ಹಿರಿಯ ಯಕ್ಷಗಾನ ಅರ್ಥಧಾರಿ, ಪ್ರಸಂಗ ಕರ್ತೃ ಡಿ.ಎಸ್. ಶ್ರೀಧರ್ ಗೆ ಪಾರ್ತಿಸುಬ್ಬ ಪ್ರಶಸ್ತಿ

2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಪ್ರಕಟವಾಗಿದೆ. ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ದರೇಮನೆ ನಿಟ್ಟೂರಿನ ಡಿ.ಎಸ್.ಶ್ರೀಧರ್ ಈ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಿ.ಎಸ್.ಶ್ರೀಧರ್
ಡಿ.ಎಸ್.ಶ್ರೀಧರ್

ಬೆಂಗಳೂರು: 2020ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿಗಳು ಪ್ರಕಟವಾಗಿದೆ. ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ದರೇಮನೆ ನಿಟ್ಟೂರಿನ ಡಿ.ಎಸ್.ಶ್ರೀಧರ್ ಈ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪಾರ್ತಿಸುಬ್ಬ ಪ್ರಶಸ್ತಿ 1  ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಫಲಕ, ಪ್ರಮಾಣ ಪತ್ರಗಳನ್ನು ಒಳಗೊಂಡಿದೆ.

ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಸೋಮವಾರ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿಗೆ ಆಯ್ಕೆಯಾದವರ ಹೆಸರುಗಳನ್ನು ಪ್ರಕಟಿಸಿದ್ದಾರೆ.

ಕುಂಜಿಬೆಟ್ಟು ಬಿ.ಸಂಜೀವ ಸುವರ್ಣ, ಮಂಗಳೂರು ತಲಕಳದ ಕೆ.ತಿಮ್ಮಪ್ಪ ಗುಜರನ್, ಶಿರಸಿಯ ಡಾ.ವಿಜಯ ನಳಿನಿ ರಮೇಶ್, ಬೆಂಗಳೂರಿನ ಡಾ. ಚಕ್ಕರೆ ಶಿವಶಂಕರ್, ಹರಪನಹಳ್ಳಿಯ ಬಿ. ಪರಶುರಾಮ್ ಅವರುಗಳು ವಾರ್ಷಿಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಕುಂದಾಪುರದ  ಗೋಪಾಲ ಆಚಾರ್ಯ ತೀರ್ಥಹಳ್ಳಿ ಹಾಗೂ ಬೇಲ್ತೂರು ರಮೇಶ್, ಉಡುಪಿಯ ಆವರ್ಸೆ ಶ್ರೀನಿವಾಸ ಮಡಿವಾಳ, ಮಂಗಳೂರಿನ ಹರಿನಾರಾಯಣ ಬೈಪಡಿತ್ತಾಯ ಹಾಗೂ ಸಂಜಯ್ ಕುಮಾರ್ ಶೆಟ್ಟಿ, ಶಿರಸಿಯ ಎಂ.ಆರ್. ಹೆಗಡೆ ಕಾನಗೋಡ, ಕುಂದಾಪುರದ ಸುಬ್ರಹ್ಮಣ್ಯ ಧಾರೇಶ್ವರ, ಬಂಟ್ವಾಳದ ವಿಟ್ಲ ಶಂಭು ಶರ್ಮ, ಶಿರಾ ತಾಲ್ಲೂಕು ಬರಗೂರಿನ ಹನುಮಂತರಾಯಪ್ಪ ಮತ್ತು ಕೋಲಾರ ತಾಲ್ಲೂಕಿನ ವಕ್ಕಲೇರಿಯ ಎ.ಎಂ. ಮುಳವಾಗಲಪ್ ಅವರುಗಳನ್ನು 'ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ.

ವಾರ್ಷಿಕ ಗೌರವ ಪುರಸ್ಕಾರ ಹಾಗೂ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ ಕ್ರಮವಾಗಿ 50 ಹಾಗೂ 25 ಸಾವಿರ ರೂ. ನಗದು ಬಹುಮಾನ ಹೊಂದಿದೆ.

 ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾದ ಡಿ.ಎಸ್. ಶ್ರೀಧರ್-ಕಿರು ಪರಿಚಯ

ಶ್ರೀಧರ್  ಜನಿಸಿದ್ದು 1950ನೇ ಇಸವಿ ಆಗಸ್ಟ್ 25ರಂದು, ಶಿವಮೊಗ್ಗ ಜಿಲ್ಲೆಯ  ಸಾಗರ ತಾಲೂಕು ನಿಟ್ಟೂರು ಸಮೀಪದ ಧರೆಮನೆಯಲ್ಲಿ. ತಂದೆ ಶ್ರೀಪಾದಯ್ಯ  ತಾಯಿ ಸರಸ್ವತಿ. ತಂದೆ ಶ್ರೀಪಾದಯ್ಯ ಕೃಷಿಕರಾಗಿಯೂ ಯಕ್ಷಗಾನ ಕಲಾವಿದರೂ ಆಗಿದ್ದರು. ಅವರೇ ಯುವಕರನ್ನು ಸೇರಿಸಿ ಹನ್ಯಾರ ಮೇಳವನ್ನು ಹುಟ್ಟುಹಾಕಿ ತಿರುಗಾಟವನ್ನೂ ನಡೆಸಿದ್ದರು.

