ಚುನಾವಣೆ: ನಾಮಪತ್ರ ಸಲ್ಲಿಸಿರುವ ಡಿಸಿಎಂ ಲಕ್ಷ್ಮಣ ಸವದಿಗೆ ಸಂಕಷ್ಟ!?

ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನ ಪರಿಷತ್ ಉಪ ಚುನಾನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಸಂಕಷ್ಟ ಶುರುವಾದಂತಾಗಿದೆ. 
ಚುನಾವಣೆ: ನಾಮಪತ್ರ ಸಲ್ಲಿಸಿರುವ ಡಿಸಿಎಂ ಲಕ್ಷ್ಮಣ ಸವದಿಗೆ ಸಂಕಷ್ಟ!?
ಚುನಾವಣೆ: ನಾಮಪತ್ರ ಸಲ್ಲಿಸಿರುವ ಡಿಸಿಎಂ ಲಕ್ಷ್ಮಣ ಸವದಿಗೆ ಸಂಕಷ್ಟ!?

ಬೆಂಗಳೂರು: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನ ಪರಿಷತ್ ಉಪ ಚುನಾನಾವಣೆಗೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಸಂಕಷ್ಟ ಶುರುವಾದಂತಾಗಿದೆ. 

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ಕಣಕ್ಕೆ ಇಳಿದಿದ್ದು, ಅವಿರೋಧವಾಗಿ ಆಯ್ಕೆಯಾಗುವ ಲೆಕ್ಕಾಚಾರದಲ್ಲಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಆತಂಕ ಶುರುವಾಗಿದೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಉಂಟಾಗುವ ಅಸಮಾಧಾನದ ಪ್ರಯೋಜನ ಪಡೆಯುವ ಲೆಕ್ಕಾಚಾರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಮಂತ್ರಿಸ್ಥಾನ ಸಿಗದವರಿಂದ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾದರೆ ಅದರ ನೇರ ಪರಿಣಾಮ ಪರಿಷತ್ ಚುನಾವಣೆ ಮೇಲಾಗಲಿದೆ.  

ಪಕ್ಷೇತರ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅನಿಲ್ ಕುಮಾರ್ ಅವರು ವಿಧಾನಸಭೆ ಕಾರ್ಯದರ್ಶಿ, ಚುನಾವಣಾಧಿಕಾರಿ ಎಂ ಕೆ ವಿಶಾಲಾಕ್ಷಿ ಅವರಿಗೆ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಾಜಿ ಸಚಿವ ರೇವಣ್ಣ ಸೇರಿದಂತೆ ಜೆಡಿಎಸ್ ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಆಣತಿಯಂತೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ತಾಂತ್ರಿಕ ತೊಂದರೆಗಳು ಆಗಬಾರದು ಎಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಹಿಂದೆ ಬಿಬಿಎಂಪಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ, ದೇವೇಗೌಡರ ರಾಜಕೀಯ ತಂತ್ರಗಾರಿಕೆಯಿಂದ ಬಿಬಿಎಂಪಿಯಲ್ಲಿ ಬಿಜೆಪಿ ಅಧಿಕಾರ ವಂಚಿತವಾಗಿತ್ತು. 

ಒಂದೇ ಸ್ಥಾನಕ್ಕೆ ಚುನಾವಣೆ; ಮತ ಮೌಲ್ಯವಿಲ್ಲದೆ ನಡೆಯಲಿದೆ ಚುನಾವಣೆ

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಒಂದಕ್ಕಿಂತ ಹೆಚ್ಚು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವಾಗ ಮತಮೌಲ್ಯವನ್ನು ನಿಗದಿ ಮಾಡಲಾಗುತ್ತದೆ. ಸದ್ಯ ಒಂದು ಸ್ಥಾನಕ್ಕೆ ಮಾತ್ರ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಗಾಗಿ ಚುನಾವಣೆ ನಡೆಯುತ್ತಿದೆ. ಹಾಗಾಗಿ ಇಲ್ಲಿ ಮತಮೌಲ್ಯ ಇರುವುದಿಲ್ಲ. 

ಹಾಲಿ ವಿಧಾನಸಭೆಯ ಒಟ್ಟು ಸಂಖ್ಯಾ ಬಲ 223. ಈ ಸಂಖ್ಯೆಯಲ್ಲಿ ಅತಿಹೆಚ್ಚು ಮತಗಳನ್ನು ಪಡೆಯುವ ಅಭ್ಯರ್ಥಿ ಜಯಗಳಿಸುತ್ತಾರೆ. ವಿಧಾನಸಭೆಗೆ ನಾಮನಿರ್ದೇಶಿತ ಶಾಸಕರಿಗೂ ಕೂಡ ಮತದಾನನ ಹಕ್ಕಿದೆ. ನಾಮನಿರ್ದೇಶಿತ ಸದಸ್ಯೆ ವಿನಿಶಾ ನಿರೋ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ನೇಮಕವಾಗಿದ್ದಾರೆ. ಹಾಗಾಗಿ ಅವರ ಬೆಂಬಲ ಕೂಡ ಮೈತ್ರಿ ಅಭ್ಯರ್ಥಿಗೆ ಸಿಗಲಿದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕುತೂಹಲ ಮೂಡಿಸಿದೆ.

