ಸಾಹಿತ್ಯ ಜಾತ್ರೆಗೆ ಬಿಸಿಲ ನಗರಿ ಸಜ್ಜು; ಕಲಬುರಗಿ ಸಾಹಿತ್ಯ ಸಮ್ಮೇಳನದ ಕುರಿತು ನೀವು ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ

ಮೂರು ದಶಕದ ನಂತರ ಬಿಸಿಲು ನಗರಿ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರಗಲಿದ್ದು, ಮಧುವಣಗಿತ್ತಿಯಂತೆ ನಗರ ಸಿಂಗಾರಗೊಂಡಿದೆ. 
ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ
ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ

ಕಲಬುರಗಿ: ಮೂರು ದಶಕದ ನಂತರ ಬಿಸಿಲು ನಗರಿ ಕಲಬುರಗಿಯಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರಗಲಿದ್ದು, ಮಧುವಣಗಿತ್ತಿಯಂತೆ ನಗರ ಸಿಂಗಾರಗೊಂಡಿದೆ. 

ಇದೇ ತಿಂಗಳು 5ರಿಂದ ಮೂರು ದಿನಗಳ ಕಾಲ ಗುಲ್ಬರ್ಗ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಸಮ್ಮೇಳನದ ನಿಮಿತ್ಯ ನಗರದ ಸರ್ಕಾರಿ ಆಸ್ಪತ್ರೆ, ಬಸ್ಸು ನಿಲ್ದಾಣ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ ಸೇರಿ ಪ್ರಮುಖ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಅಲ್ಲದೇ, ಸುಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದೇನವಾಜ್ ದರ್ಗಾಕ್ಕೂ ವಿವಿಧ ಬಣ್ಣದ ವಿದ್ಯುತ್ ಲೈಟ್​​ಗಳನ್ನು ಅಳವಡಿಸಲಾಗಿದ್ದು, ಕನ್ನಡದ ಹಬ್ಬಕ್ಕಾಗಿ ಕಲಬುರಗಿ ನಗರ ಆಕರ್ಷಿಸುತ್ತಿದೆ. ಕಟೌಟ್, ಬ್ಯಾನರ್, ವಿದ್ಯುತ್ ದೀಪಾಲಂಕಾರ, ನಾಡಧ್ವಜಗಳೊಂದಿಗೆ ನಗರ ಸಿಂಗಾರಗೊಂಡಿದ್ದು, ಸಾಹಿತ್ಯ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.  ಸಮ್ಮೇಳನದಲ್ಲಿ ವಾಣಿಜ್ಯ 193, 415 ಪುಸ್ತಕ ಮಳಿಗೆಗಳು ಇರಲಿವೆ. ಈವರೆಗೆ 22,250 ಪ್ರತಿನಿಧಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೇ 72 ವಿಶೇಷ ಪ್ರತಿನಿಧಿಗಳಿಗೆ ಬ್ರೀಫ್​ಕೇಸ್ ನೀಡಲಾಗುತ್ತದೆ. ಇನ್ನು ಸಾಮಾನ್ಯ ಪ್ರತಿನಿಧಿಗಳಿಗೆ ಪರಿಸರ ಸ್ನೇಹಿ ಬ್ಯಾಗ್, ಪೆನ್, ಬ್ಯಾಡ್ಜ್ ಮತ್ತು ನೋಟ್​ಬುಕ್ ಒಳಗೊಂಡ ಕಿಟ್ ವಿತರಿಸಲಾಗುತ್ತದೆ.

