ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟ್: ಕರ್ನಾಟಕ ಬಿಜೆಪಿ ಟ್ವಿಟರ್ ಖಾತೆ ರದ್ದು

ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಟ್ವಿಟರ್ ಖಾತೆಯನ್ನು ರದ್ದು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾಂಗ್ರೆಸ್ ನಾಯಕರ ವಿರುದ್ಧ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಟ್ವಿಟರ್ ಖಾತೆಯನ್ನು ರದ್ದು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. 

ಖಾತೆಯನ್ನು ರದ್ದುಗೊಳಿಸಿದ ಬಳಿಕ ಮತ್ತೆ ಪುನರ್ ಸ್ಥಾಪಿಸಲಾಗಿದ್ದು, ಈ ಕುರಿತು ಬಿಜೆಪಿ ಟ್ವೀಟ್ ಮಾಡಿದೆ. 

ಪ್ರಗತಿಪರ ಸತ್ಯವನ್ನು ಬಹಿರಂಗ ಪಡಿಸಿದ್ದಕ್ಕೆ ನಮ್ಮ ಟ್ವಿಟರ್ ಖಾತೆಯನ್ನು ರದ್ದುಪಡಿಸಿದ್ದು, ದುರಾದೃಷ್ಟಕರ ಸಂಗತಿ ಎಂದು ಬಿಜೆಪಿ ಹೇಳಿದೆ. ಅಲ್ಲದೆ, ಸತ್ಯವನ್ನು ಬಯಲಿಗೆಳೆಯುವ ನಮ್ಮ ಪ್ರಯತ್ನ ಎಂದಿಗೂ ನಿಲ್ಲುವುದಿಲ್ಲ ಎಂದೂ ಕೂಡ ತಿಳಿಸಿದೆ. 

ಇದೇ ವೇಳೆ ತಮಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ್ದ ಜನತೆಗೆ ಬಿಜೆಪಿ ಧನ್ಯವಾದಗಳನ್ನು ತಿಳಿಸಿದೆ. ಸತ್ಯಮೇವ ಜಯತೇ. ಜೈ ಹಿಂದ್ ಎಂದು ಟ್ವೀಟ್ ಮಾಡಿದೆ. 

ಈ ಹಿಂದೆ ಟ್ವೀಟ್ ಮಾಡಿದ್ದ ಬಿಜೆಪಿ, ದಲಿತರಿಗೆ ಮೋಸ ಮಾಡುತ್ತಿದ್ದಾರೆಂದು ಹೇಳಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಸುಶೀಲ್ ಕುಮಾರ್ ಶಿಂದೆ ಹಾಗೂ ವಿಜಯ್ ಬಹುಗುಣ ವಿರುದ್ಧ ಆರೋಪ ಮಾಡಿತ್ತು. 

2012ರಲ್ಲಿ ಕೇಂದ್ರ ಹಾಗೂ ಉತ್ತರಾಖಂಡರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ವೇಳೆ ಎಸ್ಸಿ ಮತ್ತು ಎಸ್ಟಿ ಸಮುದಾಯದ ಮೀಸಲಾತಿ ರದ್ದು ಪಡಿಸಿದ್ದ ಸುಪ್ರೀಂಕೋರ್ಟ್ ನಿರ್ಧಾರಕ್ಕೆ ಅಂದಿನ ಸರ್ಕಾರ ಜವಾಬ್ದಾರಿಯಾಗಿತ್ತು ಎಂದು ತಿಳಿಸಿತ್ತು. ಇದಕ್ಕೆ ಸೋನಿಯಾ, ಮನಮೋಹನ್, ಸುಶೀಲ್ ಕುಮಾರ್, ಬಹುಗುಣ ಅವರು ಕಾರಣರಾಗಿದ್ದರು ಎಂದು ಹೇಳಿತ್ತು. 

ಟ್ವಿಟರ್ ಖಾತೆ ರದ್ದುಪಡಿಸಿದ್ದರ ಕುರಿತಂತೆ ಬಿಜೆಪಿ ವಕ್ತಾರ ಜಿ,.ಮಧುಸೂಧನ್ ಅವರು ಪ್ರತಿಕ್ರಿಯೆ ನೀಡಿದ್ದು, ಟ್ವಿಟರ್ ಖಾತೆ ಯಾವಾಗ ರದ್ದು ಗೊಂಡಿತ್ತು ಮತ್ತೆ ಯಾವಾಗ ಪುನರ್ ಸ್ಥಾಪನೆಗೊಂಡಿತು ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ ಎಂದಿದ್ದಾರೆ. 

ಇದೇ ವೇಳೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಸೋಲಿನಿಂದ ಬೇಸರಗೊಳ್ಳುವ ಅಗತ್ಯವಿಲ್ಲ. ಮತದಾರರ ಹೃದಯ ಹಾಗೂ ಅವರ ಆಲೋಚನೆಯನ್ನು ಗೆಲ್ಲುವ ಸಮಯ ಬಂದಿದೆ. 2025ರ ಚುನಾವಣೆಗೆ ಸಿದ್ಧತೆ ನಡೆಸೋಣ. ನಾವು ನಿಮ್ಮೊಂದಿಗಿದ್ದೇವೆಂದು ತಿಳಿಸಿದೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com