ಚಿಂದಿ ಆಯುವವರ ಮಕ್ಕಳಿಗಾಗಿ 'ಹಸಿರು ದಳ' ಎನ್ ಜಿಒ ಮೊಬೈಲ್ ಗ್ರಂಥಾಲಯ, ಪುಸ್ತಕ ನೆರವು

ಮೈಸೂರಿನಲ್ಲಿ ಚಿಂದಿ ಆಯುವವರ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಹಾಗೂ ಶಾಲೆಗಳಿಂದ ಡ್ರಾಪ್ ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಎನ್ ಜಿಒ ಹಸಿರು ದಳ ಮೊಬೈಲ್ ಗ್ರಂಥಾಲಯದ ಮೂಲಕ ಪುಸ್ತಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದೆ.
ಹಸಿರು ದಳ ಎನ್ ಜಿಒ ದಿಂದ ಮಕ್ಕಳಿಗೆ ಕಲಿಕೆ
ಹಸಿರು ದಳ ಎನ್ ಜಿಒ ದಿಂದ ಮಕ್ಕಳಿಗೆ ಕಲಿಕೆ

ಮೈಸೂರು: ಮೈಸೂರಿನಲ್ಲಿ ಚಿಂದಿ ಆಯುವವರ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಹಾಗೂ ಶಾಲೆಗಳಿಂದ ಡ್ರಾಪ್ ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಎನ್ ಜಿಒ ಹಸಿರು ದಳ ಮೊಬೈಲ್ ಗ್ರಂಥಾಲಯದ ಮೂಲಕ ಪುಸ್ತಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದೆ.

ಲಾಕ್ ಡೌನ್ ಅವಧಿಯಲ್ಲೂ ಹಲವು ಮಕ್ಕಳಿಗೆ ಹಸಿರು ದಳ ಎನ್ ಜಿಒ ಕೈಗೊಂಡಿರುವ ಕ್ರಮಗಳು ಅತ್ಯಂತ ಉಪಯುಕ್ತವಾಗಿದೆ. ಹಸಿರು ದಳದ 'ಬುಗುರಿ' ಉಪಕ್ರಮದ ಹರೀಶ್, ಮಂಗಳ ಹಾಗೂ ಚೈತ್ರ ಅವರು ಈ ಮೊಬೈಲ್ ಗ್ರಂಥಾಲಯದ ಪರಿಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ.

ಈ ಉಪಕ್ರಮದ ಮೂಲಕ ಎನ್ ಜಿಒ ಚಿಂದಿ ಆಯುವ 200 ಮಕ್ಕಳಿಗೆ ಪುಸ್ತಕಗಳನ್ನು ಪೂರೈಸಿದ್ದು, ಡ್ರಾಪ್ ಔಟ್ ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

ಲಾಕ್ ಡೌನ್ ಬಳಿಕ ಸರ್ಕಾರ ಶಾಲೆಗಳನ್ನು ತೆರೆಯುತ್ತಿದೆ, ಈ ಹಂತದಲ್ಲಿ ಡ್ರಾಪ್ ಔಟ್ ಗಳ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ. ಈ ಉಪಕ್ರಮದ ಮೂಲಕ ಸೌಕರ್ಯ ವಂಚಿತ ವಿದ್ಯಾರ್ಥಿಗಳನ್ನು ಹಲವಾರು ಸಮಸ್ಯೆಗಳ ನಡುವೆಯೂ ವಿದ್ಯಾಭ್ಯಾಸದಲ್ಲಿ ತೊಡಗಿಸುವುದಕ್ಕೆ ಯತ್ನಿಸಲಾಗುತ್ತಿದೆ. ಓದುವುದಕ್ಕೆ ಪುಸ್ತಗಳ ವ್ಯವಸ್ಥೆ ಮಾಡಲಿರುವ ಈ ಎನ್ ಜಿಒ ಸದಸ್ಯರು ಅದೇ ಪುಸ್ತಕಗಳನ್ನು ಪ್ರತಿ ವಾರಕ್ಕೆ ಒಮ್ಮೆ ಬೇರೆ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಿದ್ದಾರೆ. ಹೀಗೆ ಒಂದು ವಾರದಲ್ಲಿ ಆ ವಿದ್ಯಾರ್ಥಿ ಸಾಧ್ಯವಾದಷ್ಟೂ ಆ ಪುಸ್ತಕಗಳನ್ನು ಓದಿಕೊಳ್ಳುವ ಅವಕಾಶವಿರಲಿದೆ.

ಸರ್ಕಾರಿ ಶಾಲೆಗಳಲ್ಲಿ ಆನ್ ಲೈನ್ ತರಗತಿಗಳ ಪ್ರಾರಂಭ ವಿಳಂಬ, ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸೌಲಭ್ಯ ಸಿಗದೇ ಇದ್ದ ಪರಿಸ್ಥಿತಿಗಳನ್ನು ಗಮನಿಸಿದ ಚೈತ್ರ ಅವರು ಈ ಪರಿಕಲ್ಪನೆಯನ್ನು ಜಾರಿಗೆ ತರಲು ಯೋಚಿಸಿದರು.

"ಆನ್ ಲೈನ್ ತರಗತಿಗಳಿಗಾಗಿ ಮೊಬೈಲ್ ಫೋನ್ ಗಳ ಸಮಸ್ಯೆ ಎದುರಾಗುತ್ತಿರುವುದನ್ನು ಗಮನಿಸಿದೆವು. ಯಾರೆಲ್ಲರ ಬಳಿ ಬೇಸಿಕ್ ಮೊಬೈಲ್ ಫೋನ್ ಸಹಿತ ಯಾವುದಾದರೂ ಇತ್ತೋ ಅವರಿಗೆ ಕಾನ್ಫರೆನ್ಸ್ ಕಾಲ್ ಗಳ ಮೂಲಕ ನಮ್ಮ ಸ್ವಯಂ ಸೇವಕರು ಒಂದಷ್ಟು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ಕಥೆಗಳನ್ನು ಹೇಳಿ ಅವುಗಳನ್ನು ವಿವರಿಸಲು ಯತ್ನಿಸುತ್ತಿದ್ದರು, ಪ್ರತಿಕ್ರಿಯೆ ಚೆನ್ನಾಗಿತ್ತು" ಎನ್ನುತ್ತಾರೆ ಚೈತ್ರ.

"ಇದು ಇಲ್ಲಿಗೇ ಮುಕ್ತಾಯಗೊಳ್ಳಲಿಲ್ಲ. ಫೋನ್ ಹಾಗೂ ಇಂಟರ್ ನೆಟ್ ಸಂಪರ್ಕ ಇಲ್ಲದೇ ಇರುವವರಿಗೆ ಅಗತ್ಯವಿರುವುದನ್ನು ಪ್ರಿಂಟ್ ಔಟ್ ತೆಗೆದು, ಅದಕ್ಕೆ ಸಂಬಂಧಿಸಿದ ಒಂದಷ್ಟು ಚಟುವಟಿಕೆಗಳನ್ನು ನೀಡಿ, ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನ ಮಾಡಲಾಯಿತು. ಬುಕ್ ಕಿಟ್ ಉಪಕ್ರಮದ ಮೂಲಕ ನಾವು 20 ಕನ್ನಡ ಹಾಗೂ 20 ಇಂಗ್ಲೀಷ್ ಪುಸ್ತಕಗಳನ್ನು ವಿತರಣೆ ಮಾಡಿದ್ದೇವೆ" ಎಂದು ಚೈತ್ರ ತಿಳಿಸಿದ್ದಾರೆ.

"ಎನ್ ಜಿಒ ಸದಸ್ಯರು ಡ್ರಾಪ್ ಔಟ್ ದರವನ್ನು ಇಳಿಕೆ ಮಾಡುವುದರ ಬಗ್ಗೆ ಅತ್ಯಂತ ಹೆಚ್ಚಿನ ವಿಶ್ವಾಸ ಹೊಂದಿದ್ದಾರೆ. ಚಿಂದಿ ಆಯುವವರ ಮಕ್ಕಳಿಗೆ ನಾವು ಅವರ ಪೋಷಕರ ಕೆಲಸದ ಬಗ್ಗೆ ನಕಾರಾತ್ಮಕವಾಗಿ ಮಾತನಾಡಲಿಲ್ಲ, ಒಂದು ವೇಳೆ ಹಾಗೆ ಮಾಡಿದರೆ ಅದು ಮಕ್ಕಳಲ್ಲಿ ಕೀಳರಿಮೆ ಮೂಡಿಸುತ್ತದೆ. ನಾವು ಈ ಕೆಲಸದಲ್ಲಿ ತೊಡಗಿರುವ ಎಲ್ಲರನ್ನೂ ಅದರಿಂದ ಮುಕ್ತ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಒತ್ತಾಯಪೂರ್ವಕವಾಗಿ ಈ ಕೆಲಸ ಮಾಡುತ್ತಿರುವವರಿಗಾದರೂ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಸಂಬಂಧಪಟ್ಟ ಕೌಶಲ್ಯವಾದರೂ ರೂಢಿಯಾಗಲಿ ಎಂಬ ಉದ್ದೇಶವಿದೆ".ಎನ್ನುತ್ತಾರೆ ಚೈತ್ರ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com