ನಗರದಲ್ಲಿ 60 ಲಾಡ್ಜ್, 15 ಕಲ್ಯಾಣಮಂಟಪ, ಸರ್ಕಾರದ ಐದು ಅತಿಥಿಗೃಹ, ಗುಲ್ಬರ್ಗ ವಿವಿ, ವಿಟಿಯು, ಇಎಸ್​ಐಸಿ ಅತಿಥಿ ಗೃಹಗಳು, ಪ್ರಮುಖ ವಿದ್ಯಾಸಂಸ್ಥೆಗಳ ವಸತಿ ನಿಲಯಗಳಲ್ಲಿ ಪ್ರತಿನಿಧಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಬಸ್ಸು ಮತ್ತು ರೈಲ್ವೆ ನಿಲ್ದಾಣಗಳಲ್ಲಿ 7259542950, 8105542950, 7619542950, 9008542950 ಸಂಖ್ಯೆಯ ಸಹಾಯವಾಣಿ ತೆರೆಯಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಒಟ್ಟು 16 ಸಮಿತಿಗಳನ್ನು ರಚಿಸಲಾಗಿದ್ದು, ಅತಿಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಗರದಲ್ಲಿ 60 ಹೊಟೇಲ್‍ಗಳು, 17 ಶಾಲೆಗಳು, 10 ಕಲ್ಯಾಣ ಮಂಟಪಗಳು, 12 ವಸತಿ ನಿಲಯಗಳು, 9 ಅತಿಥಿ ಗೃಹಗಳು, 5 ಸರ್ಕಾರಿ ವಸತಿ ಗೃಹಗಳನ್ನು ಬಳಸಿಕೊಳ್ಳಲಾಗುತ್ತಿದೆ. 

ಆಹಾರ ಸಮಿತಿಯಿಂದ 150 ಕೌಂಟರ್ ಗಳನ್ನು ತೆರೆದಿದ್ದು, ಹೆಸರು ನೋಂದಾಯಿಸಿಕೊಂಡವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ, ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ ನಿರ್ವಹಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, 4,000 ಪೊಲೀಸರು, 3+1 ಪೊಲೀಸ್ ವರಿಷ್ಠಾಧಿಕಾರಿಗಳು, 15 ಎಸಿಪಿ, 25 ಸರ್ಕಲ್ ಇನ್ಸ್‌ ಪೆಕ್ಟರ್, 200 ಸಬ್‍ಇನ್ಸ್‌ಪೆಕ್ಟರ್, 10 ಕೆ.ಎಸ್.ಆರ್.ಪಿ. ತುಕಡಿ, 500 ಹೋಂ ಗಾರ್ಡ್, 700 ಟ್ರಾಫಿಕ್ ಪೊಲೀಸ್ ಹಾಗೂ 500 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಎಲ್ಲಾ ಸ್ಥಳಗಳಲ್ಲಿ ಸಿ.ಸಿ. ಟಿ.ವಿ. ಅಳವಡಿಸಲಾಗಿದೆ. ಈಗಾಗಲೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ರಾದ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಮಂಗಳವಾರ ಬೆಳಗ್ಗೆ 8.45ಕ್ಕೆ ಉದ್ಯಾನ ಎಕ್ಸ್ ಪ್ರೆಸ್ ರೈಲಿನ ಮೂಲಕ ಕಲಬುರಗಿ ನಗರಕ್ಕೆ ಆಗಮಿಸಿದ್ದಾರೆ.  ಸಮ್ಮೇಳನಾಧ್ಯಕ್ಷರ ಮೆರವಣಿಗೆ ಡಾ. ಎಸ್.ಎಂ. ಪಂಡಿತ ರಂಗಮಂದಿರದಿಂದ ಬುಧವಾರ ಬೆಳಗ್ಗೆ 8.30ಕ್ಕೆ ಹೊರಡಲಿದ್ದು, ವಿವಿಧ ಜಿಲ್ಲೆಗಳ 60 ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.  ನಾಳೆ ಬೆಳಿಗ್ಗೆ 11.30 ಗಂಟೆಗೆ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿನ ವಿಜಯ ಪ್ರಧಾನ ವೇದಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಮ್ಮೇಳನವನ್ನು ಉದ್ಘಾಟಿಸುವರು.

ರಾಜ್ಯದ ಉಪಮುಖ್ಯಮಂತ್ರಿಗಳು, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ಗೋವಿಂದ ಎಂ. ಕಾರಜೋಳ ಕಾರ್ಯಕ್ರಮದಲ್ಲಿ ಸ್ವಾಗತ ಕೋರುವರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮನು ಬಳಿಗಾರ ಆಶಯ ನುಡಿಗಳನ್ನಾಡುವರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ನಿಕಟಪೂರ್ವ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡುವರು. ಹಿರಿಯ ಸಾಹಿತಿ ಹಾಗೂ ಚಿಂತಕರಾದ ಡಾ. ಎಚ್.ಎಸ್. ವೆಂಟಕೇಶಮೂರ್ತಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಅವರು ವೇದಿಕೆ ಉದ್ಘಾಟಿಸುವರು. ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆ ಮಾಡುವರು. ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ವಿವಿಧ ಲೇಖಕರ ಪುಸ್ತಕಗಳನ್ನು ಬಿಡುಗಡೆ ಮಾಡುವರು. ಪ್ರಸಿದ್ಧ ಶಿಲ್ಪಚಿತ್ರ ಕಲಾವಿದ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರು ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಅವರು ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸುವರು. ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಮುಖ್ಯದ್ವಾರ ಉದ್ಘಾಟಿಸುವರು. ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಪುಸ್ತಕ ಮಳಿಗೆಗಳನ್ನು ಉದ್ಘಾಟಿಸುವರು. ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರು ಮಹಾಮಂಟಪ ಉದ್ಘಾಟಿಸಲಿದ್ದು, ಆಳಂದ ಶಾಸಕ ಸುಭಾಷ ಆರ್. ಗುತ್ತೇದಾರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.

ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಖನೀಜ್ ಫಾತೀಮಾ, ಡಾ. ಅವಿನಾಶ ಜಾಧವ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಕಾರ್ಯದರ್ಶಿ ಆರ್.ಆರ್. ಜನ್ನು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಗುಲಬರ್ಗಾ ವಿಶ್ವವಿದ್ಯಾಲಯದ ಶ್ರೀ ವಿಜಯ ಪ್ರಧಾನ ವೇದಿಕೆಯಲ್ಲಿ ನಾಳೆ ಮಧ್ಯಾಹ್ನ 3 ಗಂಟೆಗೆ ಬಸವರಾಜ ಪಾಟೀಲ ಸೇಡಂ ಅವರ ಅಧ್ಯಕ್ಷತೆಯಲ್ಲಿ “ಕಲ್ಯಾಣ ಕರ್ನಾಟಕ: ಅಂದು-ಇಂದು-ಮುಂದು” ವಿಷಯ ಕುರಿತು ಮೊದಲನೇಯ ಗೋಷ್ಠಿ ನಡೆಯಲಿದೆ.  ಈ ಗೋಷ್ಠಿಯಲ್ಲಿ ಡಾ.ಶ್ರೀನಿವಾಸ್ ಸಿರನೂರನೂರ ಅವರು 371(ಜೆ) ಅನುಷ್ಠಾನ ಮತ್ತು ಅಡಚಣೆಗಳು, ಡಾ. ಅಮರೇಶ ಯತಗಲ್ ಅವರು ಚರಿತ್ರೆ ಮತ್ತು ಪರಂಪರೆ ಕುರಿತು, ಡಾ. ವೀರಣ್ಣ ದಂಡೆ ಅವರು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಹಾಗೂ ಕೆ.ನೀಲಾ ಅವರು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳನ್ನು ಮಂಡಿಸಲಿದ್ದಾರೆ.

ಅಂದು ಸಂಜೆ 4.45 ಗಂಟೆಗೆ ಡಾ. ವಸಂತ ಕುಷ್ಟಗಿ ಅವರ ಅಧ್ಯಕ್ಷತೆಯಲ್ಲಿ “ಸಮಕಾಲೀನ ಸಾಹಿತ್ಯ: ಚಹರೆ ಮತ್ತು ಸವಾಲುಗಳು” ವಿಷಯ ಕುರಿತು ಎರಡನೇ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಡಾ.ವಸಂತ ಕುಷ್ಟಗಿ ಅವರು ಸಂಶೋಧನಾ ಸಾಹಿತ್ಯ, ಡಾ.ಚಂದ್ರಶೇಖರ್ ನಂಗಲಿ ಅವರು ಸಾಹಿತ್ಯ ವಿಮರ್ಶೆ, ಡಾ.ಪದ್ಮಿನಿ ನಾಗರಾಜ್ ಅವರು ಸೃಜನಶೀಲ ಸಾಹಿತ್ಯ ಹಾಗೂ ಪ್ರೊ.ಕಾಶೀನಾಥ ಅಂಬಲಗೆ ಅವರು ಅನುವಾದ ಸಾಹಿತ್ಯವನ್ನು ಮಂಡಿಸಲಿದ್ದಾರೆ. ವಿಶ್ವವಿದ್ಯಾಲಯದ ಆವರಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ ಸಭಾಂಗಣ (ಸಮಾನಾಂತರ ವೇದಿಕೆ-1) ದಲ್ಲಿ ಅಂದು ಮಧ್ಯಾಹ್ನ 2.45 ಗಂಟೆಗೆ “ಕನ್ನಡ ಭಾಷೆ: ಹೊಸ ತಂತ್ರಜ್ಞಾನ” ವಿಷಯ ಕುರಿತು ಒಂದನೇ ಗೋಷ್ಠಿ ನಡೆಯಲಿದೆ. 

