27 ವರ್ಷದ ಬಳಿಕ ವೀರಪ್ಪನ್ ಸಹಚರನ ಪತ್ನಿ ಅಂದರ್: ವಿಚಾರಣೆ ವೇಳೆ ಈಕೆ ಹೇಳಿದ್ದೇನು?
ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ವಿಭಾಗ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Published: 02nd February 2020 11:45 PM | Last Updated: 02nd February 2020 11:51 PM | A+A A-

ವೀರಪ್ಪನ್ ಸಹಚರನ ಪತ್ನಿ
ಚಾಮರಾಜನಗರ: ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರನ ಪತ್ನಿಯನ್ನು ಕೊಳ್ಳೇಗಾಲ ಅಪರಾಧ ಪತ್ತೆ ವಿಭಾಗ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಸ್ಟೆಲ್ಲಾ ಅಲಿಯಾಸ್ ಸ್ಟೆಲ್ಲಾಮೇರಿ ಬಂಧಿತ ಆರೋಪಿ. ಪಾಲಾರ್ ಬಾಂಬ್ ಸ್ಫೋಟ ಪ್ರಕರಣ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರ ಹೊತ್ತೊಯ್ದ ಆರೋಪ ಈಕೆ ಮೇಲಿದೆ. ಈಕೆ ವೀರಪ್ಪನ್ ಗುಂಪಿಗೆ ಬಲವಂತವಾಗಿ ಸೇರಿಕೊಂಡಾಗ 13 ರ ಬಾಲಕಿಯಾಗಿದ್ದಳು ಎಂದು ಮೂಲಗಳು ತಿಳಿಸಿವೆ.
ಕಾಡುಗಳ್ಳ ವೀರಪ್ಪನ್ ಹುದುಗಿಸಿಟ್ಟಿದ್ದ ಹಣವನ್ನು ಸ್ಟೆಲ್ಲಾಳ ಭಾವ ಶೇಷರಾಜ್ ಲಪಟಾಯಿಸಿದ್ದನಂತೆ. ಈ ವಿಚಾರ ತಿಳಿದ ವೀರಪ್ಪನ್, ಶೇಷರಾಜ್ ಸೇರಿದಂತೆ ಸ್ಟೆಲ್ಲಾಳನ್ನು ಅಪಹರಿಸಿ ತನ್ನ ಹಣ ಕೊಡುವಂತೆ ತಾಕೀತು ಮಾಡಿದ್ದ. ಇದಕ್ಕೆ ಶೇಷರಾಜ್ ಕೂಡ ಒಪ್ಪಿದ್ದ. ಆ ವೇಳೆ, ವೀರಪ್ಪನ್ ಸಹಚರನಾದ ಸುಂಡ ಅಲಿಯಾಸ್ ವೆಲ್ಲೆಯನ್ ಸ್ಟೆಲ್ಲಾ ಮೇಲೆ ಮೋಹಗೊಂಡು ಬಲವಂತವಾಗಿ ವಿವಾಹ ಮಾಡಿಕೊಂಡಿದ್ದ.
ಒಂದೂವರೆ ವರ್ಷ ವೀರಪ್ಪನ್ ತಂಡದಲ್ಲೇ ಇದ್ದ ಸ್ಟೆಲ್ಲಾ, ಪಾಲಾರ್ ಬಾಂಬ್ ಸ್ಫೋಟ, ರಾಮಾಪುರ ಠಾಣೆಗೆ ಬೆಂಕಿ, ಶಸ್ತ್ರಾಸ್ತ್ರ ಹೊತ್ತೊಯ್ದ ಪ್ರಕರಣದ ಆರೋಪ ಹೊತ್ತಿದ್ದು, ಟಾಡಾ ಪ್ರಕರಣ ದಾಖಲಾಗಿದೆ.