ವಿಶೇಷ ಜಾಮೀನಿನ ಮೇಲೆ‌ ನಲಪಾಡ್ ಬಿಡುಗಡೆ; ಕಾರು ಓಡಿಸಿದ್ದು ಗನ್‌ ಮ್ಯಾನ್‌ ಎಂದ ನಲಪಾಡ್ 

Published: 12th February 2020 06:27 PM  |   Last Updated: 12th February 2020 06:27 PM   |  A+A-


Accused Nalpad granted special bail in car accident case

ವಿಶೇಷ ಜಾಮೀನಿನ ಮೇಲೆ‌ ನಲಪಾಡ್ ಬಿಡುಗಡೆ; ಕಾರು ಓಡಿಸಿದ್ದು ಗನ್‌ ಮ್ಯಾನ್‌ ಎಂದ ನಲಪಾಡ್

Posted By : Srinivas Rao BV
Source : Online Desk

ಬೆಂಗಳೂರು: ಮೇಖ್ರಿ ಸರ್ಕಲ್ ಬಳಿ ಸಂಭವಿಸಿದ ಬೆಂಟ್ಲಿ ಕಾರು ಅಪಘಾತ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೊಹಮ್ಮದ್ ನಲಪಾಡ್ ಅವರನ್ನು ಬಂಧಿಸಿ, ಕೂಡಲೇ ವಿಶೇಷ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ. 

 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊಹಮ್ಮದ್ ನಲಪಾಡ್ ಅವರನ್ನು ಅಪಘಾತ ಪ್ರಕರಣದಲ್ಲಿ ಹೇಳಿಕೆ ನೀಡಬೇಕೆಂದು ಪೊಲೀಸರು ನೋಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ನಲಪಾಡ್ ಅವರು ಠಾಣೆಗೆ ಬಂದಾಗ ಅವರ ಬಂಧಿಸಿ,
ಬಳಿಕ ಕೂಡಲೇ ವಿಶೇಷ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದರು.

ಸದಾಶಿನಗರ ಠಾಣೆ ಇನ್ಸ್​ಪೆಕ್ಟರ್ ನಾಗರಾಜು ಅವರು ನಲಪಾಡ್ ಅವರಿಂದ ಬಾಂಡ್ ಬರೆಸಿಕೊಂಡು ವಿಶೇಷ ಜಾಮೀನು ನೀಡಿದ್ದಾರೆ ಎಂದು ತಿಳಿಸಿದರು. ಫೆ.9ರಂದು ಮೇಖ್ರಿ ಸರ್ಕಲ್​ನ ಅಂಡರ್​ಪಾಸ್​ನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಐಷಾರಾಮಿ ಬೆಂಟ್ಲಿ ಕಾರು ಮೂರು ವಾಹನಗಳಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಪ್ರಫುಲ್ ಎಂಬಾತನ ಕಾಲಿನ ಮೂಳೆ ಮುರಿದಿತ್ತು. 

ಅಲ್ಲದೇ, ಆಟೋವೊಂದು ಜಖಂಗೊಂಡಿತ್ತು. ಘಟನಾ ಸ್ಥಳದಿಂದ ಚಾಲಕ ಪರಾರಿಯಾದ ಹಿನ್ನಲೆಯಲ್ಲಿ ಕಾರು ಚಲಾಯಿಸಿದವರ ಬಗ್ಗೆ ಸ್ಪಷ್ಟಮಾಹಿತಿ ದೊರೆತಿರಲಿಲ್ಲ. ನಿನ್ನೆಯಷ್ಟೇ‌ ನಲಪಾಡ್ ಗನ್ ಮ್ಯಾನ್ ಬಾಲು ಎಂಬಾತ ಕಾರು ಚಲಾಯಿಸಿದ್ದು ತಾನೇ ಎಂದು ಸದಾಶಿವ‌ನಗರ ಪೊಲೀಸ್ ಠಾಣೆಗೆ ಶರಣಾಗಿದ್ದ. ಆದರೆ, ಆತ ಅಪಘಾತದ ಕುರಿತು ಮಾಹಿತಿ ನೀಡುವಲ್ಲಿ ತಡಬಡಿಸಿದ್ದು, ಕಾರಿನ ಕೀ ಕೊಟ್ಟಾಗ ಆತನಿಂದ ಚಾಲನೆ ಮಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ನಂತರ ಪೊಲೀಸರು ತಾಂತ್ರಿಕ ಹಾಗೂ ಪ್ರತ್ಯಕ್ಷದರ್ಶಿಗಳ ಮಾಹಿತಿ ಆಧರಿಸಿ ಕಾರು ಚಲಾಯಿಸಿದ್ದು, ಶಾಸಕ ಎನ್ ಹ್ಯಾರಿಸ್ ಪುತ್ರ ಮಹ್ಮದ್ ನಲಪಾಡ್ ಎಂದು ದೃಢಡಿಸಿಕೊಂಡರು. ಸಾಕ್ಷ್ಯನಾಶ ಆರೋಪದಡಿ ಬಾಲು ಎಂಬಾತನನ್ನು ಇಂದು 7ಎಸಿಎಂಎಂ ಕೋರ್ಟ್ ಮುಂದೆ ಪೊಲೀಸರು ಹಾಜರು ಪಡಿಸಿದರು. ಮೂರು ಸಾವಿರ ದಂಡ ಹಾಗೂ ಬಾಂಡ್ ಬರೆಸಿಕೊಂಡ ನಂತರ ಬಾಲುಗೆ ಜಾಮೀನು ಮಂಜೂರು ಮಾಡಲಾಯಿತು.

