ಉತ್ತರ ಕರ್ನಾಟಕದಲ್ಲಿ 1 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಗೆ ಒಡಂಬಡಿಕೆ: ಸಿಎಂ ಯಡಿಯೂರಪ್ಪ

ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಕರ್ನಾಟಕದಂತಹ ರಾಜ್ಯಗಳ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದ್ದು, ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವಂತಹ...
ಇನ್ವೆಸ್ಟ್ ಕರ್ನಾಟಕ ಉದ್ಘಾಟಿಸಿದ ಸಿಎಂ
ಇನ್ವೆಸ್ಟ್ ಕರ್ನಾಟಕ ಉದ್ಘಾಟಿಸಿದ ಸಿಎಂ

ಹುಬ್ಬಳ್ಳಿ: ಭಾರತ ಐದು ಟ್ರಿಲಿಯನ್ ಡಾಲರ್ ಆರ್ಥಿಕ ವ್ಯವಸ್ಥೆ ಹೊಂದಿದ ರಾಷ್ಟ್ರವಾಗಿ ರೂಪುಗೊಳ್ಳಲು ಕರ್ನಾಟಕದಂತಹ ರಾಜ್ಯಗಳ ಪಾಲುದಾರಿಕೆ ಅತ್ಯಂತ ಪ್ರಮುಖವಾಗಿದ್ದು, ದೇಶದ ಅರ್ಥ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುವಂತಹ ಸಾಮರ್ಥ್ಯ ಕರ್ನಾಟಕಕ್ಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಲವಾಗಿ ಪ್ರತಿಪಾದಿಸಿದ್ದಾರೆ.

ನಗರದ ಡೆನಿಸನ್ ಹೋಟೆಲ್ ನಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇದೇ  ಮೊದಲ ಬಾರಿಗೆ ಆಯೋಜಿಸಿರುವ “ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶ - ೨೦೨೦” ಉದ್ಘಾಟಿಸಿ ಮಾತನಾಡಿದ ಅವರು, ಇನ್ವೆಸ್ಟ್​ ಕರ್ನಾಟಕ ಸಮಾವೇಶ ಯಶಸ್ವಿಯಾಗಿದ್ದು, ಉತ್ತರ ಕರ್ನಾಟಕದ ವಿವಿಧ ಸ್ಥಳಗಳಲ್ಲಿ 1 ಲಕ್ಷ ಕೋಟಿ ರೂ. ಗೂ ಅಧಿಕ ಹೂಡಿಕೆಗೆ ಒಡಂಬಡಿಕೆಯಾಗಿದೆ. ರಾಜ್ಯದ ಇತಿಹಾಸದಲ್ಲೇ ಇದು ದಾಖಲೆ ಕಾರ್ಯಕ್ರಮ ಎಂದರು.

ಕರ್ನಾಟಕದಲ್ಲಿ ಈಸ್ ಆಪ್ ಡೂಯಿಂಗ್ ಬಿಸಿನೆಸ್ - ಸುಗಮ ವ್ಯವಹಾರ ನಡೆಸಲು ಅನುವಾಗುವಂತೆ ಸಕಲ ವ್ಯವಸ್ಥೆ ಕಲ್ಪಿಸಲು ನಾವು ಬದ್ಧವಾಗಿದ್ದೇವೆ. ಉದ್ಯಮ ಆರಂಭಿಸಲು ಉಂಟಾಗುವ ಅನಗತ್ಯ ವಿಳಂಬ ತಪ್ಪಿಸಲು ಹಾಗೂ ಶೀಘ್ರವೇ ಅನುಮೋದನೆ ಸಿಗುವಂತಹ ವ್ಯವಸ್ಥೆ ರೂಪಿಸುವುದು ನಮ್ಮ ಸರಕಾರದ ಆದ್ಯತೆಯಾಗಿದೆ ಎಂದರು.

ಕರ್ನಾಟಕ ದೇಶದ ಪ್ರಮುಖ ಐಟಿ ಕೇಂದ್ರವೆಂದು ಪ್ರಸಿದ್ಧವಾಗಿದ್ದು, ಏರೋಸ್ಪೇಸ್, ಆಟೋಮೊಬೈಲ್ಸ್, ಮೆಷಿನ್ ಟೂಲ್ಸ್, ಎಲೆಕ್ಟ್ರಿಕ್ ವೆಹಿಕಲ್ಸ್ ಮತ್ತು ಆಧುನಿಕ ಬಯೋಟೆಕ್ ತಂತ್ರಜ್ಞಾನಗಳ ರಾಜಧಾನಿ ಎಂದು ಗುರುತಿಸಿಕೊಂಡಿದೆ. ಹೂಡಿಕೆಗೆ ಅತ್ಯಂತ ವಿಪುಲ ಮತ್ತು ಪ್ರಶಸ್ತವಾದ ವಾತಾವರಣ ಹೊಂದಿದೆ ಎಂದು ಹೆಮ್ಮೆಯಿಂದ ಹೇಳಿದರು.

