ಕೊರೋನಾ ಲಸಿಕೆ ಬರುತ್ತಿದೆ, ಆದರೆ ಎಲ್ಲರಿಗೂ ಕಡ್ಡಾಯವಲ್ಲ!

ದೇಶದಲ್ಲಿ ಮಹಾಮಾರಿ ಕೊರೋನಾಗೆ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಲಸಿಕೆ ನೀಡಿಕೆ ಆರಂಭವಾದ ನಂತರ ಯಾರಿಗೂ ಅದು ಕಡ್ಡಾಯವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ದೇಶದಲ್ಲಿ ಮಹಾಮಾರಿ ಕೊರೋನಾಗೆ ಲಸಿಕೆ ಶೀಘ್ರದಲ್ಲೇ ಬರಲಿದ್ದು, ಲಸಿಕೆ ನೀಡಿಕೆ ಆರಂಭವಾದ ನಂತರ ಯಾರಿಗೂ ಅದು ಕಡ್ಡಾಯವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. 

ಕೊರೋನಾ ಲಸಿಕೆಯ ಕುರಿತು ದೇಶದಾದ್ಯಂತ ಸಾಕಷ್ಟು ಊಹಾಪೋಹಗಳು ಹಾಗೂ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.  

ಕೊರೋನಾದಿಂದ ಗುಣಮುಖವಾದವರೂ ಲಸಿಕೆ ತೆಗೆದುಕೊಳ್ಳಬೇಕು ಮತ್ತು ಲಸಿಕೆಯ 2ನೇ ಡೋಸ್ ತೆಗೆದುಕೊಂಡ 2 ವಾರಗಳ ನಂತರ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ಆ್ಯಂಟಿಬಾಡಿ ಅಭಿವೃದ್ಧಿಯಾಗತೊಡಗುತ್ತದೆ. 

ಲಸಿಕೆಯಿಂದ ನಮಗೆ ಪ್ರಯೋಜನವಾಗಬೇಕು ಹಾಗೂ ನಮ್ಮಿಂದ ಬೇರೆಯವರಿಗೆ ಕೊರೋನಾ ಹರಡಬಾರದು ಅಂದರೆ 28 ದಿನಗಳ ಅಂತರದಲ್ಲಿ ಎರಡು ಡೋಸ್ ತೆಗೆದುಕೊಳ್ಳಬೇಕು. ದೇಶದಲ್ಲಿ ಲಸಿಕೆಯ ಟ್ರಯಲ್'ಗಳು ಇನ್ನೂ ಬೇರೆ ಬೇರೆ ಹಂತಗಳಲ್ಲಿವೆ. ಲಸಿಕೆಯ ದಕ್ಷತೆ ಹಾಗೂ ಸುರಕ್ಷತೆ ಸಾಬೀತಾದ ನಂತರವೇ, ಸಾಧ್ಯವಾದಷ್ಟು ಬೇಗ, ಸರ್ಕಾರ ಲಸಿಕೆ ಬಿಡುಗಡೆ ಮಾಡಲಿದೆ. 

ಎಲ್ಲಾ ಲಸಿಕೆಗಳಿಂದಲೂ ಇರುವಂತೆ ಕೊರೋನಾ ಲಸಿಕೆಯಿಂದಲು ಕೆಲವರಲ್ಲಿ ಸಣ್ಣ ಜ್ವರ, ನೋವು ಇತ್ಯಾದಿ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಿಳಿಸಿದೆ. 

ಕ್ಯಾನ್ಸರ್, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಸಮಸ್ಯೆಗಳಿಗೆ ಔಷಧ ಸೇವಿಸುತ್ತಿರುವವರೂ ಲಸಿಕೆ ತೆಗೆದುಕೊಳ್ಳಬಹುದು. ವಾಸ್ತವವಾಗಿ ಇವರು ಕೊರೋನಾದಿಂದ ಹೆಚ್ಚು ಅಪಾಯಕ್ಕೆ ತುತ್ತಾಗುವುದರಿಂದ ಲಸಿಕೆ ತೆಗೆದುಕೊಳ್ಳುವುದೇ ಒಳ್ಳೆಯದು. ಮೊದಲಿಗೆ ಆರೋಗ್ಯ ಸೇವೆಯಲ್ಲಿರುವವರು, ಹೈ-ರಿಸ್ಕ್ ವರ್ಗದವರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಕೊರೋನಾ ಲಕ್ಷಣ ಇರುವವರಿಗೆ ಲಸಿಕೆ ನೀಡಲಾಗುವುದಿಲ್ಲ. ಆನ್'ಲೈನ್ ನಲ್ಲಿ ನೋಂದಣಿ ಮಾಡಿಕೊಂಡವರ ಮೊಬೈಲ್'ಗೆ ಲಸಿಕೆ ನೀಡುವ ಸ್ಥಳ, ಸಮಯ ಮುಂದಾದ ವಿವರಗಳ ಸಂದೇಶ ಕಳುಹಿಸಲಾಗುತ್ತದೆ. ಎಂದು ಹೇಳಿದೆ. 

ಈ ನಡುವೆ ಲಸಿಕೆ ಕುರಿತು ತಜ್ಞರು ಹೇಳಿಕೆ ನೀಡಿದ್ದು, ಲಸಿಕೆ ತೆಗೆದುಕೊಂಡ ಬಳಿಕ ಮಹಿಳೆಯರು ಕೆಲ ತಿಂಗಳುಗಳ ಕಾಲ ಗರ್ಭ ಧರಿಸದಂತೆ ನೋಡಿಕೊಳ್ಳಬೇಕು. ಬ್ರಿಟನ್ ನಲ್ಲಿ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲಾಗುತ್ತಿಲ್ಲ. ಲಸಿಕೆ ತೆಗೆದುಕೊಂಡ 2 ತಿಂಗಳುಗಳ ಕಾಲ ಗರ್ಭಿಣಿಯಾಗದಂತೆ ಸೂಚನೆ ನೀಡಲಾಗುತ್ತಿದೆ. ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಿದ್ದೇ ಆದರೆ, ಆ ಲಸಿಕೆಯು ಹುಟ್ಟಲಿರುವ ಮಗು ಹಾಗೂ ತಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ಪಲ್ಮೊನೊಲಜಿ ವಿಭಾಗದ ಮುಖ್ಯಸ್ಥ ಡಾ. ಸತ್ಯನಾರಾಯಣ ಮೈಸೂರು ಅವರು ಮಾತನಾಡಿ, ಲಸಿಕೆ ಕೇಂದ್ರಗಳಿಂದಲೇ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಾಗಿರುವ ಸಾಧ್ಯತೆಗಳಿವೆ. ಲಸಿಕೆ ತೆಗೆದುಕೊಳ್ಳುವ ವೇಳೆ ಯಾವುದೇ ವ್ಯಕ್ತಿಗಳಲ್ಲಿ ಲಕ್ಷಣಗಳು ಇದ್ದಿದ್ದೇ ಆದರೆ, ಅವರ ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ. 

ಪ್ರಸ್ತುತ ದೇಶದಲ್ಲಿ ಆರು ಕೊರೋನಾ ಲಸಿಕೆಗಳ ಟ್ರಯಲ್ ನಡೆಯುತ್ತಿದೆ. ಅವು-ಭಾರತ್ ಬಯೋಟೆಕ್'ನ ಕೋವ್ಯಾಕ್ಸಿನ್, ಜೈಡಸ್ ಕ್ಯಾಡಿಲಾ ಲಸಿಕೆ, ಜೆನೋವಾ ಲಸಿಕೆ, ಆಕ್ಸ್'ಫರ್ಡ್'ನ ಕೋವಿಶೀಲ್ಡ್, ರಷ್ಯಾದ ಸ್ಪುಟ್ನಿಕ್-5, ಬಯೋಲಾಜಿಕಲ್ ಇ.ಲಿ. ಲಸಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com