ಬೆಂಗಳೂರು: ತಾಯಿಯನ್ನು ಕೊಂದು, ಸಹೋದರನ ಹತ್ಯೆಗೆ ಯತ್ನಿಸಿ, ಮಹಿಳಾ ಟೆಕ್ಕಿ ಪರಾರಿ

ಹೆತ್ತ ಮಗಳೇ ನಿದ್ರೆ ಮಾಡುತ್ತಿದ್ದ ತಾಯಿಯನ್ನು ಕೊಂದು, ಸಹೋದರನ ಹತ್ಯೆಗೆ ಯತ್ನಿಸಿರುವ ಘಟನೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೆತ್ತ ಮಗಳೇ ನಿದ್ರೆ ಮಾಡುತ್ತಿದ್ದ ತಾಯಿಯನ್ನು ಕೊಂದು, ಸಹೋದರನ ಹತ್ಯೆಗೆ ಯತ್ನಿಸಿರುವ ಘಟನೆ ಕೆ.ಆರ್‌.ಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರದ ಅಕ್ಷಯನಗರ ನಿವಾಸಿ ನಿರ್ಮಲಾ (54) ಕೊಲೆಯಾಗಿದ್ದು, ಘಟನೆಯಲ್ಲಿ ಈಕೆಯ ಸಹೋದರ ಹರೀಶ್‌ ಚಂದ್ರಶೇಖರ್‌ಗೆ(31) ಗಾಯವಾಗಿದೆ. 

ಕೊಲೆ ಆರೋಪಿ, ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದ ಅಮೃತಾ (33) ತಲೆಮರೆಸಿಕೊಂಡಿದ್ದು, ಆಕೆಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಕೊಲೆಯಾದ ನಿರ್ಮಲಾ ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದು, ಪುತ್ರ ಹರೀಶ್‌ ಮತ್ತು ಪುತ್ರಿ ಅಮೃತಾಳ ಜತೆ ಅಕ್ಷಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. 

ಅಮೃತಾ ಮಾರತ್ತಹಳ್ಳಿಯ ಸಿಂಫೋನಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಇತ್ತೀಚೆಗೆ ಅಮೃತಾಗೆ ಹೈದರಾಬಾದ್‌ನ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಉದ್ಯೋಗ ಸಿಕ್ಕಿತ್ತು. 

ಸಹೋದರ ಮತ್ತು ತಾಯಿಯನ್ನು ಹೈದರಾಬಾದ್‌ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಳು.

‘ಇಡೀ ಕುಟುಂಬ ವಿಮಾನದಲ್ಲಿ ಹೈದರಾಬಾದ್‌ಗೆ ತೆರಳಬೇಕಿತ್ತು. ಹಿಂದಿನ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದ್ದೆವು, ನಾನು ರೂಮ್‌ನಲ್ಲಿ ಮಲಗಿದ್ದೆ, ಅಮೃತಾ ಮತ್ತು ತಾಯಿ ನಿರ್ಮಲಾ ಹಾಲ್‌ನಲ್ಲಿ ಮಲಗಿದ್ದರು. 

ಬೆಳಗಿನ ಜಾವ ನಾಲ್ಕು ಗಂಟೆಗೆ ನನ್ನ ರೂಮ್‌ನ ಬೀರುವಿನ ಶಬ್ದವಾಯಿತು. ಕೂಡಲೇ ಎಚ್ಚರಗೊಂಡು ನೋಡಿದಾಗ ಅಮೃತಾ ಬೀರುವಿನಲ್ಲಿ ಹುಡುಕಾಟ ನಡೆಸಿದ್ದಳು. ಏನನ್ನು ಹುಡುಕುತ್ತಿದ್ದೀಯಾ ಎಂದು ಕೇಳಿದ್ದಕ್ಕೆ ಬಟ್ಟೆಗಳನ್ನು ಪ್ಯಾಕ್‌ ಮಾಡುತ್ತಿದ್ದೆನೆಂದು ಹೇಳಿ ರೂಮ್‌ನಿಂದ ಹೊರಗೆ ಹೋದಳು. 

ಮತ್ತೆ  1ಗಂಟೆಯ ಬಳಿಕ ಆಕೆ ರೂಮ್‌ಗೆ ಬಂದಿದ್ದನ್ನು ನೋಡಿದ ನಾನು ಎದ್ದು ಕುಳಿತುಕೊಂಡೆ, ನನ್ನ ಹತ್ತಿರ ಬಂದ ಆಕೆ ತನ್ನ ಕೈಯಲ್ಲಿದ್ದ ಚಾಕುವಿನಿಂದ ನನ್ನನ್ನು ಸಾಯಿಸುವ ಉದ್ದೇಶದಿಂದ ಕತ್ತಿನ ಬಲ ಭಾಗಕ್ಕೆ ಚುಚ್ಚಿದಳು. 

ನಾನು ಏಕೆ ಈ ರೀತಿ ಮಾಡುತ್ತಿದ್ದೇಯಾ ಎಂದು ಕೇಳಿದ್ದಕ್ಕೆ ತಾನು ಸುಮಾರು 15 ಲಕ್ಷದಷ್ಟುಸಾಲ ಮಾಡಿದ್ದೇನೆ. ಸಾಲಗಾರರು ಭಾನುವಾರ ಮನೆಯ ಹತ್ತಿರ ಬರುತ್ತೇನೆಂದು ಹೇಳಿದ್ದಾರೆ. ಸಾಲಗಾರರು ಬಂದರೆ ಮರ್ಯಾದೆ ಹೋಗಬಾರದು. ಅದಕ್ಕೆ ನಿಮ್ಮಿಬ್ಬರನ್ನು ಕೊಲೆ ಮಾಡಿ ಹೋಗುತ್ತೇನೆಂದು ಹೇಳಿದಳು ಎಂದು ಹರೀಶ್‌ ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com