ಕೈಗಾರಿಕೆಗಳ ಅನುಮೋದನೆ ಪ್ರಕ್ರಿಯೆಯನ್ನು ತ್ವರಿತವಾಗಿ ನಿಭಾಯಿಸಲು ಹಾಗೂ  ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಲು, ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ ೧೦೯ಕ್ಕೆ ತಿದ್ದುಪಡಿ ತರಲಾಗುತ್ತಿದೆ.  ಯಾವುದೇ ರೀತಿಯ ಉದ್ಯಮ ಆರಂಭಿಸುವವರಿಗೆ ಅನುಮತಿ ನೀಡಲು ಭೂ ಸ್ವಾಧೀನ ಮತ್ತು ಭೂ ಪರಿವರ್ತನೆಗೆ  ಈವರೆಗೆ ಕನಿಷ್ಠ ೬೦ ದಿನಗಳ ಕಾಲಾವಕಾಶದ ಅಗತ್ಯವಿತ್ತು. ಈ ಅವಧಿಯನ್ನು ೩೦ ದಿನಗಳಿಗೆ ಇಳಿಸುತ್ತಿದ್ದು, ಒಂದು ವೇಳೆ ೩೦ ದಿನಗಳಲ್ಲಿ ಅನುಮತಿ ನೀಡದಿದ್ದರೆ, "ಡೀಮ್ಡ್" ಅಂದರೆ ಪರಿಗಣಿತ ಅನುಮೋದನೆ ಮತ್ತು ಪರಿವರ್ತನೆ ಎಂದು ಪರಿಗಣಿಸುವ ವ್ಯವಸ್ಥೆಯನ್ನು ಸಹ ಅಡಕಗೊಳಿಸುತ್ತಿದ್ದೇವೆ ಎಂದರು.

ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೋದ್ಯಮ ಅಭ್ಯುದಯದ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ವಿವಿಧ ವಲಯಗಳಲ್ಲಿ ಕ್ಲಸ್ಟರ್ಗಳನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಪ್ರಮುಖವಾಗಿ ಕೊಪ್ಪಳದಲ್ಲಿ ಟೋಯ್ಸ್ ಕ್ಲಸ್ಟರ್, ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್,  ಹುಬ್ಬಳ್ಳಿಯಲ್ಲಿ ಎಫ್‌ಎಂಸಿಜಿ ಕ್ಲಸ್ಟರ್, ಕಲಬುರಗಿಯಲ್ಲಿ ಸೌರ ವಿದ್ಯುತ್ ಸರಕುಗಳ ಕ್ಲಸ್ಟರ್ ಮತ್ತು ಬೀದರ್ನಲ್ಲಿ ಕೃಷಿ ಉಪಕರಣಗಳ ಕ್ಲಸ್ಟರ್ ತೆರೆಯಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು.

ಹುಬ್ಬಳ್ಳಿ ಧಾರವಾಡ ಭೂ ಪ್ರದೇಶ ದೇಶಿಯ ಮತ್ತು ಜಾಗತಿಕ ಬಂಡವಾಳ ಹೂಡಿಕೆಗೆ ಸೂಕ್ತ ಸ್ಥಳವಾಗಿದ್ದು, ಇಲ್ಲಿ ಸಕಲ ಮೂಲಸೌಕರ್ಯ, ನುರಿತ ಮಾನವ ಸಂಪನ್ಮೂಲದ ಲಭ್ಯತೆ ಇದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಪಾರದರ್ಶಕ ಆಡಳಿತ ವ್ಯವಸ್ಥೆ ಇದ್ದು, ಇದರ ಲಾಭವನ್ನು ಪಡೆಯಲು ಹೂಡಿಕೆದಾರರು ಮುಂದಾಗಬೇಕು ಎಂದರು.

