ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರ ಮೇಲೆ ಕಣ್ಗಾವಲಿರಿಸಲು ಆ್ಯಪ್ ಅಭಿವೃದ್ಧಿ!
ಇನ್ನು ಮುಂದೆ ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಆ್ಯಪ್ ವೊಂದು ಕಣ್ಗಾವಲಿರಿಸಲಿದೆ.
Published: 19th December 2020 12:00 PM | Last Updated: 19th December 2020 01:21 PM | A+A A-

ಸಂಗ್ರಹ ಚಿತ್ರ
ಚಾಮರಾಜನಗರ: ಇನ್ನು ಮುಂದೆ ಬಿಳಿಗಿರಿ ರಂಗಸ್ವಾಮಿ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆ ಆ್ಯಪ್ ವೊಂದು ಕಣ್ಗಾವಲಿರಿಸಲಿದೆ.
ಬಿಆರ್'ಟಿಗೆ ಭೇಟಿನೀಡುವ ಪ್ರವಾಸಿಗರ ಮೇಲೆ ಕಣ್ಗಾವಲಿರಿಸಲು ಅರಣ್ಯಾಧಿಕಾರಿಗಳು ಟೈಗರ್ ಮೊಬೈಲ್ ಆ್ಯಪ್ ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಅರಣ್ಯ ಮೀಸಲು ಪ್ರದೇಶದಿಂದ ಹಾದು ಹೋಗುವ ದಾರಿಯಲ್ಲಿ ನಡೆಯುವ ಕೃತ್ಯಗಳಿಗೆ ಕಡಿವಾಣ ಹಾಕಲು ಟೈಗರ್ ಮೊಬೈಲ್ ಆ್ಯಪ್ ಅಳವಡಿಕೆ ಮಾಡಿಕೊಳ್ಳಲಾಗಿದೆ. ಈ ಆ್ಯಪ್ ಪ್ರವಾಸಿಗರ ಸುರಕ್ಷತೆಗೂ ಸಹಕಾರಿಯಾಗಲಿದೆ.
ಬಿಆರ್'ಟಿಗೆ ಭೇಟಿ ನೀಡುವುದಕ್ಕೂ ಮುನ್ನ ಪ್ರತೀ ವಾಹನ ಸವಾರರ ಸಂಪೂರ್ಣ ಮಾಹಿತಿಯನ್ನು ಆ್ಯಪ್'ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಪ್ರವಾಸಿಗರ ವಾಹನದ ಸಂಖ್ಯೆ, ಮೊಬೈಲ್ ನಂಬರ್, ಪ್ರವಾಸಿಗರ ಸಂಖ್ಯೆ ವಿಳಾಸ ಇತ್ಯಾದಿ ಮಾಹಿತಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಪ್ರವಾಸಿಗರಿಗೆ ಕ್ಯೂ ಆರ್ ಕೋಡ್ ಒಳಗೊಂಡ ಟಿಕೆಟ್'ಗಳನ್ನು ನೀಡಲಾಗುತ್ತಿದ್ದು, ದಾರಿ ಮಧ್ಯೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಅಥವಾ ಅನಾಹುತಗಳು ಸಂಭವಿಸಿದರೆ, ವಾಹನ ಸಮಸ್ಯೆ, ದಾರಿ ತಪ್ಪಿದರೆ ಅಂತಹವನ್ನು ಪತ್ತೆಹಚ್ಚಲು ಈ ಆ್ಯಪ್ ಸಹಾಯಕರವಾಗಲಿದೆ.
ಆ್ಯಪ್ ಪ್ರಾಯೋಗಿಕ ಹಂತದಲ್ಲಿಯೇ ನಿಯಮ ಮೀರಿದ್ದ ಸಾಕಷ್ಟು ಜನರಿಗೆ ದಂಡವನ್ನು ಹಾಕಲಾಗಿದೆ. ಸ್ಥಳೀಯರು ಮತ್ತು ಬುಡಕಟ್ಟು ಜನಾಂಗದವರು ಅರಣ್ಯ ಪ್ರದೇಶದಲ್ಲಿರುವವರ ಕುರಿತು ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ವಾಹನಗಳ ಗುರ್ತಿಗೆ ಪ್ರತಿಯೊಬ್ಬರಿಗೂ ಸ್ಟಿಕ್ಕರ್ ಗಳನ್ನು ನೀಡಲಾಗುತ್ತದೆ. ನೀಡಿದ ಸಮಯಕ್ಕಿಂತಲೂ ಹೆಚ್ಚು ಕಾಲ ತೆಗೆದುಕೊಂಡ ವಾಹನ ಸವಾರರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.