ಮಂಡ್ಯ: ಅಂಬರೀಶ್ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ವಿಶ್ವೇಶ್ವರಯ್ಯ ನಾಲೆಯ 5 ಎಕರೆ ಜಾಗ ನುಂಗಿದ ಆರೋಪ!

ಮಾಜಿ ಸಚಿವ, ನಟ ಅಂಬರೀಶ್ ಬೆಂಬಲಿಗರೆಂದೇ ಗುರ್ತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಮತ್ತು ಕುಟುಂಬದವರು ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ, ಬೂದನೂರು, ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ...
ಅಮರಾವತಿ ಚಂದ್ರಶೇಖರ್
ಅಮರಾವತಿ ಚಂದ್ರಶೇಖರ್

ಮಂಡ್ಯ: ಮಾಜಿ ಸಚಿವ, ನಟ ಅಂಬರೀಶ್ ಬೆಂಬಲಿಗರೆಂದೇ ಗುರ್ತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಮತ್ತು ಕುಟುಂಬದವರು ಮಂಡ್ಯ ತಾಲ್ಲೂಕಿನ ಉಮ್ಮಡಹಳ್ಳಿ, ಬೂದನೂರು, ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 5 ಎಕರೆಗಿಂತಲೂ ಹೆಚ್ಚಿನ ವಿಶ್ವೇಶ್ವರಯ್ಯ ನಾಲೆಯ ಜಾಗವನ್ನು, ಅಕ್ರಮವಾಗಿ  ಮುಚ್ಚಿ  ಹೋಟೆಲ್  ಹಾಗೂ ವಸತಿ ಬಡಾವಣೆಗಳನ್ನು ನಿರ್ಮಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಅಕ್ರಮ ಕುರಿತಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್,  ಮಂಡ್ಯ ತಾಲೂಕು ತಹಶೀಲ್ದಾರ್ , ಕಾವೇರಿ ನೀರಾವರಿ ನಿಗಮ ಮಂಡ್ಯ ವೃತ್ತದ‌ ಅಧೀಕ್ಷಕ ಅಭಿಯಂತರರಿಗೆ ಅರ್ ಟಿ ಐ ಕಾರ್ಯ ಕರ್ತ ಕಲ್ಲಹಳ್ಳಿ ರವೀಂದ್ರ ಅವರು ಎರಡು ಪ್ರತ್ಯೇಕ ದೂರುಗಳನ್ನು ದಾಖಲೆಗಳ ಸಮೇತ ಇoದು ನೀಡಿದ್ದಾರೆ.

ಈ  ಅಕ್ರಮದ ಬಗ್ಗೆ  ತಾನು ನಾಲ್ಕು ವರ್ಷಗಳ ಹಿಂದೆಯೂ‌ ಕೂಡ  ದೂರು ನೀಡಿದ್ದು, ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆ ಸರ್ವೆ ಇಲಾಖೆ ಅಧಿಕಾರಿಗಳು ಯಾವುದೇ ರೀತಿ ಕಾನೂನು ಕ್ರಮಗಳನ್ನು ಜರುಗಿಸಿಲ್ಲ. ಆದ್ದರಿ ಇಂದು  ಮತ್ತೆ ಮಂಡ್ಯ ಜಿಲ್ಲಾಧಿಕಾರಿಗಳಿಗೆ, ಮಂಡ್ಯ ತಾಲೂಕು ತಹಶೀಲ್ದಾರ್ ರವರಿಗೆ. ಅಧೀಕ್ಷಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ ಮಂಡ್ಯ ವೃತ್ತ ರವರಿಗೆ, ದೂರು  ನೀಡಿರುವುದಾಗಿಯೂ ಆರ್ ಟಿ ಐ ಕಾರ್ಯ ಕರ್ತ ಕಲ್ಲಹಳ್ಳಿ ರವೀಂದ್ರ  ದೂರು ಅರ್ಜಿಯಲ್ಲೆ ತಿಳಿದ್ದಾರೆ.

ಉಮ್ಮಡಹಳ್ಳಿ ಗ್ರಾಮದ ಸರ್ವೆ ನಂಬರ್ 129 ರಲ್ಲಿ. 1 ಎಕರೆ 1 ಗುಂಟೆ, ಸರ್ವೆ ನಂಬರ್ 130 ರಲ್ಲಿ 1ಎಕರೆ 4 ಗುಂಟೆ ಒಟ್ಟು ಎರಡು ಎಕರೆ ಐದು ಗುಂಟೆ ನಾಲಾ ಜಾಗವನ್ನು ಮುಚ್ಚಿ ಹೋಟೆಲ್ ಕಟ್ಟಡ ನಿರ್ಮಿಸಿ, ಅಕ್ರಮವಾಗಿ ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ, ಅಲ್ಲದೆ ಮಂಡ್ಯ ಮಹಾ ಯೋಜನೆಯಂತೆ ಪ್ರಸ್ತಾವಿತ 24 ಮೀಟರ್ ಅಗಲದ ರಸ್ತೆ ಇರಬೇಕಾಗಿದ್ದು ಈ ರಸ್ತೆಯನ್ನು ಕೂಡ ಮುಚ್ಚಿರುತ್ತಾರೆ.

ಆದರೆ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವರು ಇವರಿಗೆ ನೀಡಿರುವ ವಸತಿ ವಿನ್ಯಾಸ ನಕ್ಷೆಯಲ್ಲಿ ಮಾತ್ರ 24 ಮೀಟರ್ ಅಗಲದ ರಸ್ತೆ ಇರುತ್ತದೆ. ಅಲ್ಲದೆ ಹಿಂದೆಯೇ ತಾಲೂಕು ಭೂಮಾಪಕರು ಸರ್ವೆ ನಡೆಸಿ ನಕಾಶೆ ತಯಾರಿಸಿದ್ದು, ಈ ನಕಾಶೆಯಲ್ಲಿ ನಾಲಾ ಪ್ರದೇಶವು ಒತ್ತುವರಿ ಆಗಿರುವ ಬಗ್ಗೆ ವರದಿ ನೀಡಿರುತ್ತಾರೆ, ಅಲ್ಲದೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನವಾಗಿ, ಇವರು ಪರಿಹಾರ ಪಡೆದುಕೊಂಡ ನಂತರ ಈ ರಸ್ತೆಯನ್ನು, ಮತ್ತೆ ಒತ್ತುವರಿ ಮಾಡಿಕೊಂಡು ಹೋಟೆಲ್ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.       

ಅಲ್ಲದೆ ಬೂದನೂರು, ಮತ್ತು ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ, ಸುಮಾರು 50 ಎಕರೆ ಪ್ರದೇಶಗಳಲ್ಲಿ ಅಮರಾವತಿ ಚಂದ್ರಶೇಖರ್ & ಕುಟುಂಬದವರು  ವಸತಿ ಬಡಾವಣೆಗಳನ್ನು ನಿರ್ಮಿಸುತ್ತಿದ್ದು ಬೂದನೂರು ಗ್ರಾಮದ ಸರ್ವೆ ನಂಬರ್ 334 ರಲ್ಲಿ ಎಂಟು ಗುಂಟೆ, 336 /1 ರಲ್ಲಿ 11:00 ಗುಂಟೆ, 338 ರಲ್ಲಿ 24 ಗುಂಟೆ, 400 ರಲ್ಲಿ 20 ಗುಂಟೆ. 401 ರಲ್ಲಿ 3 ಗುಂಟೆ, 336/2 ರಲ್ಲಿ 2 ಗುಂಟೆ, 338/2 ರಲ್ಲಿ 10 ಗುಂಟೆ, 336/2 ರಲ್ಲಿ 4 ಗುಂಟೆ, 400/5 ರಲ್ಲಿ 13 ಗುಂಟೆ, 340/A2 ರಲ್ಲಿ 9 ಗುಂಟೆ, ಮತ್ತು ಇತರೆ ಸರ್ವೇ ನಂಬರ್ ಗಳಲ್ಲಿ ನಾಲಾ ಖರಾಬು ಪ್ರದೇಶವಿದ್ದು ಈ ನಾಲೆಗಳನ್ನು ಸಹ ಮುಚ್ಚಿ ವಸತಿ ನಿವೇಶನಗಳನ್ನು ಅಕ್ರಮವಾಗಿ ಮಾಡುತ್ತಿದ್ದಾರೆ ಎಂದು ಆಪಾದಿಸಲಾಗಿದೆ.

ಅಲ್ಲದೆ ಬೂದನೂರು ಗ್ರಾಮದ ಸರ್ವೆ ನಂಬರ್ 337 ರಲ್ಲಿ, 11 ಗುಂಟೆ  ನೀರಿನಕಟ್ಟೆ ಜಾಗವಿದ್ದು ಈ ಕಟ್ಟೆ ಜಾಗವನ್ನು ಕೂಡ ಕಾನೂನುಬಾಹಿರವಾಗಿ, ಸಿ ಚಂದ್ರಶೇಖರ್ ಅವರ ಹೆಸರಿಗೆ ತಹಸೀಲ್ದಾರ್ ಮತ್ತು ಅಧೀನ ಸಿಬ್ಬಂದಿ  ಅಕ್ರಮ ಖಾತೆ ಮಾಡಿದ್ದು, ಕಾನೂನುಬಾಹಿರವಾಗಿ ಅನ್ಯಕ್ರಾಂತ ಕೂಡ ಮಂಜೂರು ಮಾಡಿದ್ದಾರೆ ,ಈಗ ಈ ಕಟ್ಟೆ ಜಾಗವನ್ನು ಮುಚ್ಚಿ ವಸತಿ ನಿವೇಶನಗಳನ್ನು ಮಾಡಲಾಗಿದೆ ಎನ್ನಲಾಗಿದೆ.

ಉಮ್ಮಡಹಳ್ಳಿ, ಬೂದನೂರು, ಗುತ್ತಲು ಗ್ರಾಮಗಳ ವ್ಯಾಪ್ತಿಯಲ್ಲಿ ಅಮರಾವತಿ ಚಂದ್ರಶೇಖರ್ ಮತ್ತು ಕುಟುಂಬದವರು, ವಿಶ್ವೇಶ್ವರಯ್ಯ ನಾಲೆಯನ್ನು  ಮುಚ್ಚಿ. ಅತಿಕ್ರಮ ಮಾಡಿ, ಹೋಟೆಲ್ ಕಟ್ಟಡ,  ವಸತಿ ಬಡಾವಣೆಗಳನ್ನು ನಿರ್ಮಾಣ ಮಾಡಿರುವುದು ಕರ್ನಾಟಕ ನೀರಾವರಿ ಕಾಯ್ದೆ 1965 ರ ಸ್ಪಷ್ಟ ಉಲ್ಲಂಘನೆಯಾಗಿದ್ದು. ನೀರಾವರಿ ಕಾಯ್ದೆ ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯಡಿ  ಅಮರಾವತಿ ಚಂದ್ರಶೇಖರ್ ಮತ್ತು ಕುಟುಂಬದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ವಿಶ್ವೇಶ್ವರಯ್ಯ ನಾಲಾ ಪ್ರದೇಶದ ಒತ್ತುವರಿಯನ್ನು ತೆರವುಗೊಳಿಸುವಂತೆಯೂ ದೂರಿನ ಮೂಲಕ ಒತ್ತಾಯ ಮಾಡಲಾಗಿದೆ.

ಸರ್ಕಾರಿ ಜಾಗದಲ್ಲಿ ಇಷ್ಟೆಲ್ಲಾ ಅಕ್ರಮ ನಡೆದರೂ ಕಂಡರೂ ಕಾಣದಂತೆ ಕಣ್ಮುಚ್ಚಿ ಕುಳಿತಿರುವ ಸರ್ಕಾರಿ ಅಧಿಕಾರಿಗಳು ಮುಂದೆ ಏನು ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com