ಇನ್ವೆಸ್ಟ್ ಹುಬ್ಬಳ್ಳಿ ಸಮಾವೇಶದಲ್ಲಿ ಪಾಲ್ಗೊಂಡಿರುವ ಉದ್ಯಮಿಗಳ ಉಪಸ್ಥಿತಿಯು ರಾಜ್ಯದ ಮೇಲಿನ ಬದ್ಧತೆ ಮತ್ತು ನಂಬಿಕೆಯನ್ನು ನಿರೂಪಿಸುತ್ತದೆ. ರಾಜ್ಯ ಸರ್ಕಾರ ಕೂಡ ನಿಮ್ಮೆಲ್ಲರನ್ನು ಎಲ್ಲಾ ರೀತಿಯಲ್ಲೂ ಬೆಂಬಲಿಸುತ್ತದೆ. ಇತ್ತೀಚೆಗೆ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಅತ್ಯಂತ ಫಲಪ್ರದವಾಗಿದ್ದು, ಆ ಸಂದರ್ಭದಲ್ಲಿ ೪೦ ಕ್ಕೂ ಹೆಚ್ಚು ಕಂಪನಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡುವ ಸಂಬಂಧ ತಮ್ಮೊಂದಿಗೆ ಚರ್ಚಿಸಿ ಆಸಕ್ತಿ ತೋರಿದ್ದವು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಈ ಸಮಾವೇಶಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಉದ್ಯಮಿಗಳ ಆಗಮನವನ್ನು ನೋಡಿದರೆ ಕೈಗಾರಿಕೋದ್ಯಮದಲ್ಲಿ ಕರ್ನಾಟಕಕ್ಕಿರುವ ಅವಕಾಶ ಮತ್ತು  ಬದ್ಧತೆಯನ್ನು ತೋರುತ್ತದೆ. ಭಾರತದಲ್ಲಿ ಕರ್ನಾಟಕ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ,  ಬಹುತೇಕ ಅಂತಾರಾಷ್ಟ್ರೀಯ ಕಂಪನಿಗಳು ಕರ್ನಾಟಕವನ್ನು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡಿದ್ದು, ೨೦೧೮ - ೧೯ ರಲ್ಲಿ ಕರ್ನಾಟಕವು ಮತ್ತೆ ಅತ್ಯಂತ ಆಕರ್ಷಕ ಹೂಡಿಕೆ ತಾಣವಾಗಿ ದೇಶದ ಅಗ್ರ ಸ್ಥಾನವನ್ನು ಗಳಿಸಿದೆ ಎಂದು ಹೇಳಿದರು.

ಮೆಟ್ರೋಪಾಲಿಟನ್ ಪ್ರದೇಶ ಸ್ಥಿರವಾದ ಆರ್ಥಿಕತೆಗೆ ಕೊಡುಗೆ ನೀಡಲಿದ್ದು, ಜೊತೆಗೆ ಪ್ರಾದೇಶಿಕ ಸ್ಪರ್ಧಾತ್ಮಕತೆ ಪರಿಹರಿಸಲು ಸಹಕಾರಿಯಾಗಲಿದೆ. ಸ್ಥಳೀಯ ಸಮುದಾಯಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮೂಲಕ ರಾಜ್ಯದ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿದೆ ಎಂದರು.

ರಾಜ್ಯದ ೯ ಕ್ಲಸ್ಟರ್ ಗಳ ಪೈಕಿ ರಲ್ಲಿ ೫ ಉತ್ತರ ಕರ್ನಾಟಕದ ಪ್ರಾದೇಶಿಕ ಸಾಮರ್ಥ್ಯದ ಆಧಾರದ ಮೇಲೆ ರೂಪುಗೊಳಿಸಲಾಗುತ್ತಿದೆ. ಉತ್ತರ ಕರ್ನಾಟಕಕ್ಕೆ ಏಕುಸ್ನಂತಹ ಉನ್ನತ ಕಂಪನಿಗಳು ಮೆರಗು ನೀಡಿದೆ. ಬೆಳಗಾವಿಯಲ್ಲಿ ೩೦೦ ಎಕರೆ ಭೂಮಿಯಲ್ಲಿ ಭಾರತದ ಮೊದಲ ಖಾಸಗಿ ಏರೋಸ್ಪೇಸ್ ಎಸ್‌ಇ ಜೆಡ್ ಅನ್ನು ಏಕುಸ್ ಅಭಿವೃದ್ಧಿಪಡಿಸಿದ್ದು, ಪ್ರಸ್ತುತ ಈ ಕಂಪೆನಿ  ಕಾರ್ಯನಿರ್ವಹಿಸುತ್ತಿದೆ ಎಂದರು.

