ಬೆಂಗಳೂರು: ತುಂಡು ಭೂಮಿಗಾಗಿ ಇಬ್ಬರ ನಡುವಿನ ಕಲಹ, ನೆಲೆ ಕಳೆದುಕೊಂಡ 30 ಕುಟುಂಬ 

ಒಂದು ತುಂಡು ಭೂಮಿಗೆ ಇಬ್ಬರ ನಡುವೆ ಆರಂಭವಾದ ಕಿತ್ತಾಟ ಸುಮಾರು 30 ಕುಟುಂಬಗಳು ನೆಲೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಬೆಂಗಳೂರಿನ ಮಹದೇವಪುರ ವಲಯದ ಮಾರತಹಳ್ಳಿ ಸಮೀಪ ಮುನ್ನೇಕೋಲಾಲದಲ್ಲಿ ನಡೆದಿದೆ.
ನೆಲಸಮಗೊಂಡ ಮನೆಮುಂದೆ ನಿರಾಶ್ರಿತರು
ನೆಲಸಮಗೊಂಡ ಮನೆಮುಂದೆ ನಿರಾಶ್ರಿತರು

ಬೆಂಗಳೂರು: ಒಂದು ತುಂಡು ಭೂಮಿಗೆ ಇಬ್ಬರ ನಡುವೆ ಆರಂಭವಾದ ಕಿತ್ತಾಟ ಸುಮಾರು 30 ಕುಟುಂಬಗಳು ನೆಲೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಬೆಂಗಳೂರಿನ ಮಹದೇವಪುರ ವಲಯದ ಮಾರತಹಳ್ಳಿ ಸಮೀಪ ಮುನ್ನೇಕೋಲಾಲದಲ್ಲಿ ನಡೆದಿದೆ.


ತಾವು ಮನೆಯೊಳಗಿದ್ದ ಹೊತ್ತಿನಲ್ಲಿಯೇ ಸ್ಥಳೀಯ ಗೂಂಡಾಗಳು ನಿನ್ನೆ ಬೆಳಗ್ಗೆ ಬಂದು ಶೆಡ್ ಗಳನ್ನು ನೆಲಸಮಗೊಳಿಸಿದ್ದಾರೆ. ಅಲ್ಲದೆ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆಶ್ರಯ ಕಳೆದುಕೊಂಡವರು ಕಣ್ಣೀರು ಹಾಕುತ್ತಿದ್ದಾರೆ.ಘಟನೆಯಲ್ಲಿ ಆರು ತಿಂಗಳ ಮಗುವಿಗೆ ಗಾಯವಾಗಿದೆ. ಆಕ್ರೋಶಗೊಂಡ ನಿವಾಸಿಗಳು ಮಾರತಹಳ್ಳಿ ಠಾಣೆ ಪೊಲೀಸರ ನೆರವು ಕೋರಿದ್ದಾರೆ.


ಸ್ಥಳೀಯ ಜನರ ಗುಂಪೊಂದು ಬೆಳ್ಳಂಬೆಳಗ್ಗೆ ಜೆಸಿಬಿ ತೆಗೆದುಕೊಂಡು ಬಂದು ನಮ್ಮ ಶೆಡ್ ಗಳನ್ನು ಕೆಡವಿ ಹಾಕಿದರು ಎಂದು ಗುತ್ತಿಗೆ ಕೆಲಸ ಮಾಡುತ್ತಿರುವ ನಿವಾಸಿ ರವಿ ಹೇಳುತ್ತಾರೆ. ಯಾಕೆ ಮನೆ ನೆಲಸಮ ಮಾಡುತ್ತೀರಿ ಎಂದು ಕೇಳಿದಾಗ ಭೂ ಮಾಲೀಕರು ನಮಗೆ ಹೇಳಿದ್ದಾರೆ ಎಂದು ಉತ್ತರಿಸಿದರು ಎನ್ನುತ್ತಾರೆ ರವಿ. 


ನಾವಿಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದು ಸರಿಯಾದ ಸಮಯಕ್ಕೆ ಬಾಡಿಗೆ ಕೊಡುತ್ತೇವೆ. ಆದರೆ ಅವರು ಏಕಾಏಕಿ ಬಂದು ನಮ್ಮ ಮನೆಯೊಳಗಿರುವ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ನೆಲಸಮ ಮಾಡಿ ಹೋದರು. ಬೇರೆ ದಾರಿ ಕಾಣದೆ ಪೊಲೀಸರಿಗೆ ದೂರು ನೀಡಿದೆವು ಎಂದರು.  


ತಮ್ಮನ್ನು ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ತಪ್ಪು ತಿಳಿದುಕೊಂಡು ಈ ರೀತಿ ಮಾಡಿರಲೂಬಹುದು ಎಂದು ನಿವಾಸಿಗಳು ಹೇಳುತ್ತಾರೆ. ನಾವು ಅಕ್ರಮ ಬಾಂಗ್ಲಾದೇಶಿ ವಲಸಿಗರಲ್ಲ. ನಾವು ಒಡಿಶಾದಿಂದ ಬಂದವರು. ನಮ್ಮಲ್ಲಿ ಬಾಡಿಗೆ ಕರಾರುಪತ್ರವಿದೆ. ಈ ಹಿಂದೆ ಇಲ್ಲಿ ಆಸ್ತಿಗಳನ್ನು ಕೆಡವಿದಾಗ ಪೊಲೀಸರು ಮತ್ತು ಪಾಲಿಕೆ ಮಧ್ಯಪ್ರವೇಶಿಸಲು ಕೋರಿಕೊಂಡೆವು, ಆದರೆ ನಮಗೆ ಸಹಾಯವಾಗಲಿಲ್ಲ ಎಂದು ನಿವಾಸಿ ಹುಸೇನ್ ಹೇಳುತ್ತಾರೆ. ಇನ್ನು ಗಾಯೊಂಡ ಮಗುವಿನ ತಾಯಿ ಇನ್ನಷ್ಟು ಭೀತಿಗೊಳಗಾಗಿದ್ದಾರೆ, ಅವರ ಪತಿ ಸದ್ಯ ಪೊಲೀಸ್ ಠಾಣೆಯಲ್ಲಿದ್ದಾರೆ.


