ಸಿದ್ದರಾಮಯ್ಯ
ಸಿದ್ದರಾಮಯ್ಯ

ಸಿದ್ದರಾಮಯ್ಯರಿಂದ ಕ್ಷೇತ್ರಾಭಿವೃದ್ಧಿ ಬಜೆಟ್: ಸರ್ಕಾರ ಎಷ್ಟರ ಮಟ್ಟಿಗೆ ಒಪ್ಪುತ್ತೆ, ಬಿಡುತ್ತೆ?

ಬಾದಾಮಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏನೇನು ಬೇಕು ಎನ್ನುವ ಕುರಿತು ಉದ್ದನೆಯ ಪಟ್ಟಿಯನ್ನೇ ಸಲ್ಲಿಸಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಬಜೆಟ್ ಪೂರ್ವ ಶಾಸಕರೊಬ್ಬರು ಈ ರೀತಿ ಕ್ಷೇತ್ರಾಭಿವೃದ್ಧಿ ಪಟ್ಟಿ ಸಲ್ಲಿಸಿರುವುದು ಇದೇ ಮೊದಲು ಎನ್ನಬಹುದಾಗಿದೆ.

ಬಾಗಲಕೋಟೆ: ಬಾದಾಮಿ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಏನೇನು ಬೇಕು ಎನ್ನುವ ಕುರಿತು ಉದ್ದನೆಯ ಪಟ್ಟಿಯನ್ನೇ ಸಲ್ಲಿಸಿದ್ದಾರೆ. ಜಿಲ್ಲೆಯ ಇತಿಹಾಸದಲ್ಲಿ ಬಜೆಟ್ ಪೂರ್ವ ಶಾಸಕರೊಬ್ಬರು ಈ ರೀತಿ ಕ್ಷೇತ್ರಾಭಿವೃದ್ಧಿ ಪಟ್ಟಿ ಸಲ್ಲಿಸಿರುವುದು ಇದೇ ಮೊದಲು ಎನ್ನಬಹುದಾಗಿದೆ.


ಕಳೆದ ವರ್ಷವೂ ಸಿದ್ದರಾಮಯ್ಯ ಸರ್ಕಾರಕ್ಕೆ ಕ್ಷೇತ್ರದ ಕಾರ್ಯ ಯೋಜನೆಗಳ ಕುರಿತು ಪಟ್ಟಿ ಸಲ್ಲಿಸಿದ್ದರು. ಆಗ ಅವರದ್ದೇ ಪಕ್ಷದ ಸರ್ಕಾರವಿತ್ತು ಹಾಗಾಗಿ ಅದಕ್ಕೆ ಅಷ್ಟೊಂದು ಮಹತ್ವ ಬಂದಿರಲಿಲ್ಲ. ಈ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಬಜೆಟ್ ಪೂರ್ವ ತಯಾರಿ ಜೋರಾಗಿದ್ದು, ಈ ವೇಳೆ ಸಿದ್ದರಾಮಯ್ಯ ಕಾರ್ಯ ಯೋಜನೆಗಳ ಪಟ್ಟಿ ಸಲ್ಲಿಸಿ ಸೂಕ್ತ ಅನುದಾನ ಮತ್ತು ಮಂಜೂರಾತಿ ಕೇಳಿರುವುದು ವಿಶೇಷವಾಗಿದೆ.


ನಾಲ್ಕು ಬಾರಿ ಗೆದ್ದದ್ದೇ ಸಾಧನೆ :
ಇದುವರೆಗೂ ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸಿರುವ ಯಾವ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಸರ್ಕಾರದ ಮುಂದೆ ಪರಿಣಾಮಕಾರಿಯಾಗಿ ಹೇಳಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಬಾದಾಮಿ ಕ್ಷೇತ್ರ ವ್ಯಾಪ್ತಿಗೆ ಸೇರಿರುವ ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಗೊಂಡಿದ್ದಾರಾದರೂ ಇದುವರೆಗೂ ಕುಡಚಿ -ಬಾಗಲಕೋಟೆ ರೈಲ್ವೆ ಕಾಮಗಾರಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಗೋಜಿಗೆ ಹೋಗಿಲ್ಲ. ಬಾಗಲಕೋಟೆ –ಕುಡಚಿ ರೈಲ್ವೆ ಮಾರ್ಗ ರಚನೆಯಿಂದ ಜಿಲ್ಲೆಯ ಪ್ರವಾಸೋದ್ಯಮ ಅದರಲ್ಲಿ ಬಾದಾಮಿ ಕ್ಷೇತ್ರದ ಅಭಿವೃದ್ಧಿ ವೇಗ ಹೆಚ್ಚಲಿದೆ. ಜತೆಗೆ ಕೃಷಿ, ಕೈಗಾರಿಕೆಗಳ ಬೆಳವಣಿಗೆ ಕ್ಷೀಪ್ರವಾಗಿ ನಡೆಯಲಿದೆ. ಆದಾಗ್ಯೂ ಕಾಮಗಾರಿ ಪೂರ್ಣಗೊಳಿಸುವತ್ತ ಆದ್ಯ ಗಮನ ನೀಡುತ್ತಿಲ್ಲ ಎನ್ನುವುದು ದುರದೃಷ್ಟಕರ ಸಂಗತಿ.


ಇಂತಹ ಸನ್ನಿವೇಶದಲ್ಲಿ ಕೇವಲ ಎರಡು ವರ್ಷಗಳ ಹಿಂದೆ ಬಾದಾಮಿ ಕ್ಷೇತ್ರದ ಶಾಸಕರಾಗಿ ಆಯ್ಕೆಗೊಂಡಿರುವ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿರುವುದು ಇತರ ಶಾಸಕರಿಗೂ ಮಾದರಿ ಎನ್ನಬಹುದಾಗಿದೆ.