ಭಾರತದ ಸ್ಟೀಲ್ ಸಿಟಿ ಬಳ್ಳಾರಿಯಲ್ಲಿ ಟೆಕ್ಸ್ಟೈಲ್ ಕ್ಲಸ್ಟರ್ ತೆರೆಯುತ್ತಿರುವುದು ವಿಶೇಷವಾಗಿದೆ. ಈ ಜಿಲ್ಲೆಯನ್ನು ಭಾರತದ ಡೆನಿಮ್ ಕ್ಯಾಪಿಟಲ್ ಎಂದು ಸಹ ಕರೆಯಲಾಗುತ್ತದೆ. ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಕಾಂಪೋನೆಂಟ್ಸ್ ಉತ್ಪಾದನಾ ಘಟಕಗಳ ಕ್ಲಸ್ಟರ್ ಹಾಗೂ ಎಫ್‌ಎಂಸಿಜಿ ಅನ್ನು ಸಹ ತೆರೆಯಲಾಗುತ್ತಿದೆ ಎಂದರು.

ರಾಜ್ಯದ ೨ ಮತ್ತು ೩ನೇ ಶ್ರೇಣಿ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸೂಕ್ತವಾದ ಭೂಮಿ ಒದಗಿಸಲು ಲ್ಯಾಂಡ್ ಬ್ಯಾಂಕ್ ರಚಿಸಿದ್ದೇವೆ. ಪ್ರಸ್ತುತ  ಹುಬ್ಬಳ್ಳಿ - ಧಾರವಾಡದಲ್ಲಿ  ಸುಮಾರು ೫೪೦೦ ಎಕರೆ ಭೂಮಿ ಲಭ್ಯವಿದ್ದು, ೩೦೦೦ ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗುವುದು ಎಂದರು.

 ಏರೋಸ್ಪೇಸ್, ರಕ್ಷಣಾ ಸಲಕರಣೆ, ಆಟೋ ಕಾಂಪೋನೆಂಟ್ಸ್, ವಿದ್ಯುತ್ ವಾಹನಗಳು, ಐಟಿ, ಕೃಷಿ-ವ್ಯವಹಾರದಂತಹ ಕ್ಷೇತ್ರಗಳು ಆರ್ಥಿಕಾಭಿವೃದ್ಧಿ ಹೆಚ್ಚಿಸಲು ಮತ್ತು ರಾಜ್ಯಾದ್ಯಂತ ಉದ್ಯೋಗ ಸೃಷ್ಟಿಸಲು ಸಹಕಾರಿಯಾಗಲಿವೆ. ಇಲ್ಲಿನ ಸೌಲಭ್ಯ ಹಾಗೂ ಸಹಕಾರವನ್ನು ಹೂಡಿಕೆದಾರರು ಬಳಸಿಕೊಳ್ಳಬೇಕು, ಅಷ್ಟೇ ಅಲ್ಲದೇ ಬೆಂಗಳೂರಿನಲ್ಲಿ ೨೦೨೦ ರ ನವೆಂಬರ್ ೩ ರಿಂದ ೫ ರವರೆಗೆ ನಿಗದಿಯಾಗಿರುವ ಇನ್ವೆಸ್ಟ್ ಕರ್ನಾಟಕ ೨೦೨೦ - ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಭಾಗವಹಿಸಲು ಇದೇವೇಳೆ ಎಲ್ಲರನ್ನು ಮುಕ್ತ ಮನಸ್ಸಿನಿಂದ ಆಹ್ವಾನಿಸುತ್ತಿದ್ದೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. 

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಕರ್ನಾಟಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದೇಶಿ ನೇರ ಬಂಡವಾಳ - ಎಫ್ಡಿಐ ಹೂಡಿಕೆಯಲ್ಲಿ ದೇಶದಲ್ಲಿ  ೩ ನೇ ಸ್ಥಾನದಲ್ಲಿದೆ. ಕರ್ನಾಟಕದ ವಾಣಿಜ್ಯ ಕೇಂದ್ರವಾಗಿ, ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪಟ್ಟಣ ಗುರುತಿಸಿಕೊಂಡಿದೆ. ಈ ಅವಳಿ ನಗರಗಳು ರಾಜಧಾನಿ ಬೆಂಗಳೂರಿನ ನಂತರ ರಾಜ್ಯದ ಅತಿದೊಡ್ಡ ಮಹಾನಗರ ಪ್ರದೇಶವಾಗಿದೆ. ಅಲ್ಲದೆ, ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯನ್ನು [ಎಚ್ಡಿಎಂಸಿ] ದೇಶದ ೧೦೦ ಸ್ಮಾರ್ಟ್ ಸಿಟಿಗಳಲ್ಲಿ ಒಂದನ್ನಾಗಿ ಆಯ್ಕೆ ಮಾಡಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com