ಡಾ. ಕರಿಸಿದ್ದಪ್ಪ ಆಶಯನುಡಿಗಳನ್ನಾಡಲಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅಧ್ಯಕ್ಷತೆ ವಹಿಸುವರು. ಈ ಗೋಷ್ಠಿಯಲ್ಲಿ ಟಿ.ಜಿ. ಶ್ರೀನಿಧಿ ಅವರು ಸಾಹಿತ್ಯದಲ್ಲಿ ತಂತ್ರಜ್ಞಾನದ ಬಳಕೆ, ಜಿ.ಎನ್. ನರಸಿಂಹಮೂರ್ತಿ ಅವರು ಭಾಷಾ ಕಲಿಕೆಯಲ್ಲಿ ತಂತ್ರಜ್ಞಾನ ಹಾಗೂ ಬೇಳೂರು ಸುದರ್ಶನ ಅವರಿಂದ ತಂತ್ರಜ್ಞಾನದಲ್ಲಿ ಅಳವಡಿಕೆಯ ಸಮಸ್ಯೆಗಳು ವಿಷಯಗಳನ್ನು ಮಂಡಿಸಲಿದ್ದಾರೆ.  ಅಂದು ಸಂಜೆ 4.45 ಗಂಟೆಗೆ ಡಾ. ಸತೀಶ್ ಕುಮಾರ ಹೊಸಮನಿ ಅವರ ಅಧ್ಯಕ್ಷತೆಯಲ್ಲಿ “ಪುಸ್ತಕ ಲೋಕ ವಿಷಯ” ಕುರಿತು ಎರಡನೇ ಗೋಷ್ಠಿ ನಡೆಯಲಿದೆ.  ಈ ಗೋಷ್ಠಿಯಲ್ಲಿ ಪ್ರಕಾಶ್ ಕಂಬತ್ತಳ್ಳಿ ಅವರು ಪುಸ್ತಕೋದ್ಯಮ-ಸವಾಲುಗಳು, ಡಾ. ಗಾಯತ್ರಿ ನಾವಡ ಅವರು ಲೇಖಕ-ಓದುಗ ಕುರಿತು ಹಾಗೂ ಡಾ. ಬಸವರಾಜ ಡೋಣ್ಣೂರ ಅವರು ಹೊಸ ಓದಿನ ಪ್ರೇರಣೆಗಳು ಕುರಿತ ವಿಷಯಗಳನ್ನು ಮಂಡಲಿದ್ದಾರೆ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಡಾ. ಬಿ.ಆರ್. ಅಂಬೇಡ್ಕರ ಸಭಾಂಗಣ (ಸಮಾನಾಂತರ ವೇದಿಕೆ-1)ಯಲ್ಲಿ ನಾಳೆ ಸಂಜೆ 6.30 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಂಗಭೂಮಿ ಹಾಗೂ ಚಲನಚಿತ್ರ ಹಿರಿಯ ಕಲಾವಿದರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ಉದ್ಘಾಟಿಸುವರು.  ಕಲಬುರಗಿ ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಘನವೆತ್ತ ಕುಲಾಧಿಪತಿ ಡಾ.ಸೈಯದ ಶಾಹ ಖುಸ್ರೋ ಹುಸೇನಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. 