ಭೂಮಿಯ ಮಾಲೀಕತ್ವ ವಿಚಾರದಲ್ಲಿ ಇಬ್ಬರ ಮಧ್ಯೆ ಜಗಳ ನಡೆದು ಈ ರೀತಿ ಮನೆಗಳನ್ನು ನೆಲಸಮ ಮಾಡಿರಬೇಕು ಎನ್ನುತ್ತಾರೆ ಸರ್ಕಾರೇತರ ಸಂಘಟನೆ ಸ್ವರಾಜ್ ಇಂಡಿಯಾದ ಜಿಯಾ ನೊಮನಿ. ನಿವಾಸಿಗಳು ಎಫ್ಐಆರ್ ದಾಖಲಿಸಿರುವುದು ಮಾತ್ರವಲ್ಲದೆ, ಎನ್ ಜಿಒ ಮತ್ತು ಭೂಮಿಯ ಮಾಲೀಕ ನಾರಾಯಣ್ ಗೌಡ ಕೂಡ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಮನೆ ನೆಲಸಮ ಮಾಡಿದವರನ್ನು ಸ್ಥಳೀಯರು ಗುರುತಿಸಿದ್ದಾರೆ ಎಂದರು.


ಈ ಮನೆಗಳನ್ನು ನೆಲಸಮ ಮಾಡಿದ್ದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ತಮಗೆ ಈ ಘಟನೆ ಬಗ್ಗೆ ಗೊತ್ತಿಲ್ಲ, ಈ ಬಗ್ಗೆ ತನಿಖೆ ಮಾಡಲಾಗುವುದು ಎಂದರು.


ನವೀನ್ ಕುಮಾರ್ ಎಂಬ ಸ್ಥಳೀಯರು ನೀಡಿದ ದೂರಿನ ಮೇರೆಗೆ 10 ಮಂದಿಯನ್ನು ಬಂಧಿಸಲಾಗಿದೆ. ಮೂರು ಜೆಸಿಬಿ ಮತ್ತು ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವೈಟ್ ಫೀಲ್ಡ್ ಉಪ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ತಿಳಿಸುತ್ತಾರೆ.

ನವೀನ್ ಕುಮಾರ್ ಹೇಳುವುದೇನು?: ಕೆಲವು ಸ್ಥಳೀಯರು ಕಳೆದ ಬುಧವಾರ ಮನೆಗೆ ಬಂದು ನಮ್ಮ ಕುಟುಂಬದವರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದರು. ಮರುದಿನ ಬೆಳಗ್ಗೆ ಜೆಸಿಬಿ ಜೊತೆಗೆ ಬಂದು ಶೆಡ್ ಗಳನ್ನೆಲ್ಲಾ ನೆಲಸಮ ಮಾಡಿದರು. 


ಭೂಮಿ ನನ್ನ ತಾತನಿಗೆ ಸೇರಿದ್ದು ಅವರು 1985ರಲ್ಲಿ ತೀರಿಕೊಂಡರು. ನನ್ನ ಹೆಸರಿಗೆ ಭೂಮಿ ವರ್ಗಾಯಿಸಲು ಬಿಬಿಎಂಪಿಗೆ ಎಲ್ಲಾ ದಾಖಲೆಗಳನ್ನು ನೀಡಿ ಅದು ನನ್ನ ಹೆಸರಿಗೆ ಆಯಿತು. ಈಗ ಏಕಾಏಕಿ ನನ್ನ ಜಾಗದಲ್ಲಿ ಕಟ್ಟಿಕೊಟ್ಟಿದ್ದ ಶೆಡ್ ಗಳನ್ನು ನೆಲಸಮ ಮಾಡಿದ್ದು ನೋಡಿ ನನಗೆ ಆಘಾತವಾಗಿದೆ. ಕೆಲಸಗಾರರ ಮೇಲೆ ಕೂಡ ಹಲ್ಲೆ ಮಾಡಿದ್ದಾರೆ. ನೆಲಸಮ ಮಾಡಿದವರಲ್ಲಿ ನಿಮ್ಮಲ್ಲಿ ಏನು ದಾಖಲೆಗಳಿವೆ ಎಂದು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದರು. ಹೀಗಾಗಿ ನಾನು ಪೊಲೀಸರ ನೆರವು ಕೇಳಿದ್ದೇನೆ ಎಂದರು.


ಸಿವಿಲ್ ಕಾಂಟ್ರಾಕ್ಟರ್ ಆಗಿರುವ ನವೀನ್ 15 ವರ್ಷಗಳ ಹಿಂದೆ ಕೂಲಿ ಕಾರ್ಮಿಕರಿಗೆ ಈ ಜಾಗದಲ್ಲಿ ಶೆಡ್ ಗಳನ್ನು ನಿರ್ಮಿಸಿಕೊಟ್ಟಿದ್ದರಂತೆ. ಅವರೆಲ್ಲ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಬಿಹಾರ ಮೂಲದವರು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com