ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣ: ಆರೋಪಿಗಳಿಗೆ ಮಾ.2 ವರೆಗೆ ನ್ಯಾಯಾಂಗ ಬಂಧನ

ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು ಈ ಸಂಬಂಧ ಕೋರ್ಟ್ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ

ಹುಬ್ಬಳ್ಳಿ: ಭಾರತ ಸರ್ಕಾರದ ವಿದ್ಯಾರ್ಥಿ ವೇತನ ಪಡೆದು ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು ಈ ಸಂಬಂಧ ಕೋರ್ಟ್ ಆರೋಪಿಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. 

ದೇಶದ್ರೋಹದ ಆರೋಪ ಸಂಬಂಧ ಗೋಕುಲ್ ರೋಡ್ ಪೊಲೀಸರು ಇಂದು ಹುಬ್ಬಳ್ಳಿಯ 3ನೇ ಜೆಎಂಎಫ್ ಸಿ ನ್ಯಾಯಾಲಯ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪುಷ್ಪಾ ಅವರು ಆರೋಪಿಗಳಿಗೆ ಮಾರ್ಚ್ 2ರವರೆಗೂ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. 

ನಂತರ ಆರೋಪಿಗಳನ್ನು ಕೋರ್ಟ್ ನಿಂದ ಹೊರಗಡೆ ಕರೆದುಕೊಂಡು ಬರುವಾಗ ಅಲ್ಲಿ ಸೇರಿದ್ದ ಸಾರ್ವಜನಿಕರು ಆರೋಪಿಗಳ ಮೇಲೆ ಹಲ್ಲೆಗೆ ಮುಂದಾದರೂ, ಈ ವೇಳೆ ಪೊಲೀಸರು ಸಾರ್ವಜನಿಕರನ್ನು ತಡೆದು ಆರೋಪಿಗಳನ್ನು ಪೊಲೀಸ್ ವ್ಯಾನ್ ಗೆ ಹತ್ತಿಸಿದರು. ಈ ವೇಳೆ ಕೆಲವರು ತಮ್ಮ ಚಪ್ಪಲಿ ಮತ್ತು ಶೂಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಶ್ಮೀರದ ಶೋಫಿಯಾನ ಜಿಲ್ಲೆಯ ಆಮಿರ್ ಮೊಹಿದ್ದೀನ್ ವಾನಿ, ಬಾಸೀತ್ ಆಸೀಫ್ ಸೋಫಿ, ತಾಲಿಬ ಮಾಜಿದ್ ಎನ್ನುವವರು ಮೊಬೈಲ್ ನಲ್ಲಿ ವಿಡಿಯೋ ಮಾಡಿ ಪಾಕ್ ಪರ ಘೋಷಣೆ ಕೂಗಿದ್ದರು ಈ ಸಂಬಂಧ ಪೊಲೀಸರು ಅವರನ್ನು ಬಂಧಿಸಿದ್ದರು. ಇನ್ನು ಈ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಸಹ ಅಮಾತು ಮಾಡಿತ್ತು.

ಈ ಮಧ್ಯೆ ಆರೋಪಿಗಳನ್ನು ಈ ಮೊದಲು ಪೊಲೀಸರು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಇದು ರಾಜ್ಯ ಮತ್ತು ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ಏಕೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಿಂದ ವರದಿ ಕೇಳಲಾಗಿದೆ ಎಂದರು. 

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಬಾಂಡ್ ಮೇಲೆ ಬಿಡುಗಡೆ ಮಾಡಿದ್ದ ಬಗ್ಗೆ ವರದಿ ಕೇಳಿದ್ದೇವೆ. ಈಗಾಗಲೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಮುಂದಿನ ಕಾನೂನು ಪ್ರಕ್ರಿಯೆ ನಡೆಯಲಿದೆ. ಯಾವುದೇ ಕಾರಣಕ್ಕೂ ದೇಶದ್ರೋಹಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಠಿಣವಾದ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಗೃಹ ಇಲಾಖೆಯಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com