ವಿದ್ಯುನ್ಮಾನ ಮಾಧ್ಯಮದಿಂದ ಭಾಷೆ ವಿರೂಪ, ಕನ್ನಡದ ಅಸ್ಮಿತೆಗೆ ಅಪಾಯ: ನಾಗಾಭರಣ

ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ಭಾಷಾ ಬಳಕೆ ವಿರೂಪಗೊಳ್ಳುತ್ತಿರುವುದು ಸಮಾಜ ಹಾಗೂ ಕನ್ನಡದ ಅಸ್ಮಿತೆಯ ಮೇಲೆ ಗಂಭೀರ ಅಪಾಯ ಎದುರಾಗಿದ್ದು, ಕನ್ನಡತನ ಉಳಿಸಿಕೊಳ್ಳುವುದು ಸಾವಾಲಿನ ಕೆಲಸ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ನಿರ್ದೇಶಕ ನಾಗಾಭರಣ (ಸಂಗ್ರಹ ಚಿತ್ರ)
ನಿರ್ದೇಶಕ ನಾಗಾಭರಣ (ಸಂಗ್ರಹ ಚಿತ್ರ)

ಬೆಂಗಳೂರು: ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನ್ನಡ ಭಾಷಾ ಬಳಕೆ ವಿರೂಪಗೊಳ್ಳುತ್ತಿರುವುದು ಸಮಾಜ ಹಾಗೂ ಕನ್ನಡದ ಅಸ್ಮಿತೆಯ ಮೇಲೆ ಗಂಭೀರ ಅಪಾಯ ಎದುರಾಗಿದ್ದು, ಕನ್ನಡತನ ಉಳಿಸಿಕೊಳ್ಳುವುದು ಸಾವಾಲಿನ ಕೆಲಸ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಭವನದ ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ ಅಯೋಜಿಸಲಾಗಿದ್ದ “ಸಂವಹನದಲ್ಲಿ ಕನ್ನಡ ಭಾಷೆ ಬಳಕೆ” ಕುರಿತ ಸಂವಾದಲ್ಲಿ ಮಾತಾನಾಡಿದ ಅವರು, ವಿದ್ಯುನ್ಮಾನ ಮಾಧ್ಯಮಗಳು  ಕನ್ನಡದ ಮೂಲ ಪದಗಳನ್ನು ಪ್ರಯೋಗ ಮಾಡದೇ ತಂತ್ರಜ್ಞಾನದಿಂದ ರೂಪುಗೊಂಡ ಭಾಷೆಯನ್ನು ಬಳಕೆ ಮಾಡುತ್ತಿರುವುದು ದುರದೃಷ್ಟಕರ ಎಂದರು.

ವಿದ್ಯುನ್ಮಾನ ಮಾಧ್ಯಮಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಹೊಸ ಪೀಳಿಗೆಗೆ ಬೇಕಾದ ಕನ್ನಡವನ್ನು, ಕನ್ನಡಭಾಷೆಯನ್ನು, ನೀಡುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ವಿದ್ಯುನ್ಮಾನ ಮಾಧ್ಯಮಗಳು ಟಿ.ಆರ್.ಪಿ ನೆಪದಲ್ಲಿ ಸದಭಿರುಚಿ, ಶಿಷ್ಠಾಚಾರವುಳ್ಳ ಶುದ್ಧ ಭಾಷಾ ಪ್ರಯೋಗಕ್ಕೆ ಒತ್ತು ನೀಡದೆ ಭಾಷೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸಮಾಜದ ಮೇಲೆ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯ ಮೇಲೆ ದುಪ್ಪರಿಣಾಮ ಬೀರುತ್ತಿರುವುದನ್ನು ಕಾಣಬಹುದಾಗಿದೆ. ಭಾಷೆ ಮತ್ತು ಸಂಸ್ಕೃತಿಯನ್ನು ದುರ್ಬಳಕೆ ಮಾಡಿಕೊಳ್ಳದೇ ಸುಸಂಸ್ಕತ ಸಮಾಜಕ್ಕೆಬೇಕಾದ ಸರಳ ಹಾಗೂ ಪರಿಶುದ್ಧ ಭಾಷೆಯನ್ನು ಬಳಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು. 

ವಿದ್ಯುನ್ಮಾನ ಮಾಧ್ಯಮದ ನಿರ್ವಾಹಕರು, ಸುದ್ಧಿ ನಿರ್ವಾಹಕರಿಗೆ ಕನ್ನಡ ಭಾಷಾ ಬಳಕೆಯ ದೃಷ್ಟಿಯಿಂದ ಸಂವಹನದಲ್ಲಿ ಕನ್ನಡ ಭಾಷಾ ಪ್ರಯೋಗ ಕುರಿತಂತೆ, “ಮಾಧ್ಯಮ ಭಾಷೆ-ಸಂಸ್ಕಂತಿ-ಸಮಾಜ” ಕಾರ್ಯಾಗಾರವನ್ನು ಆಯೋಜಿಸಲು ಚಿಂತನೆ ನಡೆದಿದ್ದು, ಈ ಕಾರ್ಯಾಗಾರದಲ್ಲಿ ಭಾಷಾ ಪ್ರಯೋಗದ ಸಾಮಾಜಿಕ ಹೊಣೆಗಾರಿಕೆಯನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಆಗಬೇಕಾಗಿದೆ ಎಂದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷ ಪದ್ಮರಾಜ ದಂಡಾವತಿ, ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯಾದರ್ಶಿಗಳಾದ ಎನ್. ಭೃಂಗೀಶ್, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕರಾದ ಹೆಚ್.ಬಿ. ದಿನೇಶ್, ಎ.ಆರ್. ಪ್ರಕಾಶ್, ಬಸವರಾಜ ಕಂಬಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳೀಧರ್, ನಮ್ಮ ರೇಡಿಯೋ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಅವನೀದರ, ಹಿರಿಯ ಪತ್ರಕರ್ತರಾದ ಇ.ವಿ.ಸತ್ಯನಾರಾಯಣ, ಲಕ್ಷ್ಮಣ್ ಕೊಡಸೆ, ಸಮುದಾಯ ರೇಡಿಯೋ ಮುಖ್ಯಸ್ಥರುಗಳಾದ ಶಮಂತ, ಅಬ್ದುಲ್ ರೆಹಮಾನ್ ಪಾಷಾ ಉಪಸ್ಥಿತರಿದ್ದರು.  ಕರ್ನಾಟಕ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಸಿ.ರೂಪಾ ಎಲ್ಲರನ್ನು ಸ್ವಾಗತಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com