ಗೌಪ್ಯ ಮತದಾನದ ಮೂಲಕ ಮತದಾನ; ಅಡ್ಡ ಮತದಾನದ ಆತಂಕ

ಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯಲಿದೆ. ಹಾಗಾಗಿ ಯಾವ ಶಾಸಕರು ಯಾರಿಗೆ ಮತ ಹಾಕುತ್ತಾರೆ ಎಂಬುದು ಬಹಿರಂಗವಾಗುವುದಿಲ್ಲ. ಹೀಗಾಗಿ ಅಡ್ಡಮತದಾನ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಮತ ಎಣಿಕೆಯ ಬಳಿಕವಷ್ಟೇ ಯಾರಿಗೆ ಎಷ್ಟು ಮತಗಳು ಬಿದ್ದಿವೆ ಎಂಬುದು ಗೊತ್ತಾಗುತ್ತದೆ. ಆದರಿಂದ ಬಿಜೆಪಿಯಲ್ಲಿನ ಸಂಪುಟ ವಿಸ್ತರಣೆ ಅಸಮಾಧಾನ ಹೆಚ್ಚಾದರೆ ಅದರ ಲಾಭ ಪಡೆಯುವುದು ಕಾಂಗ್ರೆಸ್-ಜೆಡಿಎಸ್ ಲೆಕ್ಕಾಚಾರ ಎಂದು ತಿಳಿದು ಬಂದಿದೆ.

ಅಡ್ಡ ಮತದಾನ ಮಾಡುವುದರಿಂದ ಹೆಚ್ಚಿನ ಪರಿಣಾಮವು ಹಾಲಿ ಶಾಸಕರಿಗೆ ಆಗುವುದಿಲ್ಲ. ಹಿಂದೆ ಜೆಡಿಎಸ್ ಪಕ್ಷದ ಬಂಡಾಯ ಶಾಸಕರಾಗಿದ್ದ ಮಾಜಿ ಸಚಿವರಾದ ಚೆಲುವರಾಯಸ್ವಾಮಿ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ೮ ಶಾಸಕರು ಆಗ ನಡೆದಿದ್ದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಮೂಲಕ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿದ್ದರು. ಜೆಡಿಎಸ್ ಅವರನ್ನು ವಜಾ ಮಾಡಿದ್ದರೂ ಶಾಸಕರಾಗಿಯೆ ಅವರೆಲ್ಲರೂ ಮುಂದುವರೆದಿದ್ದರು. ಹಾಗಾಗಿ ಅದೇ ಲೆಕ್ಕಾಚಾರದಲ್ಲಿ ಈಗ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ.

223 ಶಾಸಕರ ಪೈಕಿ ಅತಿಹೆಚ್ಚು ತಮಗಳನ್ನು ಪಡೆಯುವ ಅಭ್ಯರ್ಥಿ ಜಯಗಳಿಸಲಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಅಭ್ಯರ್ಥಿಗೆ ಯಾವುದೇ ತೊಂದರೆ ಕಾಣಿಸುತ್ತಿಲ್ಲ. ಆದರೆ 10ಕ್ಕೂ ಹೆಚ್ಚು ಶಾಸಕರು ಅಡ್ಡಮತದಾನ ಮಾಡಿದರೆ ಡಿಸಿಎಂ ಲಕ್ಷ್ಮಣ ಸವದಿ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗಲಿದೆ.

ಒಳ್ಳೆಯ ಸಮಸಯದಲ್ಲಿ ನಾಮಪತ್ರ ಸಲ್ಲಿಕೆ; ಮೈತ್ರಿ ಅಭ್ಯರ್ಥಿ ಗೆಲ್ಲುತ್ತಾರೆ ಎಂದ ರೇವಣ್ಣ

ಸಮಾನ ಮನಸ್ಕರು ಎಲ್ಲ ಸೇರಿ ಅನಿಲ್ ಕುಮಾರ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದೇವೆ. ನಮ್ಮೆಲ್ಲರ ಬೆಂಬಲ ಅವರಿಗಿದೆ. ಜೆಡಿಎಸ್ ಪಕ್ಷದಿಂದ ನಾವೂ ಬೆಂಬಲ ಕೊಟ್ಟಿದ್ದೇವೆ. ನಮ್ಮ ಪಕ್ಷದ ಎಲ್ಲ ಮುಖಂಡರೂ ಸೇರಿ ನಿರ್ಧರಿಸಿದ  ಬಳಿಕ ಬೆಂಬಲ ಕೊಟ್ಟಿದ್ದೇವೆ. ಮೈತ್ರಿ ಅಭ್ಯರ್ಥಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಕೆಗೆ ಒಳ್ಳೆಯ ಮುಹೂರ್ತ ಕೇಳಿದ್ದರು. ಒಳ್ಳೆಯ ಸಮಯದಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದೇವೆ. ನಮ್ಮ ಅಭ್ಯರ್ಥಿ ಅನಿಲ್ ಕುಮಾರ್ ಅವರು ಡಿಸಿಎಂ ಸವದಿ ಎದುರು ಗೆದ್ದೆ ಗೆಲ್ಲುತ್ತಾರೆ ಎಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಹೇಳಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಎಲ್ಲರ ವಿಶ್ವಾಸ ಪಡೆದು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ನಾಮಪತ್ರ ಸಲ್ಲಿಕೆ ಬಳಿಕೆ ಪಕ್ಷೇತರ ಅಭ್ಯರ್ಥಿ ಅನಿಲ್ ಕುಮಾರ್ ಹೇಳಿದ್ದಾರೆ.

ರಾಜಕೀಯದಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು. ಗೆಲ್ಲುವ ಲೆಕ್ಕಾಚಾರ ಇಟ್ಟುಕೊಂಡವರು ಸೋತಿರುವ ಉದಾಹರಣೆಗಳು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿವೆ. ಹಾಗಾಗಿ  ಅವಿರೋಧ ಆಯ್ಕೆಯ ಹೇಳಿಕೆ ಕೊಟ್ಟಿದ್ದ ಡಿಸಿಎಂ ಲಕ್ಷ್ಣಣ ಸವದಿ ಅವರಿಗೆ ಚುನಾವಣೆ ಬಿಸಿ ಮುಟ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com