ಯೋಧ ಗುರು ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್; 25 ಲಕ್ಷ ಹಣ ಬಿಡುಗಡೆ ಮಾಡಿದ ಸಿಎಂ ಬಿಎಸ್ ವೈ

ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲ್ಲೂಕಿನ ಗುಡಿಗೆರೆಯ ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು 25 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ.
ಯೋಧ ಗುರು ಸಮಾಧಿ
ಯೋಧ ಗುರು ಸಮಾಧಿ

ಮಂಡ್ಯ: ಪುಲ್ವಾಮಾ ದಾಳಿಯಲ್ಲಿ ವೀರಮರಣವನ್ನಪ್ಪಿದ ಮದ್ದೂರು ತಾಲ್ಲೂಕಿನ ಗುಡಿಗೆರೆಯ ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು 25 ಲಕ್ಷ ಹಣವನ್ನು ಬಿಡುಗಡೆ ಮಾಡಿದೆ.

ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣ ಕುರಿತಂತೆ ಸರ್ಕಾರಕ್ಕೆ ಇತ್ತೀಚೆಗೆ ಮಂಡ್ಯ ಜಿಲ್ಲಾಧಿಕಾರಿ ಎಂ.ವಿ.ವೆಂಕಟೇಶ್ ಬರೆದಿದ್ದ ಪತ್ರಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸ್ಮಾರಕ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆಯೂ  ಸೂಚನೆ ನೀಡಿದ್ದಾರೆ. ವೀರಯೋಧ ಹೆಚ್.ಗುರು ಹುತಾತ್ಮರಾಗಿ ಇದೇ ಫೆಬ್ರವರಿ 16 ಕ್ಕೆ ವರ್ಷ ಕಳೆದಿತ್ತು,ಆದರೆ ವರ್ಷ ಕಳೆದರೂ ಹೆಚ್.ಗುರು ಅವರ ಸಮಾಧಿ ಜಾಗದಲ್ಲಿ ಸರ್ಕಾರ ಈ ಹಿಂದೆ ನೀಡಿದ್ದ ಭರವಸೆಯಂತೆಯೇ ಸ್ಮಾರಕ ನಿರ್ಮಿಸುವ ಕಾರ್ಯ ಮಾಡಿಲ್ಲ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು.

ಇದರ ನಡುವೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಹ ಯೋಧ ಗುರು ಅವರ ಸ್ಮಾರಕ ನಿರ್ಮಾಣ ಕುರಿತು ಮನವಿ ಸಲ್ಲಿಸಿದ್ದರು. ಗುರು ಪತ್ನಿಯೂ ಕೂಡ ಜಿಲ್ಲಾಧಿಕಾರಿ ಭೇಟಿ ನೀಡಿ ಮನವಿ ಸಲ್ಲಿಸಿದ್ದರು. ಹುತಾತ್ಮ ಯೋಧನ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂಬ ಆರೋಪವೂ ಕೇಳಿ ಬಂದಿತು. ಇದರಿಂದ ಎಚ್ಚೆತ್ತ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸರ್ಕಾರಕ್ಕೆ ಪತ್ರ ಬರೆದಿದ್ದರು. ಯೋಧ ಗುರು ಅವರ ಸ್ಮಾರಕ ನಿರ್ಮಾಣ ಕುರಿತಂತೆ ಕ್ರಮಕೈಗೊಳ್ಳುವಂತೆಯೂ ಮನವಿ ಮಾಡಿದ್ದರು. ಅವರ ಈ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆಯೂ  ಪತ್ರದ ಮೂಲಕ ಸೂಚನೆ ನೀಡಿದ್ದಾರೆ.

ಹುತಾತ್ಮ ಯೋಧ ಹೆಚ್.ಗುರು ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 25 ಲಕ್ಷ ಹಣ ಘೋಷಿಸಿದೆ, ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿಕ ಮದ್ದೂರು- ಮಳವಳ್ಳಿ ರಸ್ತೆಯಲ್ಲಿರುವ ಗುರು ಸಮಾಧಿಗೆ ಸರ್ಕಾರ ಒಂದು ಎಕರೆ ಜಮೀನನ್ನೂ ಸಹ ಮಂಜೂರು ಮಾಡಿದ್ದು, ಅದೇ ಸ್ಥಳದಲ್ಲಿ ಸ್ಮಾರಕ ನಿರ್ಮಾಣವಾಗಲಿದೆ.

ಪ್ರವಾಸಿ ತಾಣವಾಗಿ ಅಭಿವೃದ್ಧಿ
ಇನ್ನೂ ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆAಕಟೇಶ್,ಪುಲ್ವಾಮದಲ್ಲಿ ನಡೆದ ದಾಳಿಯಲ್ಲಿ ವೀರಮರಣವನ್ನಪ್ಪಿದ ಗುಡಿಗೆರೆಯ ಯೋಧ ಗುರು ಅವರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು,ನಮ್ಮ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಂದಿಸಿದ್ದಾರೆ, 25 ಲಕ್ಷ ಹಣವನ್ನು ಸಹ ಬಿಡುಗಡೆ ಮಾಡುವಂತೆಯೂ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಅದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು. ಹುತಾತ್ಮ ಯೋಧ ಹೆಚ್.ಗುರುವ ಅವರ ಸಮಾಧಿಯನ್ನು ಉತ್ತಮ ರೀತಿಯಲ್ಲಿ ಭವ್ಯ ಸ್ಮಾರಕವನ್ನಾಗಿ ನಿರ್ಮಾಣ ಮಾಡಲಾಗುವುದು, ಮುಂದಿನ ಯುವ ಪೀಳಿಗೆಗೆ,ಯೋಧ ಗುರು ಅವರ ಹೆಸರನ್ನು ಚಿರಸ್ಥಾಯಿಯಾಗಿರುವಂತೆ ಮಾಡುವ ಕೆಲಸವನ್ನು ಮಾಡುತ್ತೇವೆ, ಅಷ್ಟೇ ಅಲ್ಲದೆ ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಯೂ ಅಭಿವೃದ್ದಿ ಮಾಡಲಾಗುವುದು ಎಂದು ತಿಳಿಸಿದರು.

ಗುರು ಪತ್ನಿ ಕಲಾವತಿ ಧನ್ಯವಾದ ಸಲ್ಲಿಕೆ
ಸರ್ಕಾರ ಯೋಧ ಗುರು ಅವರ ಸ್ಮಾರಕ ನಿರ್ಮಾಣಕ್ಕೆ ಸಮ್ಮತಿಸಿರುವುದಕ್ಕೆ ಪ್ರತಿಕ್ರಿಯಿಸಿರುವ  ಮೃತ ಗುರು ಪತ್ನಿ ಕಲಾವತಿ, ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸುವುದರ ಜೊತೆಗೆ ಸೇನಾಭಿಮಾನಿಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕೆಂದು ಅವರು ಮನವಿ ಮಾಡಿದರು. ಕೊನೆಗೂ ವೀರ ಯೋಧ ಗುರು ಸ್ಮಾರಕಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ದೇಶಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಗುಡಿಗೆರೆಯ ಗಂಡುಗಲಿ ದೇಶಭಕ್ತರಿಗೆ ಮಾದರಿ ಆಗಲಿ ಎಂಬುದ ಸಾರ್ವಜನಿಕರ ಆಶಯವಾಗಿದೆ.

-ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com