ಮಂಗಳೂರು: ಬಾವಿಗೆ ಬಿದ್ದ ಬೀದಿನಾಯಿಯನ್ನು ಕಾಪಾಡಿ ಮೇಲೆ ತಂದ ವೀರ ವನಿತೆ

ಮೂವತ್ತು ಅಡಿ ಆಳದ ಬಾವಿಗೆ ಬಿದ್ದ ಬೀದಿ ನಾಯಿಯನ್ನು ಮಹಿಳೆಯೊಬ್ಬರು ಬಾವಿಗಿಳಿದು ರಕ್ಷಿಸಿದ್ದು ಅವರ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 
ರಜನಿ ದಾಮೋದರ ಶೆಟ್ಟಿ ಬಾವಿಯೊಳಗಿಂದ ನಾಯಿಯನ್ನು ಕಾಪಾಡಿ ಮೇಲೆ ಬರುತ್ತಿರುವುದು
ರಜನಿ ದಾಮೋದರ ಶೆಟ್ಟಿ ಬಾವಿಯೊಳಗಿಂದ ನಾಯಿಯನ್ನು ಕಾಪಾಡಿ ಮೇಲೆ ಬರುತ್ತಿರುವುದು

ಮಂಗಳೂರು: ಮೂವತ್ತು ಅಡಿ ಆಳದ ಬಾವಿಗೆ ಬಿದ್ದ ಬೀದಿ ನಾಯಿಯನ್ನು ಮಹಿಳೆಯೊಬ್ಬರು ಬಾವಿಗಿಳಿದು ರಕ್ಷಿಸಿದ್ದು ಅವರ ಧೈರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. 


ಮಂಗಳೂರು ಸಮೀಪ ದೊಡ್ಡಹಿತ್ಲುವಿನ 40 ವರ್ಷದ ಮಹಿಳೆ ರಜನಿ ದಾಮೋದರ ಶೆಟ್ಟಿ ಎಂಬುವವರೇ ಬೀದಿನಾಯಿಯನ್ನು ಬಾವಿಯೊಳಗಿಂದ ಕಾಪಾಡಿದ ವೀರ ವನಿತೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಮಂಗಳೂರು ಹತ್ತಿರ ಬಳ್ಳಬಾಗ್ ಎಂಬಲ್ಲಿ ಬೀದಿನಾಯಿ ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿತ್ತು. ಅಲ್ಲಿದ್ದ ಪುರುಷರು ಮೇಲಿನಿಂದ ನಿಂತು ಬೀದಿನಾಯಿಯನ್ನು ಹೇಗಾದರೂ ಕಾಪಾಡಲು ಪ್ರಯತ್ನಿಸಿ ವಿಫಲರಾದರು. ಆಗ ಪ್ರಾಣಿಪ್ರಿಯೆ, ಬೀದಿ ಪ್ರಾಣಿಗಳನ್ನು ಈ ಹಿಂದೆ ರಕ್ಷಿಸಿದ್ದ ರಜನಿ ಶೆಟ್ಟಿಯನ್ನು ಕರೆದರು. 


ಬಾವಿಯೊಳಗೆ 12 ಅಡಿ ಆಳದವರೆಗೆ ನೀರು ಇತ್ತು. ನಾಯಿ ನೀರಿನಲ್ಲಿ ಒದ್ದಾಡುತ್ತಿದೆ. ಅದನ್ನು ನೋಡಿ ಸುಮ್ಮನೆ ಕೂರಲು ಸಾಧ್ಯವಾಗದೆ ರಜನಿ ಶೆಟ್ಟಿ ಹಗ್ಗದ ಸಹಾಯದಿಂದ ಬಾವಿಯೊಳಗೆ ಇಳಿದು ಮೊದಲು ನಾಯಿಯನ್ನು ಹಗ್ಗದ ಸಹಾಯದಿಂದ ಮೇಲಕ್ಕೆ ಎತ್ತಿ ನಂತರ ಹಗ್ಗವನ್ನು ತಮ್ಮ ಸೊಂಟಕ್ಕೆ ಸುತ್ತಿಕೊಂಡು ರಜನಿ ಶೆಟ್ಟಿ ಮೇಲಕ್ಕೆ ಬಂದರು. ರಜನಿಯವರಿಗೆ ಈಜು ಬರುವುದಿಲ್ಲ. ಆದರೂ ಧೈರ್ಯದಿಂದ ಬಾವಿಯೊಳಗೆ ಇಳಿದು ನಾಯಿಯನ್ನು ಕಾಪಾಡಿದ್ದಾರೆ.


ರಜನಿ ಶೆಟ್ಟಿಯವರು ತಮ್ಮ ಮನೆಯಲ್ಲಿ 14ಕ್ಕೂ ಹೆಚ್ಚು ಬೀದಿನಾಯಿಗಳನ್ನು ಸಾಕುತ್ತಾರಂತೆ. ಪ್ರತಿದಿನ 150ಕ್ಕೂ ಹೆಚ್ಚು ಬೀದಿನಾಯಿಗಳಿಗೆ ತಿನ್ನಲು ಆಹಾರ ನೀಡುತ್ತಾರೆ. ಅಪಘಾತದಲ್ಲಿ ಗಾಯಗೊಂಡ ನಾಯಿಗಳನ್ನು ಉಪಚರಿಸುತ್ತಾರೆ. ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ. 


ರಜನಿಯವರು ಬಾವಿಯೊಳಗಿಂದ ನಾಯಿಯನ್ನು ಕಾಪಾಡಿದ ವಿಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಅವರ ಮೊಬೈಲ್ ಗೆ ನಿರಂತರ ಫೋನ್ ಕರೆಗಳು ಬರುತ್ತಿವೆಯಂತೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com