ಇಲಾಖಾವಾರು ಪತ್ರ :
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಯಾವ ಯಾವ ಇಲಾಖೆಗಳಿಂದ ಏನೇನು ಆಗಬೇಕು ಎನ್ನುವ ಕುರಿತು ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಗೆ  ಪತ್ರ ಬರೆದಿದ್ದಾರೆ. ಕೇರೂರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ 525 ಕೋಟಿ ರೂಪಾಯಿ ಅನುದಾನಕ್ಕಾಗಿ ಜಲಸಂಪನ್ಮೂಲ ಇಲಾಖೆಗೆ, ಕೆರೂರ ಪಟ್ಟಣಕ್ಕೆ ಒಳಚರಂಡಿ ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡುವಂತೆ ನಗರಾಭಿವೃದ್ಧಿ ಇಲಾಖೆಗೆ,  ಗುಳೇದಗುಡ್ಡ ಪಟ್ಟಣಕ್ಕೆ  ಹೈನುಗಾರಿಕೆ ವಿಜ್ಞಾನ ಮಹಾವಿದ್ಯಾಲಯ ಘೋಷಿಸಬೇಕು. ಕೇರೂರಕ್ಕೆ ಸರ್ವೆ ಇಲಾಖೆ ಕಚೇರಿ ಆರಂಭಿಸಬೇಕು. ಗುಳೇದಗುಡ್ಡಕ್ಕೆ ಜವಳಿ ಪಾರ್ಕ್ ನಿರ್ಮಾಣಕ್ಕೆ 50 ಕೋಟಿ ರೂಪಾಯಿ ಮೀಸಲಿಡಬೇಕು. ಜಯದೇವ ಹೃದ್ರೋಗ  ವಿಜ್ಞಾನ ಮತ್ತು  ಸಂಶೋಧನಾ ಘಟಕ ಘೋಷಣೆ ಮಾಡಬೇಕು. ಬಾದಾಮಿಯಲ್ಲಿ ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯ ಆರಂಭಿಸಬೇಕು.


ಬಾದಾಮಿ, ಬನಶಂಕರಿ, ಐಹೊಳೆ,  ಪಟ್ಟದಕಲ್ಲು, ಮಹಾಕೂಟ ಪ್ರವಾಸಿ ತಾಣಗಳ ಅಭಿವೃದ್ಧಿ ಸಾವಿರ ಕೋಟಿ ಅನುದಾನ ಘೋಷಿಸಬೇಕು. ಪ್ರವಾಸಿ ತಾಣಗಳಲ್ಲಿ ಟ್ರೀ ಪಾರ್ಕ್ ಸ್ಥಾಪಿಸಲು 100 ಕೋಟಿ ರೂ. ಅನುದಾನ ಘೋಷಿಸಬೇಕು ಎನ್ನುವುದು ಸೇರಿದಂತೆ ಹತ್ತಾರು ಪ್ರಮುಖ ಯೋಜನೆಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಮುಂದಾಗುವAತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಕಾರಜೋಳ ಮನವಿ:
ಜಿಲ್ಲೆಯ ಯಾವ ಶಾಸಕರೂ ಇಂತಹ ಸಾಹಸಕ್ಕೆ ಕೈ ಹಾಕಿಲ್ಲವಾದರೂ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರು  ಕಳೆದ ವಾರ ಬೆಂಗಳೂರಿನಲ್ಲಿ ಯುಕೆಪಿ ಯೋಜನಾ ವ್ಯಾಪ್ತಿಯ ಶಾಸಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ಸಭೆ ಕರೆದು ಯುಕೆಪಿ ಯೋಜನೆ ಅನುಷ್ಠಾನ, ಸಂತ್ರಸ್ತರಿಗೆ ಪರಿಹಾರ, ಪುನರ್ ವಸತಿ, ಸ್ಥಳಾಂತರ ಕುರಿತ ಕಾರ್ಯಗಳಿಗಾಗಿ ಪ್ರಸಕ್ತ ಬಜೆಟ್‌ನಲ್ಲಿ 30 ಸಾವಿರ ಕೋಟಿ ರೂಪಾಯಿ ವಿಶೇಷ ಅನುದಾನ ಕೇಳಿದ್ದಾರೆ. ಆ ಕುರಿತು ಸರ್ಕಾರಕ್ಕೆ ಪತ್ರ ಬರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸರ್ಕಾರ ಯುಕೆಪಿ ಯೋಜನೆಗಳ ಕಾರ್ಯಾನುಷ್ಠಾನಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ. 


ಯುಕೆಪಿ ಯೋಜನೆಗಳ ಅನುಷ್ಠಾನ ಮತ್ತು ಯೋಜನಾ ಸಂತ್ರಸ್ತರಿಗೆ ಸೂಕ್ತ ಪರಿಹಾರಕ್ಕಾಗಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಆದರೂ ಯಾರೂ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಆದರೆ ಈ ಯೋಜನೆಯನ್ನು ದಾಳವಾಗಿಸಿಕೊಂಡು ಅಧಿಕಾರಕ್ಕೆ ಬಂದವರು ಮಾತ್ರ ಸಾಕಷ್ಟು ಜನ ಎನ್ನುವುದು ಗಮನಾರ್ಹ.

ವಿಠ್ಠಲ ಆರ್. ಬಲಕುಂದಿ
 

Related Stories

No stories found.

Advertisement

X
Kannada Prabha
www.kannadaprabha.com