ಸರೋಜಿನಿ‌ ಮಹಿಷಿ ವರದಿ ಜಾರಿಗೆ ಸರ್ಕಾರ ಬದ್ಧ; ಕರ್ನಾಟಕ ಬಂದ್ ಹಿಂಪಡೆಯಿರಿ- ಸಿ.ಟಿ.ರವಿ ಮನವಿ

ಕರ್ನಾಟಕ ಬಂದ್ ಕರೆ ಕೊಟ್ಟಿರುವ ಕನ್ನಡ ಪರ ಸಂಘಟನೆ ಅಹವಾಲನ್ನು ಸರ್ಕಾರ ಆಲಿಸಿದೆ. ಕನ್ನಡ ಭಾಷಾ ಮಾಧ್ಯಮ, ಕನ್ನಡ ಉಳಿಸುವ ಬೆಳೆಸುವ ಕೆಲಸಕ್ಕೆ ಸರ್ಕಾರ ಬದ್ದವಾಗಿದೆ. ಆದರೆ ಸರೋಜಿನಿ‌ ಮಹಿಷಿ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಬಂದ್ ಗೆ ಕರೆ ನೀಡಿರುವ ಸಂಘಟನೆಗಳ ಜತೆ  ಈಗಾಗಲೆ ಮುಖ್ಯಮಂತ್ರಿ, ತಾವು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಚನಾರಾಯಣ ಮಾತುಕತೆ
ಸಿ.ಟಿ.ರವಿ
ಸಿ.ಟಿ.ರವಿ

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಜಾನಪದ ಲೋಕದ ಬೆಳ್ಳಿ ಹಬ್ಬವನ್ನು ಫೆಬ್ರವರಿ 16, 17,18ರಂದು ಏರ್ಪಡಿಸಲಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 16ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.

ವಿಧಾನ ಸೌಧದಲ್ಲಿಂದು ಜಾನಪದ‌ ಲೋಕದ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾನಪದ ಲೋಕ ಬೆಳ್ಳಿಹಬ್ಬ ಫೆಬ್ರವರಿ 16ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಫೆಬ್ರವರಿ 17 ಮತ್ತು 18ರಂದು ರಾಮನಗರ ಬಳಿಯ ಜನಪದ ಲೋಕದಲ್ಲಿ ಲೋಕೋತ್ಸವವನ್ನೂ ಹಮ್ಮಿಕೊಳ್ಳಲಾಗಿದೆ. ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಾಹಿತಿಗಳು, ಕಲಾವಿದರು, ಸಾಂಸ್ಕೃತಿಕ ಲೋಕದ ದಿಗ್ಗಜರೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಲಾಗಿದೆ. ಜಾನಪದ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅನುದಾನ ಹೆಚ್ಚಳ ಹಾಗೂ ಬೆಂಗಳೂರಿನಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ ನಾಲ್ಕು ಹೆಚ್ಚುವರಿ ರಂಗಮಂದಿರಗಳ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಮೀಸಲಿಡಲು ಮುಖ್ಯಮಂತ್ರಿ ಸಭೆಯಲ್ಲೇ ಸಮ್ಮತಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಅಲ್ಲದೆ ಸುಧಾಮೂರ್ತಿಯವರ ಅಧ್ಯಕ್ಷತೆಯ ಪ್ರವಾಸೋದ್ಯಮ ಟಾಸ್ಕ್ ಪೋರ್ಸ್ ನೀಡಿರುವ ವರದಿಯನ್ವಯ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ‌. ಪ್ರವಾಸೋದ್ಯಮ ಇಲಾಖೆಗೆ 1500 ಕೋಟಿ ರೂ.ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ. ಕರ್ನಾಟಕ ದರ್ಶನ ಯೋಜನೆಯನ್ನು ಎಂಟು ಮತ್ತು ಒಂಭತ್ತನೆ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಮನವಿ ಮಾಡಿದ್ದೇವೆ. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ. ಇದರಿಂದ ಮಕ್ಕಳ‌ ಮನಸ್ಸಿನಲ್ಲಿ ಜಾತಿ ವಿಷ ಬೀಜ ಬಿತ್ತಿದಂತಾಗುತ್ತದೆ. ಹಾಗಾಗಿ ಎಲ್ಲ ಮಕ್ಕಳಿಗೆ ವಿಸ್ತರಣೆ ಮಾಡಲು ಮನವಿ ಮಾಡಿದ್ದೇವೆ ಎಂದು ಸಚಿವರು ತಿಳಿಸಿದರು.

ಮೈಸೂರಿನ  ಪಾರಂಪರಿಕ ಕಟ್ಟಡಗಳಿರುವ ಐದು ರಸ್ತೆಗಳನ್ನು ಗುರುತಿಸಲಾಗಿದೆ. ಅಲ್ಲಿನ ಕಟ್ಟಡಗಳನ್ನು  ಅದೇ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂದು ಮೈಸೂರು ಜಿಲ್ಲಾಡಳಿತಕ್ಕೆ ಸೂಚನೆ  ನೀಡಲಾಗಿದೆ. ಫೆಬ್ರವರಿ 16ರಂದು ಮೈಸೂರಿಗೆ ತೆರಳುತ್ತಿದ್ದೇನೆ ಎಂದು ಸಿ.ಟಿ.ರವಿ ಹೇಳಿದರು.

ಕರ್ನಾಟಕ ಬಂದ್ ಕರೆ ಕೊಟ್ಟಿರುವ ಕನ್ನಡ ಪರ ಸಂಘಟನೆ ಅಹವಾಲನ್ನು ಸರ್ಕಾರ ಆಲಿಸಿದೆ. ಕನ್ನಡ ಭಾಷಾ ಮಾಧ್ಯಮ, ಕನ್ನಡ ಉಳಿಸುವ ಬೆಳೆಸುವ ಕೆಲಸಕ್ಕೆ ಸರ್ಕಾರ ಬದ್ದವಾಗಿದೆ. ಆದರೆ ಸರೋಜಿನಿ‌ ಮಹಿಷಿ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಬಂದ್ ಗೆ ಕರೆ ನೀಡಿರುವ ಸಂಘಟನೆಗಳ ಜತೆ  ಈಗಾಗಲೆ ಮುಖ್ಯಮಂತ್ರಿ, ತಾವು ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಚನಾರಾಯಣ ಮಾತುಕತೆ ನಡೆಸಿದ್ದೇವೆ. ಸರೋಜಿನಿ ಮಹಿಷಿ ವರದಿ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಆದರೆ ಖಾಸಗಿ ವಲಯದಲ್ಲಿ ವರದಿ ಜಾರಿ ಸುಲಭವಲ್ಲ. ಕಾರ್ಮಿಕರ ಕೊರತೆ ಮತ್ತಿತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಖಾಸಗಿ ವಲಯದವರೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಲು ನಮ್ಮ ಸಮ್ಮತಿ ಇದೆ. ಶಿಕ್ಷಣದಲ್ಲಿ  ಕನ್ನಡ ಕಡ್ಡಾಯಗೊಳಿಸದೆ ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸಲು ಸಾಧ್ಯವಿಲ್ಲ. ಆದರೂ  ಸುಪ್ರಿಂ ಕೋರ್ಟನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಕೆ ಸಾಧ್ಯವೇ ? ಎಂದು  ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಬಂದ್ ಕರೆ ಹಿಂದೆ ಪಡೆಯುವಂತೆ ಕನ್ನಡಪರ ಸಂಘಟನೆಗಳಿಗೂ ಮನವಿ ಮಾಡುತ್ತೇನೆ ಎಂದು ಹೇಳಿದ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿ, ಸರೋಜಿನಿ ಮಹಿಷಿ ವರದಿ ಜಾರಿಗೊಳಿಸುವಂತೆ ಸಿದ್ದರಾಮಯ್ಯ ಅವರು ಒತ್ತಾಯಿಸಿರುವುದು ಹಾಸ್ಯಾಸ್ಪದ. ಸರೋಜಿನಿ  ಮಹಿಷಿ ವರದಿ ಮಂಡನೆಯಾದ ದಿನದಿಂದಲೂ ಸಿದ್ದರಾಮಯ್ಯ ಹಾಗೂ ಅವರು ಪ್ರತಿನಿಧಿಸುವ ಪಕ್ಷವೇ  ಅಧಿಕಾರದಲ್ಲಿ ಇತ್ತು. ಆಗೆಲ್ಲ ಸರೋಜಿನಿ‌ ಮಹಿಷಿ ವರದಿ ಜಾರಿಗೆ ಯಾವುದೇ ಪ್ರಯತ್ನ  ಮಾಡದೆ ಅಧಿಕಾರದಿಂದ ಇಳಿದ ತಕ್ಷಣ ಸರೋಜಿನಿ ಮಹಿಷಿ ವರದಿ ಜಾರಿಗೆ  ಒತ್ತಾಯಿಸುತ್ತಿದ್ದಾರೆ. ಅವರನ್ನು ನಂಬುವವರ ಬಗ್ಗೆಯೂ ನಾನು ಬಾಯಿ ಬಿಟ್ಟು ಏನನ್ನೂ ಹೇಳಬೇಕಾಗಿಲ್ಲ ಎಂದು ತಿರುಗೇಟು ನೀಡಿದರು.

ಸಚಿವರ ಖಾತೆಗಳ ಬದಲಾವಣೆ ಮುಖ್ಯಮಂತ್ರಿಯವರ ಪರಮಾಧಿಕಾರ. ಅವರು  ಯಾವ ಖಾತೆ ಯಾಕೆ ಕೊಟ್ಟರು ಎಂದು ಪ್ರಶ್ನೆ ಮಾಡುವಂತಿಲ್ಲ. ತಮ್ಮಿಂದ ಸಕ್ಕರೆ ಖಾತೆ ವಾಪಸ್  ಪಡೆದು ಹೆಚ್ಚುವರಿಯಾಗಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನೀಡಿದ್ದಾರೆ‌. ಈ ಖಾತೆಗಳಿಗೆ ಹೆಚ್ಚು ಅನುದಾನ ಕೊಟ್ಟರೆ ಹೆಚ್ಚು ಸಮರ್ಥವಾಗಿ, ಇಲ್ಲವಾದರೆ ಅನುದಾನದ ಮಿತಿಯಲ್ಲೇ ಸಮರ್ಥವಾಗಿ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತೇನೆ ಎಂದು ತಿಳಿಸಿದರು.

ಅರಣ್ಯ  ಕಾಯ್ದೆ ನಿಯಮಾವಳಿ ಉಲ್ಲಂಘನೆ ಆರೋಪ ಹೊತ್ತಿರುವ ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ  ವಹಿಸಿರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com