ಅಲೆಕ್ಸಾಂಡರ್ ಟೌನ್'ಶಿಪ್ ನಿವಾಸಿಗಳು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು.
ಅಲೆಕ್ಸಾಂಡರ್ ಟೌನ್'ಶಿಪ್ ನಿವಾಸಿಗಳು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು.

ರಾಜ್ಯಕ್ಕೂ ಕಾಲಿಟ್ಟ ಹೈಸ್ಪೀಡ್ ವೈರಸ್: ಬೆಂಗಳೂರಿಗೆ ಬಂದ ಮೂವರಲ್ಲಿ ರೂಪಾಂತರಿ ಕೊರೋನಾ, ಹೆಚ್ಚಿದ ಆತಂಕ

ಚೀನಾದಿಂದ ದೇಶಕ್ಕೆ ಒಕ್ಕರಿಸಿದ್ದ ಕೊರೋನಾ ಆರ್ಭಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವ ಈ ಹಂತದಲ್ಲಿಯೇ ಬ್ರಿಟನ್ ರೂಪಾಂತರಿ ಕೊರೋನಾ ಎಲ್ಲೆಡೆ ಆತಂಕವನ್ನು ಸೃಷ್ಟಿಮಾಡಿದೆ. 

ಬೆಂಗಳೂರು: ಚೀನಾದಿಂದ ದೇಶಕ್ಕೆ ಒಕ್ಕರಿಸಿದ್ದ ಕೊರೋನಾ ಆರ್ಭಟ ದಿನೇ ದಿನೇ ಕ್ಷೀಣಿಸುತ್ತಿದೆ ಎಂದು ನಿಟ್ಟಿಸಿರು ಬಿಡುತ್ತಿರುವ ಈ ಹಂತದಲ್ಲಿಯೇ ಬ್ರಿಟನ್ ರೂಪಾಂತರಿ ಕೊರೋನಾ ಎಲ್ಲೆಡೆ ಆತಂಕವನ್ನು ಸೃಷ್ಟಿಮಾಡಿದೆ. 

ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ಪ್ರಕಟಿಸಿರುವ ಮಾಹಿತಿಯಲ್ಲಿ ದೇಶದಲ್ಲಿ 6 ಮಂದಿಯಲ್ಲಿ ಹೊಸ ವೈರಾಣು ಪತ್ತೆಯಾಗಿದ್ದು, ಇದರಲ್ಲಿ ಮೂವರು ರಾಜ್ಯ ರಾಜಧಾನಿ ಬೆಂಗಳೂರಿನವರೇ ಆಗಿದ್ದಾರೆಂದು ತಿಳಿದುಬಂದಿದೆ. 

ರಾಜ್ಯದಲ್ಲಿ ಆಱಂಭದಲ್ಲಿ ಸೋಂಕು ದೃಢಪಟ್ಟಿದ್ದ ನಾಲ್ವರು ಬ್ರಿಟನ್ ಪ್ರವಾಸಿಗರಿಗೆ ಮಾತ್ರ ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಮೂವರಿಗೆ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟಿದ್ದರೆ, ಮತ್ತೊಬ್ಬರಿಗೆ ಮಾತ್ರ ನೆಗೆಟಿವ್ ಬಂದಿದೆ ಎಂದು ವರದಿಗಳು ತಿಳಿಸಿವೆ. 

ಉಳಿದವರಲ್ಲಿ 11 ಜನರ ಪರೀಕ್ಷೆ ನಡೆಯುತ್ತಿದ್ದು, 12 ಜನರ ಪರೀಕ್ಷೆ ಬಾಕಿ ಇದೆ. ಡಿ.19ರಂದು ಬ್ರಿಟನ್ ನಿಂದ ರಾಜ್ಯಕ್ಕೆ ವಾಪಸಾಗಿದ್ದ ಬೊಮ್ಮನಹಳ್ಳಿ ವಲಯದ ವಸಂತಪುರದ 34 ವರ್ಷದ ಮಹಿಳೆ ಮತ್ತು ಆಕೆಯ 6 ವರ್ಷದ ಮಗಳು ಹಾಗೂ ಜೆ,ಪಿ.ನಗರದ 34 ವರ್ಷದ ಮತ್ತೊಬ್ಬ ವ್ಯಕ್ತಿಗೆ ರೂಪಾಂತರಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 

ವಸಂತಪುರದ ತಾಯಿ ಮತ್ತು ಮಗಳನ್ನು ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್'ಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ಇನ್ನು ಮತ್ತೊಬ್ಬ ಸೋಂಕಿತ ವ್ಯಕ್ತಿಗೆ ಅಪೋಲೋ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. 

ಮೂವರ ಆರೋಗ್ಯದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ. ಸೂಕ್ತ ಚಿಕಿತ್ಸೆ ಹಾಗೂ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಭಾರತಕ್ಕೆ ವಾಪಸಾದ ವೇಳೆ ನಡೆಸಲಾದ ಕೊರೋನಾ ಪರೀಕ್ಷೆವೇಳೆ ಈ ಮೂವರಿಗೂ ಕೊರೋನಾ ದೃಢಪಟ್ಟಿ್ತ್ತು. ನಂತರ ಅವರಿಗೆ ರೂಪಾಂತರಿ ವೈರಾಣು ಪತ್ತೆಗೆ ನಿಮ್ಹಾನ್ಸ್ ನಲ್ಲಿ ವಂಶವಾಹಿ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷಾ ವರದಿಯನ್ನು ಕೇಂದ್ರಕ್ಕೆ ಕಳುಹಿಸಿದ ಬಳಿಕ ಮಂಗಳವಾರ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 6 ಮಂದಿಯಲ್ಲಿ ರೂಪಾಂತರಿ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದೆ. 

ಈ ನಡುವೆ ರೂಪಾಂತರಿ ಕೊರೋನಾ ವೈರಸ್ ದೃಢಪಟ್ಟಿರುವ ಮೂವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಒಟ್ಟು 42 ಮಂದಿಯನ್ನು ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ 14 ದಿನದ ಕ್ವಾರಂಟೈನ್'ಗೆ ಒಳಪಡಿಸಿದ್ದಾರೆ. ಸಂಪರ್ಕಿತರು ಬೇರೆಡೆ ಸಾಂಸ್ಥಿಕ ಕ್ವಾರಂಟೈನ್'ಗೆ ಆಗಮಿಸಿದ ಹಿನ್ನೆಲೆಯಲ್ಲಿ ಅಪಾರ್ಟ್'ಮೆಂಟ್'ನ್ನೇ ಕ್ವಾರಂಟೈನ್ ಕೇಂದ್ರವಾಗಿ ಅಧಿಕಾರಿಗಳು ಮಾರ್ಪಡಿಸಿ ಭದ್ರತೆಗೆ ಪೊಲೀಸ್ ಸಿಬ್ಬಂದಿ ಆಯೋಜಿಸಿದ್ದಾರೆ. 

ಬೆಂಗಳೂರಿನ ಮೂವರಿಗೆ ರೂಪಾಂತರಿ ಕೊರೋನಾ ವೈರಸ್ ತಗಲಿರುವ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎಚ್ಚೆತ್ತ ಅಧಿಕಾರಿಗಲು ಸೋಂಕಿತ ತಾಯಿ ಮತ್ತು ಮಗುವಿನ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಅವರು ವಾಸವಿದ್ದ ವಸಂತಪುರದ ಸಿರಿ ಎಂಬೆಸಿ ಅಪಾರ್ಟ್'ಮೆಂಟ್'ಗೆ ತೆರಳಿ ಇಡೀ ಅಪಾರ್ಟ್'ಮೆಂಟ್'ನ್ನು ಸೀಲ್ ಡೌನ್ ಮಾಡಿ 33 ಮಂದಿ ಸಂಪರ್ಕಿತರನ್ನು ಹೋಂ ಕ್ವಾರಂಟೈನ್'ಗೆ ಒಳಪಡಿಸಿದ್ದಾರೆ. 

ಇನ್ನು ಜೆಪಿನಗರದ ಮತ್ತೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದ ಆತನ ಕುಟುಂಬದ ಪತ್ನಿ, ಮಗ ಸೇರಿ ಒಟ್ಟು 9 ಮಂದಿಯನ್ನು ಮನೆಯಲ್ಲಿಯೇ ಕ್ವಾರಂಟೈನ್'ಗೆ ಒಳಪಡಿಸಲಾಗಿದೆ. 60 ವರ್ಷ ಮೇಲ್ಪಟ್ಟ ಹಾಗೂ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವ ಸಂಪರ್ಕಿತರನ್ನು ಹೈರಿಸ್ಕ್ ಎಂದು ಪರಿಗಣಿಸಿ ಅವರನ್ನು ಆಸ್ಪತ್ರೆಯಲ್ಲಿಟ್ಟು ನಿಗಾವಹಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ತಿಳಿಸಿದ್ದಾರೆ. 

ಬೊಮ್ಮನಹಳ್ಳಿ ವಿಭಾಗ ಜಂಟಿ ಆಯುಕ್ತ ರಾಮಕೃಷ್ಣ ಅವರು ಮಾತನಾಡಿ, ನಮಗೆ ಸಿಕ್ಕ ಮಾಹಿತಿ ಪ್ರಕಾರ ತಾಯಿ ಹಾಗೂ ಮಗು ಇಬ್ಬರೊಂದಿಗೂ ಇಬ್ಬರು ಪ್ರಾಥಮಿಕ ಸಂಪರ್ಕ ಹಾಗೂ 33 ಮಂದಿ ದ್ವಿತೀಯ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಈಗಾಗಲೇ ಇವರೆಲ್ಲರ ಸ್ವಾಬ್ ಸಂಗ್ರಹಿಸಲಾಗಿದ್ದು, ಪರೀಕ್ಷೆಗೆ ಕಳುಹಿಸಿ, ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ. ಕೆಮ್ಮು, ನೆಗಡಿ ಹಾಗೂ ಜ್ವರ ರೂಪಾಂತರಿ ಕೊರೋನಾದ ಲಕ್ಷಣಗಳಾಗಿವೆ. ತಾಯಿ ಹಾಗೂ ಮಗುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಕಲು ಮಾಡಲಾಗಿದ್ದು, ಅಪಾರ್ಟ್'ಮೆಂಟ್'ನಲ್ಲಿದ್ದವರೆಲ್ಲರನ್ನೂ ಇರುವ ಮನೆಗಳಲ್ಲೇ ಕ್ವಾರಂಟೈನ್'ಗೊಳಗಾಗುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

ಬಿಬಿಎಂಪಿ ಆರೋಗ್ಯಾಧಿಕಾರಿಗಳು ಪ್ರತೀನಿತ್ಯ ಇರವ ಆರೋಗ್ಯವನ್ನು ತಪಾಸಣೆ ನಡೆಸಲಿದ್ದಾರೆ. ಅಪಾರ್ಟ್'ಮೆಂಟ್'ನಲ್ಲಿ ಸಾಂಸ್ಥಿಕ ಕ್ವಾರಂಟೈನ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com