ಕಲಬುರಗಿಯ ಮಾಲಾಶ್ರೀ ಫ.ಕಣವಿ ಅವರಿಂದ ಸುಗಮ ಸಂಗೀತ, ಮಾನ್ವಿಯ ಅಂಬಯ್ಯ ನೂಲಿ ಅವರಿಂದ ವಚನ ಸಂಗೀತ, ಬೆಂಗಳೂರಿನ ಪಂ. ನಾಗರಾಜರಾವ್ ಹವಾಲ್ದಾರ ಅವರಿಂದ ಹಿಂದೂಸ್ತಾನಿ ಸಂಗೀತ, ರಾಯಚೂರಿನ ಡಾ. ಪಂಡಿತ ನರಸಿಂಹಲು ವಡವಾಟಿ ಅವರಿಂದ ಕ್ಲಾರಿಯೋನೆಟ್ ವಾದನ, ಮೈಸೂರಿನ ಸುನೀತಾ ಚಂದ್ರಕುಮಾರ ಅವರಿಂದ ಕೃಷ್ಣ ಸಖಿ ನೃತ್ಯರೂಪಕ, ಕಲಬುರಗಿಯ ರಾಘವೇಂದ್ರ ಬಡಶೇಷಿ ಅವರಿಂದ ದಾಸವಾಣಿ, ಕಲಬುರಗಿಯ ಭೀಮಣ್ಣ ಜಾಧವ ಅವರಿಂದ ಸುಂದರಿವಾದನ, ಬೆಂಗಳೂರಿನ ಸತೀಶ ಹಂಪಿಹೊಳೆ ಹಾಗೂ ತಂಡದಿಂದ ಸುಗಮ ಸಂಗೀತ, ಕಲಬುರಗಿ ಕೋಟನೂರ (ಡಿ) ಸಿದ್ಧಶ್ರೀ ಪ್ರೌಢ ಶಾಲೆಯಿಂದ ಡೊಳ್ಳಿನ ಕುಣಿತ, ಧಾರವಾಡದ ಗಂಗಾಧರಮಾಂತ ಅವರಿಂದ ಭಾವಗೀತೆ, ಕಲಬುರಗಿಯ ಡಾ.ಶುಭಾಂಗಿ ಅವರಿಂದ ಭರತನಾಟ್ಯ, ಕೊಪ್ಪಳದ ದಾವಲ್ ಸಾಬ ಅತ್ತಾರ ಅವರಿಂದ ಗೀಗಿ ಪದ, ಕಲಬುರಗಿಯ ಜಯತೀರ್ಥ ಕುಲಕರ್ಣಿ ಅವರಿಂದ ಕೊಳಲು ವಾದನ, ಕಲಬುರಗಿಯ ಜಡೇಶ ಹೂಗಾರ ಅವರಿಂದ ತಬಲಾ ವಾದನ, ರಾಯಚೂರಿನ ದಾದಾಪೀರ್ ಅವರಿಂದ ತತ್ವಪದ, ಕೋಲಾರದ ಶ್ರೀ ಜಯ ನಾಟ್ಯ ಕಲಾ ಅಕಾಡೆಮಿಯಿಂದ ನೃತ್ಯರೂಪಕ ಕಾರ್ಯಕ್ರಮಗಳು ಜರುಗಲಿವೆ. 

