ಮಂಡ್ಯದಲ್ಲಿ ಅನಿಷ್ಟ ಪದ್ಧತಿ ಜೀವಂತ: ಮುಟ್ಟಾದ ಮಹಿಳೆಯರು, ಬಾಣಂತಿಯರಿಗಿಲ್ಲ ಪ್ರವೇಶ.!

ಆಧುನಿಕ ಕಾಲಘಟ್ಟದಲ್ಲಿರು ನಮ್ಮೋಳಗೆ ಈಗಲೂ ಮೌಢ್ಯಾಚರಣೆ ನಿರಾತಂಕವಾಗಿ ಸಾಗಿದೆ, ಮಾಟ ಮಂತ್ರ, ಬಲಿಯಂತಹ ಮೌಢ್ಯಗಳಷ್ಟೇ ಅಲ್ಲ. ಮುಟ್ಟಾದ ಮಹಿಳೆಯರು, ಬಾಣಂತಿಯರು ಊರೊಳಕ್ಕೆ ಪ್ರವೇಶ ಮಾಡಲೇಬಾರದು ಎನ್ನೋ ಅಂದ ಮೌಢ್ಯಾಚರಣೆಯಂತಹ ಅನಿಷ್ಟ ಪದ್ಧತಿ ಇಂದಿಗೂ ನಮ್ಮೊಳಗೆ ಜೀವಂತ ಸಾಕ್ಷಿಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಡ್ಯ: ಆಧುನಿಕ ಕಾಲಘಟ್ಟದಲ್ಲಿರು ನಮ್ಮೋಳಗೆ ಈಗಲೂ ಮೌಢ್ಯಾಚರಣೆ ನಿರಾತಂಕವಾಗಿ ಸಾಗಿದೆ, ಮಾಟ ಮಂತ್ರ, ಬಲಿಯಂತಹ ಮೌಢ್ಯಗಳಷ್ಟೇ ಅಲ್ಲ. ಮುಟ್ಟಾದ ಮಹಿಳೆಯರು, ಬಾಣಂತಿಯರು ಊರೊಳಕ್ಕೆ ಪ್ರವೇಶ ಮಾಡಲೇಬಾರದು ಎನ್ನೋ ಅಂದ ಮೌಢ್ಯಾಚರಣೆಯಂತಹ ಅನಿಷ್ಟ ಪದ್ಧತಿ ಇಂದಿಗೂ ನಮ್ಮೊಳಗೆ ಜೀವಂತ ಸಾಕ್ಷಿಯಾಗಿವೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿಯೇ ಈ ಅನಿಷ್ಠಪದ್ದತಿ ಚಾಲ್ತಿಯಲ್ಲಿದೆ, ಆ ಗ್ರಾಮಕ್ಕೆ ಮುಟ್ಟಾದವರಿಗೆ, ಬಾಣಂತಿಯರಿಗೆ ಪ್ರವೇಶವಿಲ್ಲ.. ಅಕಸ್ಮಾತ್ ಅವರೇನಾದ್ರೂ ಗ್ರಾಮಕ್ಕೆ ಪ್ರವೇಶಿಸಿದ್ರೆ, ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದು ಅಲ್ಲಿನವರ ನಂಬಿಕೆ. ಈ ಅನಿಷ್ಟ ಪದ್ಧತಿಯಿಂದಾಗಿ, ಮುಟ್ಟಾದ ಹೆಣ್ಮಕ್ಕಳು ಹಾಗೂ ಬಾಣಂತಿಯರು ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿ ಮುಟ್ಟಾದವರು,ಗರ್ಭಿಣಿಯರು,ಬಾಣಂತಿಯರು ಊರಿನಿಂದ ಹೊರಗೆ ಜೀವಿಸಬೇಕು, ಒಂದು ವೇಳೆ ಅವರೇನಾದರೂ ಊರೊಳಗೆ ಹೋದರೆ ಕಷ್ಠಗಳು ಬರುತ್ತವೆ ಎಂಬ ಮೂಢನಂಬಿಕೆ ಇಲ್ಲಿನ ಜನರಲ್ಲಿದೆ,ಈ ಮಹಿಳೆಯರು ಊರಿನಿಂದ ಹೊರಗೆ ವಾಸಿಸುವ ಸಲುವಾಗಿ ಸಣ್ಣ ಸಣ್ಣ ಗುಡಿಸಲುಗಳನ್ನು ನಿರ್ಮಿಸಲಾಗಿದೆ, ಆದರೆ ಈ ಅನಿಷ್ಠಪದ್ದತಿಯ ಬಗ್ಗೆ ಎಷ್ಟೇ ಅರಿವು ಮೂಡಿಸಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಈ ಹಳ್ಳಿಯಲ್ಲಿ ಇಂತಹ ಅನಿಷ್ಠಪದ್ದತಿ ರಾಜಾರೋಷವಾಗಿ ನಡೆಯುತ್ತಾ ಇದ್ರೂ ಜಿಲ್ಲಾ ಸಮಾಜಕಲ್ಯಾಣ ಇಲಾಖೆಯಾಗಲಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲ್ಲಾಕೆಯಾಗಲಿ ಯಾವುದೇ ಕ್ರಮಕೈಗೊಂಡಿಲ್ಲ,ಇಲ್ಲಿನ ಜನರಿಗೆ ಅರಿವು ಮೂಡಿಸುವ ಯಾವುದೇ ಪ್ರಯತ್ನ ಮಾಡಿಲ್ಲ.ಅಲ್ಲದೆ ಮಹಿಳೆಯರ ಸುರಕ್ಷಿತವಾಗಿ ಇರುವಂತೆ ಊರ ಹೊರಗೆ ವಸತಿಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಿಲ್ಲ.

