರಾಜ್ಯದ ರೈತರಿಗೆ ವಿವರಿಸಲಿದ್ದಾರೆ.

ಕೃಷಿಯ ಬೆಳವಣಿಗೆಯಿಂದ ಕೈಗಾರಿಕಾ ವಲಯಕ್ಕೂ ಹೆಚ್ಚು ಶಕ್ತಿ ಬರಲಿದೆ.ಆ ಮೂಲಕ ದೇಶದಲ್ಲಿ ಏಕಕಾಲಕ್ಕೆ ಉಭಯ ಕ್ಷೇತ್ರಗಳಲ್ಲೂ ಉದ್ಯೋಗಾವಕಾಶ ಹೆಚ್ಚಿ ಆರ್ಥಿಕ ಪರಿಸ್ಥಿತಿಗೆ ಶಕ್ತಿ ತಂದುಕೊಡಲಿದೆ.ಕೃಷಿ,ಕೈಗಾರಿಕೆ ವಲಯ ಅಭಿವೃದ್ಧಿಯಾದರೆ ಸಹಜವಾಗಿಯೇ ಸೇವಾ ವಲಯದ  ಶಕ್ತಿಯೂ ಹೆಚ್ಚುತ್ತದೆ.ಆ ಮೂಲಕ ದೇಶ ಸಹಜ ಸ್ಥಿತಿಗೆ ಮರಳುತ್ತದೆ.ಕೊರೋನಾಘಾತದಿಂದ ತ್ವರಿತವಾಗಿ ಚೇತರಿಸಿಕೊಳ್ಳಲೂ ಕೃಷಿ ಕಾಯ್ದೆ ಅನುಕೂಲಕರವಾಗಿದೆ.

ಇನ್ನು ರೈತರು ಇಷ್ಟವಿಲ್ಲದಿದ್ದರೆ ಭೂಮಿಯನ್ನು ಮಾರುವ ಅಗತ್ಯವೇ ಇಲ್ಲ.ಅದೇ ರೀತಿ ಅಗತ್ಯವಿರುವವರು ಭೂಮಿಯನ್ನು ಮಾರುವ ಅವಕಾಶವಿಲ್ಲದಿದ್ದರೆ ಅವರಿಗೂ ಹತಾಶೆ ಕಾಡುತ್ತದೆ.ಹೀಗೆ ಎಲ್ಲ ಕಡೆಗಳಿಂದಲೂ ಪರಿಶೀಲನೆ ಮಾಡಿಯೇ ಕೃಷಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.ಹೀಗಾಗಿ  ರೈತ ಸಮುದಾಯ ಕೇಂದ್ರದ ಕಾಯ್ದೆಗೆ ಸಹಮತ ಸೂಚಿಸಬೇಕು ಎಂದು ಸಚಿವರುಗಳು ತಮ್ಮ ರಾಜ್ಯ ಪ್ರವಾಸದ ಅವಧಿಯಲ್ಲಿ ಮನವಿ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com