ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಪ್ರಾರಂಭ: ಅಶ್ವತ್ಥನಾರಾಯಣ
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
Published: 11th February 2020 03:28 PM | Last Updated: 11th February 2020 03:28 PM | A+A A-

ಅಶ್ವತ್ಥನಾರಾಯಣ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳಲ್ಲಿ ಕೌಶಲಾಭಿವೃದ್ಧಿ ಹೆಚ್ಚಿಸಲು ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲ್ ನಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಒಂದು ದಿನದ ಸ್ಕಿಲ್ ಡೆವಲಪ್ ಮೆಂಟ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆಯನ್ನು ಸದುಪಯೋಗ ಪಡಿಸಿಕೊಳ್ಳಲು ರಾಜ್ಯದ ಶಾಲಾ ಕಾಲೇಜುಗಳಲ್ಲಿ ಉದ್ಯೋಗ ಮಾಹಿತಿ ನೀಡಲಾಗವುದು. ಸದ್ಯ ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿ ಮುಂದಿನ ದಿನಗಳಲ್ಲಿ ತಾಲೂಕು ಹಾಗೂ ಶಾಲಾ ಮಟ್ಟದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಪ್ರಸ್ತುತ ಪೋರ್ಟಲ್ ನಲ್ಲಿ ಲಭ್ಯವಾಗುವ ಮಾಹಿತಿಗಳನ್ನು ನೇರವಾಗಿ ವಿದ್ಯಾರ್ಥಿಗಳಿಗೆ ಒದಗಿಸುವ ವ್ಯವಸ್ಥೆ ಇದಾಗಿದೆ. ಶಾಲೆಗಳಲ್ಲಿರುವ ಆಸಕ್ತ ಶಿಕ್ಷಕರಿಂದಲೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಕೌಶಲ್ಯ ಹೊಂದಿರುವ ಅನೇಕ ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆಗಳಿರುವುದರಿಂದ ಎಜುಕೇಷನ್ ಲೋನ್ ಗಳ ಕುರಿತೂ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ರತ್ನಪ್ರಭ ಮಾತನಾಡಿ, ದೇಶಕ್ಕೆ ನಮ್ಮ ರಾಜ್ಯ ಮಾದರಿಯಾಗುವಂತೆ ಕೌಶಲಾಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ 63 ಮಿಲಿಯನ್ ಸಣ್ಣ ಮತ್ತು ಮದ್ಯಮ ಉದ್ದಿಮೆದಾರರಲ್ಲಿ ಶೇ.20ರಷ್ಟು ಉದ್ದಿಮೆದಾರರು ಗ್ರಾಮೀಣ ಭಾಗದವರಾಗಿದ್ದಾರೆ. ಇವರಲ್ಲಿ ಕೇವಲ ಶೇ.14ರಷ್ಟು ಮಹಿಳೆಯರಿದ್ದಾರೆ. ಇವರಿಗೆ ಕೌಶಲಾಭಿದ್ಧಿ ತರಬೇತಿ ನೀಡಿದರೆ 5ಟ್ರಿಲಿಯನ್ ಆರ್ಥಿಕತೆ ತಲುಪಲು ಸಾಧ್ಯ ಎಂದರು.
ಕೌಶಲಾಭಿವೃದ್ದಿ ಕೇಂದ್ರಗಳಿಗೆ ಅನುದಾನಗಳನ್ನು ನೀಡುವುದರ ಬದಲು ಇಂಡಸ್ಟ್ರೀ, ಕಾರ್ಪೊರೇಟ್ ಗಳನ್ನು ಸಂಪರ್ಕಿಸಿ ಅಲ್ಲಿನ ಅಗತ್ಯತೆಗಳಿಗೆ ತಕ್ಕಂತೆ ತರಬೇತಿ ನೀಡಿ ಉದ್ಯೋಗ ವ್ಯವಸ್ಥೆ ಕಲ್ಪಿಸುವ ಯೋಜನೆ ಹಾಕಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕೆಎಸ್ ಡಿಎ ಸಲಹೆಗಾರ ಎಸ್.ಜೆ.ಅಮಲನ್, ಡಾ.ಸೆಲ್ವಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು