2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು: ಸದಾನಂದ ಗೌಡರಿಗೆ ಪತ್ರ ಬರೆದ ಸಿದ್ದರಾಮಯ್ಯ

2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 2019ರ ಬೀಜ ಮಸೂದೆ ರೈತರಿಗೆ ಮಾರಕ; ಅದು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು ಮಾಜಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ.

2019ರ ಬೀಜ ಮಸೂದೆಯು ಜೀವವೈವಿಧ್ಯ ರಕ್ಷಣೆ, ರೈತರ ಹಿತಾಸಕ್ತಿಯನ್ನು ರಕ್ಷಿಸುವುದರ  ಪರವಾಗಿಲ್ಲ. ಬದಲಾಗಿ ಖಾಸಗಿ ಬೀಜ ಉತ್ಪಾದಕರಿಗೆ, ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ  ಹಾಕಿ ಲಾಭ ತಂದುಕೊಡಲಿದೆ. ಆದ್ದರಿಂದ ಈ ಮಸೂದೆಯು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮ್ಯಯ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

2019ರ ಬೀಜ ಮಸೂದೆಯ ಕುರಿತು ದೇಶಾದ್ಯಂತ ರೈತ ಸಂಘಟನೆಗಳು, ಪರಿಣಿತರು ಚರ್ಚೆ ನಡೆಸುತ್ತಿದ್ದಾರೆ. ಅಲಲ್ಲಿ ಪ್ರತಿಭಟನೆಗಳೂ ನಡೆಯುತ್ತಿವೆ. ಈ ಹಿಂದೆ 2004ರಲ್ಲಿ ಬೀಜ ಮಸೂದೆಯನ್ನು ಸರ್ಕಾರ ಮಂಡಿಸಿದಾಗ ಭಾರೀ ಟೀಕೆಗಳನ್ನು ಎದುರಿಸಿದ ಕಾರಣ, ಅಂದು ಲೋಕಸಭಾ ಸದಸ್ಯರಾಗಿದ್ದ ರಾಮ್‌ ಗೋಪಾಲ್ ಯಾದವ್ ಅವರ ನೇತೃತ್ವದಲ್ಲಿ ಕೃಷಿ  ಸ್ಥಾಯಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸ್ಥಾಯಿ ಸಮಿತಿಯು 2006ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಅದಾದ 15 ವರ್ಷಗಳ ನಂತರ ರೈತರ ಹಿತದೃಷ್ಟಿಯಿಂದ 2004ರ ಕಾಯಿದೆಗಿಂತ ಹೆಚ್ಚು ಅಪಾಯಕಾರಿಯಾದ ಬೀಜ ಮಸೂದೆಯನ್ನು ಕೇಂದ್ರ ಸರ್ಕಾರವು ತರಲು ಹೊರಟಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ರೈತರು ತಾವು ಬೆಳೆದ ಬೀಜವನ್ನು ಬೇರೆಯವರಿಗೆ ಮಾರಾಟ ಮಾಡಲು ಅಡ್ಡಿಯಾಗಿದ್ದ 2004ರ ಮಸೂದೆಯಲ್ಲಿನ ಅಂಶವನ್ನು ಸರಿಪಡಿಸುವುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ರಾಮ್‌ಗೋಪಾಲ್‌ ಯಾದವ್  ಅವರ ಅಧ್ಯಕ್ಷತೆಯ ಸ್ಥಾಯಿ ಸಮಿತಿಯ ಶಿಫಾರಸ್ಸುಗಳನ್ನು ಒಪ್ಪಿಕೊಂಡು ತಿದ್ದುಪಡಿ ತರಲು ಉದ್ದೇಶಿಸಿತ್ತು. ಆದರೆ 2019ರ ಬೀಜ ಮಸೂದೆಯು ಈ ಶಿಫಾರಸ್ಸುಗಳಲ್ಲಿನ ಯಾವ ಅಂಶಗಳನ್ನೂ ಪರಿಗಣಿಸಿದಂತೆ ಕಾಣುತ್ತಿಲ್ಲ ಎಂದು ಸಿದ್ದರಾಮಯ್ಯ ಪತ್ರದಲ್ಲಿ ತಿಳಿಸಿದ್ದಾರೆ. 