ಕಾರು ಓಡಿಸಿದ್ದು ನಾನಲ್ಲ, ಗನ್‌ ಮ್ಯಾನ್‌: ಮುಹಮ್ಮದ್ ನಲಪಾಡ್

ಕಾರು ಓಡಿಸಿದ್ದು, ನಾನಲ್ಲ. ನನ್ನ ಗನ್ ಮ್ಯಾನ್ ಬಾಲು ಎಂದು ಶಾಸಕ ಎನ್ ಹ್ಯಾರಿಸ್ ಪುತ್ರ ಮುಹಮ್ಮದ್ ನಲಪಾಡ್ ಹೇಳಿದ್ದಾರೆ.

ಸದಾಶಿವನಗರ ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ವತ್  ಹಲ್ಲೆ ಘಟನೆ ನಂತರ ತಾನು ತುಂಬಾ ಬದಲಾಗಿದ್ದೇನೆ. ಆದರೆ, ಈಗಲೂ ಗೂಂಡಾ ಎಂದು  ನನ್ನನ್ನು ಕರೆಯುತ್ತೀರಿ. ನನಗೂ ಮನಸ್ಸು ಎಂಬುದಿದೆ , ನಾನೇನೂ ಮನುಷ್ಯನಲ್ಲವಾ? ಎಂದು ಅವರು ಪ್ರಶ್ನಿಸಿದರು.

ಅಂದು ನಡೆದ ಅಪಘಾತ ಒಂದು ಆಕಸ್ಮಿಕ. ನಾನು ಉದ್ದೇಶಪೂರ್ವಕವಾಗಿ ಯಾರನ್ನು ಗುದ್ದಿಲ್ಲ. ಅಲ್ಲದೇ,  ಅಂದು ನಾನು ಕಾರು ಓಡಿಸುತ್ತಿರಲಿಲ್ಲ. ಗನ್ ಮ್ಯಾನ್‌ ಬಾಲುನೇ ಕಾರು ಚಲಾಯಿಸಿದ್ದರು.  ಯಾವುದೋ ಚಾನಲ್​ನವರು ಬಾಲುಗೆ ಕಾರು ಓಡಿಸಲು ಬರುವುದಿಲ್ಲ ಎಂದು ಸುದ್ದಿ ಹಾಕಿದ್ದರು.  ಹಲವು ವರ್ಷಗಳಿಂದಲೂ ಬಾಲು ಅವರೇ ನನ್ನ ಕಾರನ್ನು ಓಡಿಸುತ್ತಿದ್ದು, ಇದು ಎಲ್ಲರಿಗೂ  ಗೊತ್ತಿರುವ ವಿಚಾರ ಎಂದರು.

ಮನೆಯಲ್ಲಿ 87 ವರ್ಷದ ಅಜ್ಜ, ಅಜ್ಜಿ ಇದ್ದಾರೆ. ಅಪಘಾತ ಆದಾಗ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತದೆ. ಕೆಳಗೆ ಅಪಘಾತದಲ್ಲಿ ಇಬ್ಬರೂ ಸಾವು ಎಂದು ಹಾಕಿದ್ದಾರೆ. ಅದನ್ನು ಓದಿದವರು ಏನಂದುಕೊಳ್ಳಬೇಕು? ನನ್ನ ಬಗ್ಗೆ ಯಾಕೆ ಈ ರೀತಿ ಸುದ್ದಿ ಬಿತ್ತರ ಮಾಡುತ್ತಿದ್ದೀರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಇವೆಲ್ಲದರ ಹಿಂದೆ ಯಾರ ಕೈವಾಡವಿದೆ ಎಂಬುದು ಗೊತ್ತಿದೆ. ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ ಎಂದು ಅವರು ತಿಳಿಸಿದರು.

Stay up to date on all the latest ರಾಜ್ಯ news
Poll
Farmers

ಕೇಂದ್ರ ಸರ್ಕರದ ಕೃಷಿ ಸುಧಾರಣಾ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp