ನಾಗರಿಕರೇ ಎಚ್ಚರ, ಮುಂದಿನ ದಿನಗಳಲ್ಲಿ ಮತ್ತಷ್ಟು ಚಳಿ, ಶೀತಗಾಳಿ ಸಾಧ್ಯತೆ

ಡಿಸೆಂಬರ್ ಅಂತ್ಯವಾಗುತ್ತಿದ್ದಂತೆ ಚಳಿಯ ಕಾವು ಏರುತ್ತಿದೆ. ರಾತ್ರಿಯಾಗುತ್ತಿದ್ದಂತೆ ಚಳಿರಾಯ ಮೈಕೆಡವಿ ನಿಲ್ಲುತ್ತಿದ್ದು ರಾತ್ರಿಯಲ್ಲಿ ರಗ್ಗು ಹೊದ್ದು ಮಲಗಿದರೆ ಬೆಳಗ್ಗೆ ಚಳಿಗೆ ಹಲವರಿಗೆ ಬೇಗ ಏಳುವುದಕ್ಕೆ ಮನಸ್ಸಾಗುವುದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಡಿಸೆಂಬರ್ ಅಂತ್ಯವಾಗುತ್ತಿದ್ದಂತೆ ಚಳಿಯ ಕಾವು ಏರುತ್ತಿದೆ. ರಾತ್ರಿಯಾಗುತ್ತಿದ್ದಂತೆ ಚಳಿರಾಯ ಮೈಕೆಡವಿ ನಿಲ್ಲುತ್ತಿದ್ದು ರಾತ್ರಿಯಲ್ಲಿ ರಗ್ಗು ಹೊದ್ದು ಮಲಗಿದರೆ ಬೆಳಗ್ಗೆ ಚಳಿಗೆ ಹಲವರಿಗೆ ಬೇಗ ಏಳುವುದಕ್ಕೆ ಮನಸ್ಸಾಗುವುದಿಲ್ಲ.

ಮುಂದಿನ ತಿಂಗಳು ಮತ್ತಷ್ಟು ಚಳಿಯ ಹವಾಮಾನ ಉಂಟಾಗಲಿದೆ, ಶೀತ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಚಳಿ ವಿಪರೀತವಾಗಿದೆ. ಇನ್ನೆರಡು ದಿನ ಚಳಿ ಇಲ್ಲಿ ಕಡಿಮೆಯಾದರೂ ಮತ್ತೆ ಶೀತ ಕಾಣಿಸಿಕೊಳ್ಳಲಿದೆ. ಉತ್ತರ ಒಳನಾಡು ಭಾಗಗಳಲ್ಲಿ ಚಳಿ ವಿಪರೀತವಾಗಲಿದ್ದು ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಹೇಳಲಾಗಿದೆ.

ತಾಪಮಾನ ಈಗಾಗಲೇ ಇಳಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಕನಿಷ್ಠ 14.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ 12 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 2016ರ ನಂತರ ಕಡಿಮೆ ತಾಪಮಾನ ದಾಖಲಾಗಿದ್ದು ಬೆಂಗಳೂರು ನಗರದಲ್ಲಿ ಕಳೆದ ಡಿಸೆಂಬರ್ 11ರಂದು 12 ಡಿಗ್ರಿ ಸೆಲ್ಸಿಯಸ್, 1883ರಲ್ಲಿ ಬೆಂಗಳೂರು ನಗರದಲ್ಲಿ ಡಿಸೆಂಬರ್ 29ರಂದು ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಆ ಸಮಯದಲ್ಲಿ ಬೆಂಗಳೂರು ನಗರದಲ್ಲಿ 8.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.

ಬೀದರ್ ನಲ್ಲಿ ಈ ಬಾರಿ ಅತಿ ಕಡಿಮೆ 5.6 ಡಿಗ್ರಿ ಸೆಲ್ಸಿಯಸ್, ವಿಜಯಪುರದಲ್ಲಿ 9.5 ಡಿಗ್ರಿ ಸೆಲ್ಸಿಯಸ್, ಧಾರವಾಡದಲ್ಲಿ 10.2 ಡಿಗ್ರಿ ಸೆಲ್ಸಿಯಸ್ ನಿನ್ನೆ ಬೆಳಗ್ಗೆ ದಾಖಲಾಗಿದೆ. ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಸ್, ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಲಾ ನಿನೊ ಪರಿಣಾಮದಿಂದ, ನೈರುತ್ಯ ಮತ್ತು ಈಶಾನ್ಯ ಮಾರುತದ ವಿಳಂಬದಿಂದ ಹವಾಮಾನ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com