ಇಂತಹ ಅನಿಷ್ಠಪದ್ದತಿಗಳನ್ನು ತೊಡೆದುಹಾಕೋ ಪ್ರಯತ್ನವನ್ನು ಮಾತ್ರ ಸರ್ಕಾರ ಮಾಡುತ್ತಿಲ್ಲ,ಆದ್ರೆ ಭೇಟಿ ಬಚಾವೊ,ಭೇಟಿ ಪಡಾವೊ ಅಂತಾ ಮಾತ್ರ ಹೇಳುತ್ತಲೇ ಇರುತ್ತದೆ,ಇನ್ನು ಮುಂದಾದರು ಸರ್ಕಾರ ಇಂತಹ ಅನಿಷ್ಠಪದ್ದತಿಗಳನ್ನು ತೊಡೆದುಹಾಕೊ ಕೆಲಸ ಮಾಡಬೇಕು,ಹೆಣ್ಣು ಮಕ್ಕಳ ಸುರಕ್ಷತೆಗೆ ಕ್ರಮಕೈಗೊಳ್ಳಬೇಕಿದೆ.

ಹಂಗೇನೂ ಒಬ್ಬೊಬ್ಬರನ್ನೇ ಬಿಡೋದಿಲ್ಲಾ,ನಾವೂನು ಕಾಯ್ಕೊಂಡು ಮಲಕೊತ್ತಿವಿ,,ಮುಟ್ಟಿಸಿಕೊಳ್ಳೋದಿಲ್ಲ,ಮನೆಗೂ ಸೇರಿಸೋದಿಲ್ಲ,ಮೂರು ತಿಂಗಳಾದ್ರೂ ಹಿಂಗೇ ವಾಸ ಮಾಡ್ತಾ ಇರ್ಬೇಕು, ಹಿಂಗೆ ಮುಟ್ಟುತಟ್ಟಾದ್ರೆ ನಮ್ ದೇವರಿಗಾಗಲ್ಲ,ಮನೆ ದೆವರು ಚುಂಚಪ್ಪನಿಗೆ ಏನಾದ್ರೂ ಕೋಪಬಂದ್ರೆ ಶಾಪಕೊಟ್ ಬುಟ್ರೆ ಅಂತಾ ಭಯ ಭಕ್ತಿಯಿಂದ ಹಿಂಗೆಲ್ಲಾ ಇರ್ತೀವಿ, ,ನಮ್ ತಾತ ಮುತ್ತಾತನೊರ ಕಾಲದಿಂದಲೂ ನಡೆದುಕೊಂಡು ಬಂದಿರೋದು ಇದು,ಈಗ ನಾವು ಮಧ್ಯಕಾಲದಲ್ಲಿ ಬಿಡೋಕಾಗುತ್ತಾ,ಅದಕ್ಕೆ ನಮ್ಮ ಹಿರಿಯೋರು ಮಾಡಿಕೊಂಡ್ ಬಂದಿರೋ ಸಂಪ್ರದಾಯನ ನಡಿಸ್ಕೊಂಡು ಹೋಯ್ತಾ ಇದ್ದೀವಿ ಎನ್ನತ್ತಾರೆ ಗ್ರಾಮ ಮಹಿಳೆ ಚಿಕ್ಕತಾಯಮ್ಮ.
 
ಹಿಂದ್ಲಿಂದಾನೂ ನಡೆದುಕೊಂಡು ಬಂದಿರೋದು, ನಮ್ ತಾತನ ಕಾಲದಿಂದ ಬಂದಿರೋದ ಈಗ ಬಿಟ್ಬಡೋಕಾಗುತ್ತಾ, ಯಜಮಾನ್ರುಗಳೂ ಕೂಡ ಬಿಟ್ಬುಡಿ ಅನ್ನೋದಿಲ್ಲ, ಊರಿನ ಹೊರಗಿರೋ ಹೆಣ್ಮಕ್ಳನ್ನ ದೇವ್ರೇ ಕಾಯ್ಕತಾನೆ, ಭಗವಂತನ ಮೇಲೇ ಭಾರಹಾಕಿ ಇರ್ತೀವಿ, ಹೊರಗಡೆಯಾದವ್ರು 5 ದಿವಸ, ಮೆಚುಡಾದ ಹೆಣ್ಮಕ್ಕಳು ಒಂದ್ ತಿಂಗಳು, ಹೆರಿಗೆಯಾದವ್ರು 3 ತಿಂಗಳು, ಹಿಂಗೆ ಊರಿಂದ ಹೊರಗೆ ಇರಬೇಕು, ನೋಡಿ ಈ ಗುಡಿಸಲಲ್ಲಿರೋರು 3 ತಿಂಗಳಾಯ್ತು ಇಲ್ಲೇ ಅವ್ರೆ ಎನ್ನತ್ತಾರೆ ಗ್ರಾಮದ ಹಿರಿಯ ಮಹಿಳೆ ವೆಂಕಟಮ್ಮ.

ವರದಿ: ನಾಗಯ್ಯ ಲಾಳನಕೆರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com