ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ಆರು ಆರೋಪಿಗಳ ಬಂಧನ, 20 ಲಕ್ಷ ರೂ. ನಗದು, ನಾಲ್ಕು ಕಾರು, ಬೈಕ್ ವಶ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 20.5 ಲಕ್ಷ ರೂ.ನಗದು, ಕೃತ್ಯಕ್ಕೆ ಉಪಯೋಗಿಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 20.5 ಲಕ್ಷ ರೂ.ನಗದು, ಕೃತ್ಯಕ್ಕೆ ಉಪಯೋಗಿಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಗೆ ಬಳಿಸಲಾಗಿದ್ದ ಒಂದು ಇನೊವಾ ಕಾರು, 2 ಮಾರುತಿ ಸ್ವಿಫ್ಟ್ ಕಾರು, ಒಂದು ಮಾರುತಿ ರಿಟ್ಜ್ ಕಾರು, ಒಂದು ಕೆಟಿಎಂ ಡ್ಯೂಕ್ ದ್ವಿಚಕ್ರ ವಾಹನ ಮತ್ತು ಆಯುಧಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಐಜಿಪಿ ಸೀಮಂತ್ ಕುಮಾರ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡಿನ ಹೊಸೂರು ಟೌನ್ ಮೂಲದ ಬೆಂಗಳೂರಿನ ವಿನಾಯಕ ನಗರ ನಿವಾಸಿ ಡಿ.ಕವಿರಾಜ್ ಅಲಿಯಾಸ್ ರಾಜ್ (43), ಬೆಳ್ಳಂದೂರು ಸರ್ಜಾಪುರ ರಸ್ತೆಯ ಅರಳೂರು ನಿವಾಸಿ ಎಸ್.ಲಿಖಿತ್ ಅಲಿಯಾಸ್ ಗುಂಡ (20), ಸರ್ಜಾಪುರ ರಸ್ತೆ, ಅರಳೂರು ನಿವಾಸಿ ದ್ವಿತೀಯ ಬಿಕಾಂ ವಿದ್ಯಾರ್ಥಿ ಎಚ್.ಎ.ಉಲ್ಲಾಸ್  ಅಲಿಯಾಸ್ ಅಕ್ಕಿ (21), ಎಚ್.ಎಸ್.ಆರ್. ಲೇಔಟ್ ಯಲ್ಲುಕುಂಟೆ ನಿವಾಸಿ ಮನೋಜ್ ಅಲಿಯಾಸ್ ಮನು (20), ಅಗದೂರು ವಾರ್ಡ್ ನಂ 84ರ ನಿವಾಸಿ ಟಾಟಾ ಏಸ್ ಚಾಲಕ ರಾಘವೇಂದ್ರ ಎನ್. ಅಲಿಯಾಸ್ ರಘು (34) ಹಾಗೂ ಬೆಳ್ಳಂದೂರು –ಸರ್ಜಾಪುರ ರಸ್ತೆ ಅರಳೂರು ನಿವಾಸಿ ಪ್ರವೀಣ್ ಅಲಿಯಾಸ್  ನೇಪಾಳಿ (20) ಎಂಬವರನ್ನು ಬಂಧಿಸಲಾಗಿದ ಎಂದು ತಿಳಿಸಿದರು.

ವರ್ತೂರು ಪ್ರಕಾಶ್ ಅವರು ನವೆಂಬರ್ 25ರಂದು ತಮ್ಮ ಚಾಲಕ ಸುನೀಲ್ ಎಂಬವನೊಂದಿಗೆ ಬೆಗ್ಲಿಹೊಸಹಳ್ಳಿ ಫಾರಂ ನಿಂದ ಫಾರ್ಚೂನರ್ ಕಾರಿನಲ್ಲಿ ಬರುತ್ತಿದ್ದಾಗ ಎರಡು ಕಾರುಗಳಲ್ಲಿ 8 ಜನ ಅಪರಿಚಿತರು ಅಡ್ಡಗಟ್ಟಿ ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿಕೊಂಡು ಅಪಹರಣ ಮಾಡಿ 30 ಕೋಟಿ ರೂ.ಹಣಕ್ಕೆ ಬೇಡಿಕೆ  ಇಟ್ಟಿದ್ದರು. ಮಾತ್ರವಲ್ಲ ವರ್ತೂರು ಅವರಿಗೆ ಬೆದರಿಸಿ 48 ಲಕ್ಷ ರೂ. ಗಳನ್ನು ಪಡೆದು ಅವರನ್ನು ಸೆ.28ರಂದು ಬೆಳಗ್ಗಿನ ಜಾವ ಸುಮಾರು 4 ಗಂಟೆಗೆ ನಂದಗುಡಿ ಹೋಬಳಿ ಶಿವನಾಪುರ ಗ್ರಾಮದ ಬಳಿ ಬಿಟ್ಟು ಹೋಗಿದ್ದರು. ಈ ಬಗ್ಗೆ ವರ್ತೂರು ಪ್ರಕಾಶ್ ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿತ್ತು. ಸರಹದ್ದಿನ ಆಧಾರದ ಮೇರೆಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ ಕೋಲಾರ ಉಪ ವಿಭಾಗದ ಎಎಸ್ ಪಿ ಸಾಹಿಲ್ ಬಾಗ್ಲಾ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳ ಪತ್ತೆಗೆ ಕೋಲಾರ ಎಸ್ ಪಿ ಅವರು ಓರ್ವ ಎಎಸ್ ಪಿ, ಮೂವರು ಸಿಪಿಐ, ಮೂವರು ಪಿಎಸ್ ಐ, ಇಬ್ಬರು ಎಎಸ್ ಐ, ನಾಲ್ವರು ಎಚ್.ಸಿ. ಮತ್ತು ಆರು ಜನ ಪಿಸಿ ಅವರನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಿದ್ದರು.

ಪ್ರಮುಖ ಆರೋಪಿ ಡಿ.ಕವಿರಾಜ್ ಅಲಿಯಾಸ್ ರಾಜ್ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ತನಿಖಾ ತಂಡ ಆತನನ್ನು ಬೆನ್ನಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ನೀಡಿದ ಮಾಹಿತಿಯಂತೆ ಉಳಿದ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com