ಬೆಂಗಳೂರು: ಹಸುಗೂಸಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ಜಯದೇವ ವೈದ್ಯರ ತಂಡ
ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ತಂದ ನಲ್ವತ್ತು ದಿನಗಳ ಹಸುಗೂಸು ಸೈಫುಲ್ ಅಝ್ಮಾನ್‌ನ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ನಗರದ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
Published: 10th February 2020 05:56 PM | Last Updated: 10th February 2020 05:56 PM | A+A A-

ಬೆಂಗಳೂರಿನ ಜಯದೇವ ಆಸ್ಪತ್ರೆ
ಬೆಂಗಳೂರು: ಮಂಗಳೂರಿನಿಂದ ಆಂಬುಲೆನ್ಸ್ ಮೂಲಕ ತಂದ ನಲ್ವತ್ತು ದಿನಗಳ ಹಸುಗೂಸು ಸೈಫುಲ್ ಅಝ್ಮಾನ್‌ನ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ನಗರದ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
ಗುರುವಾರ ಸೈಫುಲ್‌ನನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಶೂನ್ಯ ಸಂಚಾರ(ಝೀರೋ ಟ್ರಾಫಿಕ್)ವ್ಯವಸ್ಥೆಯಲ್ಲಿ ಅಂಬುಲೆನ್ಸ್ ಮೂಲಕ ರವಾನಿಸಲಾಗಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿತ್ತು. ಚಾಲಕ ಹನೀಫ್ ಅವರು ಮಂಗಳೂರಿನಿಂದ ಅಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ 4ಗಂಟೆ 32ನಿಮಿಷದಲ್ಲಿ ಬೆಂಗಳೂರಿಗೆ ತಲುಪಿಸಿದ್ದರು.
ಜಯದೇವ ಆಸ್ಪತ್ರೆಯ ಡಾ.ಜಯಂತ್ ಕುಮಾರ್ ನೇತೃತ್ವದಲ್ಲಿ ಡಾ.ಆನಂದ್, ಡಾ.ಜಯಂತ್ ಸೇರಿದಂತೆ ಒಟ್ಟು 12 ವೈದ್ಯರ ತಂಡ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, ಇನ್ನೂ ನಾಲ್ಕೈದು ದಿನ ಮಗುವಿಗೆ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ಚಿಕಿತ್ಸೆಗೆ 2.5 ಲಕ್ಷ ರೂ. ಖರ್ಚಾಗಿದ್ದು, 1 ಲಕ್ಷ ರೂ. ಬಿಪಿಎಲ್ ಕಾರ್ಡಿನಿಂದ ಭರಿಸಲಾಗುವುದು. ಉಳಿದ ಹಣವನ್ನು ಜಯದೇವ ಆಸ್ಪತ್ರೆಯೇ ನೋಡಿಕೊಳ್ಳಲಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನೆಯ ನಿರ್ದೇಶಕ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.