ಅಂದು ಸಂಜೆ 6.40 ರಿಂದ ರಾತ್ರಿ 10.30 ಗಂಟೆಯವರೆಗೆ ಬೆಂಗಳೂರಿನ ಉಷಾ.ಬಿ ಅವರಿಂದ ಭರತನಾಟ್ಯ, ಪದ್ಮಿನಿ ಎಲ್ ಅವರಿಂದ ಭಾವಗೀತೆ, ಗದಗಿನ ಸಣ್ಣ ಮುದಿಯಪ್ಪ ಭಜಂತ್ರಿ ಅವರಿಂದ ಶಹನಾಯಿ ವಾದನ, ವಿಜಯಪುರದ ಪ್ರಕಾಶ ಸಿಂಗ ರಜಪೂತ ಅವರಿಂದ ಗಜಲ್ ಗಾಯನ, ಕಲಬುರಗಿಯ ನಿವೇದಿತಾ ನಾಗೇಂದ್ರಪ್ಪ ಹೊನ್ನಳ್ಳಿ ಅವರಿಂದ ಸಿತಾರವಾದನ, ಹೊಸಪೇಟೆಯ ವಿಜಯಲಕ್ಷ್ಮೀ ಅವರಿಂದ ಸುಗಮ ಸಂಗೀತ, ಹಗರಿಬೊಮ್ಮನಹಳ್ಳಿಯ ಭೀರಪ್ಪ ಬಾಣದ ಅವರಿಂದ ಭಾವಗೀತೆ, ಬೀದರ್‍ನ ಉಷಾ ಪ್ರಭಾಕರ ಅವರಿಂದ ನೂಪುರ ನೃತ್ಯ, ಬೆಂಗಳೂರಿನ ಲಕ್ಷ್ಮೀ ಮತ್ತು ತಂಡದಿಂದ ಜಾನಪದ ಸಮೂಹ ನೃತ್ಯ, ಕಲಬುರಗಿಯ ದತ್ತರಾಜ ಕಲಶೆಟ್ಟಿ ಅವರಿಂದ ತತ್ವಪದ ಗಾಯನ, ಶಿವಶರಣಪ್ಪ ಎಂ.ಪೂಜಾರಿ ಅವರಿಂದ ಹಿಂದೂಸ್ತಾನಿ ಸಂಗೀತ, ಮಲ್ಲಿಕಾರ್ಜುನ ಭಜಂತ್ರಿ ಅವರಿಂದ ಸುಗಮ ಸಂಗೀತ, ವಿಜಯಪುರದ ಕು. ದಿವ್ಯಾ ಹಾಗೂ ದಿಕ್ಷಾ ಭಿಸೆ ಅವರಿಂದ ಕೂಚಪುಡಿ ನೃತ್ಯ, ರವಿಕಾಂತ ಸದಾಶಿವ ಪೂಜಾರಿ ಅವರಿಂದ ಕಥಕ ನೃತ್ಯ, ಪ್ರಿಯಾಂಕ್ ಸರಶೇಟ್ ಅವರಿಂದ ಭರತನಾಟ್ಯ, ಕಲಬುರಗಿಯ ಗಂಗಾಂಭಿಕಾ ವೀರಯ್ಯ ಮಠಪತಿ ಅವರಿಂದ ಸುಗಮ ಸಂಗೀತ ಹಾಗೂ ಕು. ಸುಧಾರಾಣಿ ಅವರಿಂದ ಭಾವಗೀತೆ ಹಾಗೂ ತುಮಕೂರಿನ ಚಿಕ್ಕಪೇಟೆಯ ಎಸ್.ಎನ್.ರಮಾನಂದ ಅವರಿಂದ ಪೌರಾಣಿಕ ನಾಟಕ ಏರ್ಪಡಿಸಲಾಗಿದೆ. 

ಇನ್ನು, ಮಹಾತ್ಮಗಾಂಧಿ ಸಭಾಂಗಣ (ಸಮಾನಾಂತರ ವೇದಿಕೆ-2)ದಲ್ಲಿ ಜರುಗಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಲಬುರಗಿಯ ದಿಗಂಬರ ಈರಪ್ಪಾ ಪಂಚಾಳ ಅವರಿಂದ ಜಾನಪದ ಗೀತೆ, ಬೆಳಗಾವಿಯ ಬಸವರಾಜ ಅಡಿವೆಪ್ಪ ತಿಮ್ಮಾಪೂರ ಅವರಿಂದ ಸುಗಮ ಸಂಗೀತ, ಕೊಡಗಿನ ಅನುಷಾ ಕಲಾ ತಂಡದಿಂದ ಭಾವಗೀತೆ, ಕಲಬುರಗಿಯ ಎಂಜಲ್ ಅವರಿಂದ ಭರತನಾಟ್ಯ, ಗಣಪತರಾವ್ ಶಿಂಗಶೆಟ್ಟಿ ಅವರಿಂದ ಜಾನಪದ ಗೀತೆ, ಹಾಸನದ ನೃತ್ಯಂಜಲಿ ಕಲಾ ನಿಕೇತನ ಅವರಿಂದ ಭರತ ನಾಟ್ಯ, ಕಲಬುರಗಿಯ ಇಂಡಿಯನ್ ಕಲ್ಚರಲ್ ಸೆಂಟರ್ ಮತ್ತು ಚಾರಿಟೇಬಲ್ ಟ್ರಸ್ಟ್‍ದಿಂದ ನೃಪತುಂಗ ನಾಟಕ, ಸೂರ್ಯನಗರಿ ಸ್ವತಂತ್ರ ಕಲಾ ಸಂಘದಿಂದ ಸುರಪುರ ವೆಂಕಟಪ್ಪ ನಾಯಕ ನಾಟಕ ಪ್ರದರ್ಶನ, ಕೊಪ್ಪಳದ ಭೀಮವ್ವಾ ದೊಡ್ಡಬಾಳಪ್ಪ ಅವರಿಂದ ಬೊಂಬೆಯಾಟ ವಿರಾಟ ಪರ್ವ ಹಾಗೂ ಧಾರವಾಡದ ಸಮುದಾಯ ರಂಗತಂಡದಿಂದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com