2019ರ ಬೀಜ ಮಸೂದೆಯು ಜೀವವೈವಿಧ್ಯ ರಕ್ಷಣೆ, ರೈತರ ಹಿತಾಸಕ್ತಿಯನ್ನು ರಕ್ಷಿಸುವುದರ ಪರವಾಗಿಲ್ಲ. ಬದಲಾಗಿ ಖಾಸಗಿ ಬೀಜ ಉತ್ಪಾದಕರಿಗೆ, ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಿ ಲಾಭ ತಂದುಕೊಡಲು ಹೊರಟಂತೆ ಕಾಣುತ್ತಿದೆ. ಕಾಯಿದೆಯು 2002ರ ಜೀವ ವೈವಿಧ್ಯ ಕಾಯಿದೆ, ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕಿನ ಕಾಯಿದೆ 2001ರ ಮೂಲಾಂಶಗಳು ಬೀಜದ ಮೇಲೂ ಹೇಗೆ ತಾತ್ವಿಕ ಸಂಬಂಧ ಹೊಂದಿವೆಯೆಂಬುದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಈ ಮಸೂದೆಯನ್ನು ಪ್ರತ್ಯೇಕವೆಂಬಂತೆ ತರಲುದ್ದೇಶಿಸಿದೆ. ಹಾಗಾಗಿ ಇದು ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಬೆಲೆ ನಿಯಂತ್ರಣದ ಬಗ್ಗೆ ನಿರ್ದಿಷ್ಟತೆಯನ್ನು ಸೂಚಿಸದೇ ಬೀಜ ಕಂಪನಿಗಳ ಲಾಭಬಡುಕತನಕ್ಕೆ ಮಣೆ ಹಾಕಿದಂತಿದೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಮಸೂದೆಯು ಬೀಜದ ಮೇಲೆ ಖಾಸಗಿ ಕಂಪನಿಗಳು ಏಕಸ್ವಾಮ್ಯವನ್ನು ಪಡೆಯಲು ಅನುವು ಮಾಡಿಕೊಡುವಂತಿದೆ. ಆ ಮೂಲಕ ಸಾವಿರಾರು ವರ್ಷಗಳಿಂದ ನಮ್ಮ ರೈತರು ಕಾಪಾಡಿಕೊಂಡು ಬಂದಿರುವ ಬೀಜ ತಂತ್ರಜ್ಞಾನವನ್ನು ದಮನಿಸಲು ಈ ಕಾಯಿದೆಯು ಹೊರಟಿದೆ. ರೈತರ ಸಾಮುದಾಯಿಕ ಸ್ವತ್ತುಗಳಾದ ಬೀಜಗಳನ್ನು ಮಾರಾಟ ಮಾಡಲು ಹಾಕಿರುವ ನಿರ್ಬಂಧಗಳು ಮಾರಕವಾದದ್ದು. ಕೃಷಿಯು ಸಂವಿಧಾನದ ರಾಜ್ಯಪಟ್ಟಿಯ ವ್ಯಾಪ್ತಿಯಲ್ಲಿರುತ್ತದೆ. ಆದರೆ ಉದ್ದೇಶಿತ ಬೀಜ ಮಸೂದೆಯು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕೇಂದ್ರ ಬೀಜ ಸಮಿತಿಗೆ ಈ ಕಾಯಿದೆಯು ಪರಮಾಧಿಕಾರ ನೀಡಿದ್ದು, ಅದರ ನೇತೃತ್ವವನ್ನು ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಕಾರ್ಯದರ್ಶಿ ಮಟ್ಟದ ಅಧಿಕಾರಿಗೆ ಅಧಿಕಾರವನ್ನು ನೀಡಲಾಗಿದೆ.ಬೀಜದ ಗುಣಮಟ್ಟಕ್ಕೆ ಸಂಬಂಧಿಸಿದಂತೆ ತಕರಾರು ಉದ್ಭವಿಸಿದರೆ ಕೇಂದ್ರದ ತೀರ್ಮಾನವೇ ಅಂತಿಮ ಎನ್ನುವ ದಾಟಿಯಲ್ಲಿ ಈ ಮಸೂದೆ ಇದೆ. ಇದು ರಾಜ್ಯಗಳ ಅಧಿಕಾರದ ವ್ಯಾಪ್ತಿಯಲ್ಲಿ ಕೇಂದ್ರವು ಅತಿಕ್ರಮಣ ಮಾಡಲು ಹೊರಟಿದೆ. ಇದು ನಾಡಿನ ಹಿತಾಸಕ್ತಿಗೆ ಮಾರಕವಾಗಿದೆ ಎಂದು ಪತ್ರದಲ್ಲಿ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.