ಹೆಬ್ಬಿಗೆ ಸರಕಾರೀ ಶಾಲೆಯಲ್ಲಿ 7ನೇ ತರಗತಿ ಮುಗಿಸಿದ ಶ್ರೀಧರ್ ಹೆಚ್ಚಿನ ಓದಿಗಾಗಿ ಉಡುಪಿಗೆ ಆಗಮಿಸಿದ್ದರು. ಹೈಸ್ಕೂಲ್ . ಪಿ. ಯು. ಸಿ., ಪದವಿ ವ್ಯಾಸಂಗ ಮುಗಿಸಿ ಉಡುಪಿ ರಾಘವೇಂದ್ರ ಪುಸ್ತಕ ಭಂಡಾರದಲ್ಲಿ ಉದ್ಯೋಗಿಯಾಗಿದ್ದುಕೊಂಡು ಅಂಚೆ ತೆರಪಿನ ಶಿಕ್ಷಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದ ಶ್ರೀಧರ್ ಕೆಮ್ಮಣ್ಣು ಮತ್ತು ಕೋಟ ವಿದ್ಯಾಸಂಸ್ಥೆಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಂತರ 1991ರಲ್ಲಿ ಕಿನ್ನಿಗೋಳಿ ಪೊಂಪೈ ಕಾಲೇಜಿಗೆ ಪೂರ್ಣಕಾಲಿಕ ಉಪನ್ಯಾಸಕನಾಗಿ ಸೇರ್ಪಡೆಯಾದರು. ಅಲ್ಲಿಂದ ನಿವೃತ್ತಿಯವರೆಗೆ ಅಲ್ಲಿಯೇ ಉಪನ್ಯಾಸಕರಾಗಿದ್ದ ಶ್ರೀಧರ್ ಕಲಾವಿದನಾಗಿ, ಉಪನ್ಯಾಸಕನಾಗಿ, ಕಲಾಸಂಘಟಕನಾಗಿ, ಲೇಖಕನಾಗಿ, ಪ್ರಸಂಗಕರ್ತನಾಗಿ ಗುರುತಿಸಿಕೊಂಡಿದ್ದಾರೆ.

ಇವರು ಹಲವಾರು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದು ಅವುಗಳು ಯಕ್ಷಗಾನ ಪ್ರಸಂಗ ಮಾಲಿಕಾ’ ಎಂಬ ಹೆಸರಲ್ಲಿ ಪ್ರಕಟವಾಗಿದೆ.  ಅಲ್ಲದೆ ಈ ಕೃತಿಗೆ 2011ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡಮಿಯಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿ ಲಭಿಸಿದೆ. ಶಿವಮೊಗ್ಗದಲ್ಲಿ 2016ರಲ್ಲಿ ನಡೆದ  ಅಖಿಲ ಭಾರತ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿದ್ದ ಶ್ರೀಧರ್  ಸುಮಾರು 475ಕ್ಕೂ ಮಿಕ್ಕಿ. ಯಕ್ಷಗಾನ ಕವಿಗಳ ಬಗ್ಗೆ,  25. ನಾಟಕಗಳ ಬಗ್ಗೆ  ಬರೆದ ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. 

ಸಧ್ಯ ಕಿನ್ನಿಗೋಳಿಯಲ್ಲಿ ನೆಲೆಸಿರುವ ಶ್ರೀಧರ್ 1982ರಲ್ಲಿ ನಟೇಶ್ವರೀ  ಜತೆ ವಿವಾಹವಾದರು. ಇವರ ಪುತ್ರ ಶ್ರೀನಿಧಿ ಡಿ. ಎಸ್.ದೂರದರ್ಶನದಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದರೆ ಸೊಸೆ ಅಂಜಲಿ ಸಹ ದೂರದರ್ಶನ ಉದ್ಯೋಗಿ. ಪುತ್ರಿ ಶ್ರೀಕಲಾ ಡಿ. ಎಸ್. ಪತ್ರಿಕೋದ್ಯಮದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದು ಪತ್ರಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ಅಳಿಯ ವಿನಾಯಕರಾಮ್ ಕಲಗಾರ್  ಕೂಡ ದೂರದರ್ಶನದಲ್ಲೇ ಉದ್ಯೋಗಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com