ಈ ಮಸೂದೆಯು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬೀಜದ ನೋಂದಣಿಗೆ ಹೆಚ್ಚು ಒತ್ತು ಕೊಡುತ್ತದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ಬೀಜಗಳು ಎಂಬ ಅವೈಜ್ಞಾನಿಕ ವರ್ಗೀಕರಣವನ್ನು ಮಾಡಲಾಗಿದೆ. ಇದಕ್ಕೆ ಸಮರ್ಥನೆಗಳಿಲ್ಲ.  ಈ ಕರಡು ಮಸೂದೆಯನ್ನು ರೂಪಿಸಿದವರಿಗೆ ಈ ರೀತಿಯ ಕಾನೂನುಗಳಿವೆ ಎಂಬ ಅರಿವೇ ಇದ್ದಂತಿಲ್ಲ. ಜೈವಿಕ ತಂತ್ರಜ್ಞಾನದಿಂದ ಮಾರ್ಪಡಿಸಿದ ಬೀಜಗಳನ್ನು ನೋಂದಾಯಿಸಿ ಅಡೆಗಡೆಗಳಿಲ್ಲದೆ ವ್ಯವಹಾರ ನಡೆಸಲು ಅನುಮತಿ ನೀಡಲು ಹೊರಟಿರುವುದು ರೈತಾಪಿ ಸಮುದಾಯದಲ್ಲಿ ಭಯ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಾರ್ವಜನಿಕ ಬೀಜ ಉತ್ಪಾದಕ ಸಂಸ್ಥೆಗಳಾದ ರಾಷ್ಟ್ರ, ರಾಜ್ಯ ಬೀಜ ನಿಮಗಳು, ಕೃಷಿ ವಿಶ್ವವಿದ್ಯಾಲಯಗಳನ್ನು ಸದೃಢಪಡಿಸಿ, ರೈತರಿಗೆ ನೆರವಾಗುವಂತೆ ನೋಡಿಕೊಳ್ಳುವ ಪ್ರಸ್ತಾಪವೆ ಈ ಮಸೂದೆಯಲ್ಲಿಲ್ಲ. ಇವುಗಳ ಸಶಸ್ತೀಕರಣವೆಂದರೆ ಉತ್ತರದಾಯಿತ್ವದ ಚೌಕಟ್ಟು ನೀಡಿದಂತೆ.  ರೈತರು ಕಂಪನಿಗಳಿಂದ ಕೊಂಡುಕೊಂಡ ಬೀಜವು ಮೊಳಕೆ, ಇಳುವರಿ ರೋಗಬಾಧೆ ಸಹಿತ ಸಮರ್ಪಕವಾಗಿ ಫಲ ನೀಡದಿದ್ದಲ್ಲಿ ಗ್ರಾಹಕರ ನ್ಯಾಯಾಲಯಗಳಿಗೆ ದೂರು ಸಲ್ಲಿಸಲು ಸೂಚಿಸಿರುವುದು ತೀರಾ ಅವೈಜ್ಞಾನಿಕ ಮತ್ತು ಬೇಜವಾಬ್ದಾರಿತನದ ನಡವಳಿಕೆಯಾಗಿದೆ. ಬಲದಾಗಿ ಹೋಬಳಿ, ತಾಲೂಕು ಮಟ್ಟದಲ್ಲಿ ನ್ಯಾಯ ಮಂಡಳಿಗಳನ್ನು ರಚಿಸಬೇಕು.  ಯಾವುವುದೇ ಬೀಜದ ಬಿಡುಗಡೆಗೆ ಮುನ್ನಾ ಕ್ಷೇತ್ರ ಪರೀಕ್ಷೆ ಕುರಿತಂತೆ ವಿವಿಧ ಕೃಷಿ ಹವಾಮಾನ ವಲಯಗಳಲ್ಲಿ ಪರೀಕ್ಷೆಗೊಳಪಡಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಈ ಮಸೂದೆಯ ವ್ಯಾಪ್ತಿಯಿಂದ ಹೊರಗಿಟ್ಟಂತಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ಬೀಜ, ಔಷಧಿ ಮತ್ತು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರುವ ಬೃಹತ್ ಕಂಪನಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಬಳಲುತ್ತಿರುವ ರೈತಾಪಿ ಸಮುದಾಯಗಳು ತಾವು ಉತ್ಪಾದಿಸಿದ ಬೀಜವನ್ನು ಕೊಡು-ಕೊಳ್ಳಲು ಈ ಕಾಯಿದೆಯು ಅಡ್ಡಿ ಮಾಡುತ್ತಿದೆ. ಕೆಲವು ನೂರು ಗ್ರಾಂ ಬೀಜಕ್ಕೆ ಈ ಬಹು ರಾಷ್ಟ್ರೀಯ ಕಂಪನಿಗಳು ಸಾವಿರಾರು ರೂಪಾಯಿ ವಸೂಲಿ ಮಾಡುತಿವೆ. ಇದನ್ನು ಮೊದಲು ನಿಯಂತ್ರಿಸಬೇಕಾಗಿದೆ. ಬೀಜ, ಗೊಬ್ಬರ, ಔಷಧಿ, ಮಾರುಕಟ್ಟೆಯ ಕುರಿತು ಕೇಂದ್ರ ಸರ್ಕಾರವು ಜನಪರವಾದ ನೀತಿಯನ್ನು ರೂಪಿಸಬೇಕಾಗಿದೆ.  ಯಾವುದೇ ಕಾಯಿದೆ ತರುವ ಮೊದಲು ಆ ಕ್ಷೇತ್ರದ ಕುರಿತು ನೀತಿಯನ್ನು ಹೊರತರುವುದು ಸಂಪ್ರದಾಯವಾಗಿದೆ. ಹೀಗಿರುವಾಗ ಸೂಕ್ತ ಬೀಜ ನೀತಿಯನ್ನು ರೂಪಿಸಿ, ಅದರ ಸೂಚಿಗಳಿಗನುಗುಣವಾಗಿ ಬೀಜ ಮಸೂದೆಯನ್ನು ರೂಪಿಸದಿದ್ದರೆ ಅದೊಂದು ಪ್ರತಿಗಾಮಿ ಹೆಜ್ಜೆ ಎಂದೆ ಹೇಳಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ತಿಳಿಸಿದ್ದಾರೆ.

ದೇಶದ ಕೃಷಿ ಸಂಸ್ಕೃತಿಯಲ್ಲಿ ಬೀಜವೆಂಬುದು ಸಂಪ್ರದಾಯದ ಸ್ವತ್ತು ಇದನ್ನು ಜೀವ ವೈವಿಧ್ಯ ಕಾನೂನು ಸಹ ಪುರಸ್ಕರಿಸುತ್ತದೆ. ಇವುಗಳನ್ನು ಪರಿಗಣಿಸದ ಈ ಮಸೂದೆಯು ಬೀಜ ನೋಂದಣಿ ದೃಢೀಕರಣ ಇವುಗಳಿಗೆ ಮಹತ್ವ ನೀಡುತ್ತದೆ. ಇಂಥದ್ದನ್ನು ಆದಿವಾಸಿ ಅಲೆಮಾರಿ ರೈತರು ಮಾಡಲು ಸಾಧ್ಯವೇ ? ಹಾಗಾಗಿ ಇದು ಬೃಹತ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವುದಕ್ಕೆ ಮಾಡಿರುವ ಹುನ್ನಾರದಂತೆ ಕಾಣುತ್ತದೆ.  ಕೇಂದ್ರ ಸರ್ಕಾರವು ಡಾ.ಸ್ವಾಮಿನಾಥನ್ ವರದಿಯನ್ನು ಇನ್ನೂ ಸಹ ಅನುಷ್ಠಾನಗೊಳಿಸಿಲ್ಲ. ಮೊದಲು ಈ ವರದಿಯ ಶಿಫಾರಸ್ಸುಗಳನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಲು ತಾವು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು, ಇದರ ಜೊತೆಯಲ್ಲಿ ರೈತರಿಗೆ ಮಾರಕವಾಗಿರುವ 2019ರ ಬೀಜ ಮಸೂದೆಯು ಕಾಯ್ದೆಯಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗಬೇಕು ಮತ್ತು ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com