ಮಹಾ ಕಿರಿಕಿರಿ: ಕೃಷ್ಣಾ ನದಿಗೆ ನೀರು, ಈಗಲೇ ಎಚ್ಚೆತ್ತುಕೊಳ್ಳಬೇಕಿದೆ ರಾಜ್ಯ ಸರ್ಕಾರ

ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬೆಳಗಾವಿ ಗಡಿ ಭಾಗದಲ್ಲಿ ಸದಾ ಒಂದಿಲ್ಲೊಂದು ಕಿರಿಕಿರಿ ಆಗುತ್ತಲೇ ಇದೆ. ಬೇಸಿಗೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದಾಗ ರಾಜ್ಯಕ್ಕೆ ಗಡಿಯಲ್ಲಿ ಇನ್ನಷ್ಟು ತಲೆನೋವು ಹೆಚ್ಚಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ....
ಕೃಷ್ಣ ನದಿ(ಸಂಗ್ರಹ ಚಿತ್ರ)
ಕೃಷ್ಣ ನದಿ(ಸಂಗ್ರಹ ಚಿತ್ರ)

ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬೆಳಗಾವಿ ಗಡಿ ಭಾಗದಲ್ಲಿ ಸದಾ ಒಂದಿಲ್ಲೊಂದು ಕಿರಿಕಿರಿ ಆಗುತ್ತಲೇ ಇದೆ. ಬೇಸಿಗೆಯಲ್ಲಿ ಕೃಷ್ಣಾ ನದಿ ತೀರದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದಾಗ ರಾಜ್ಯಕ್ಕೆ ಗಡಿಯಲ್ಲಿ ಇನ್ನಷ್ಟು ತಲೆನೋವು ಹೆಚ್ಚಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಈಗಲೇ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಿದೆ.

ಬೇಸಿಗೆ ಆರಂಭಕ್ಕೂ ಮುನ್ನವೇ ಕರ್ನಾಟಕ ಸರ್ಕಾರ ಮಹಾರಾಷ್ಟ್ರದೊಂದಿಗೆ ಕುಡಿವ ನೀರಿಗಾಗಿ ಒಪ್ಪಂದ ಮಾಡಿಕೊಳ್ಳದೇ ಹೋದಲ್ಲಿ ಈ ಬಾರಿಯೂ ಕುಡಿವ ನೀರಿನ ತೊಂದರೆ ತಪ್ಪಿದ್ದಲ್ಲ. ಈಗಲೇ ನದಿಯಲ್ಲಿ ನೀರು ಕಡಿಮೆ ಆಗುತ್ತಲಿದ್ದು, ಬಿರು ಬೇಸಿಗೆಯಲ್ಲಿ ಹನಿ ನೀರಿಗಾಗಿ ಪರಿತಪಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಲಿದೆ.

ಬೇಸಿಗೆ ಆರಂಭಗೊಂಡರೆ ಸಾಕು ಕೃಷ್ಣಾ ನದಿ ತೀರದಲ್ಲಿ ಬಾಯಾರಿಕೆ ಆರಂಭಗೊಳ್ಳುತ್ತದೆ. ಜನ, ಜಾನುವಾರುಗಳ ರಕ್ಷಣೆಗಾಗಿ ಅಗತ್ಯ ಕುಡಿವ ನೀರಿನ್ನು ಒದಗಿಸಲು ಈಗಲೇ ರಾಜ್ಯ ಸರ್ಕಾರ ಸಜ್ಜಾಗಬೇಕಿದೆ. ಹಠಮಾರಿ ಮಹಾರಾಷ್ಟ್ರ ಸರ್ಕಾರ ಕಳೆದ ವರ್ಷ ಕರ್ನಾಟಕ ಎಷ್ಟೇ ಬೇಡಿಕೊಂಡರೂ ಹನಿ ನೀರು ಬಿಡದೇ ಸತಾಯಿಸಿದ್ದು ಇನ್ನೂ ಜನತೆಯ ಮನಸ್ಸಿನಿಂದ ಮಾಸಿಲ್ಲ.

ಕಳೆದೊಂದು ವರ್ಷದ ನಡುವೆ ಕೃಷ್ಣಾ ನದಿಯಲ್ಲಿ ಸಾವಿರಾರು ಟಿಎಂಸಿ ನೀರು ಹರಿದಿದೆ. ಹಾಗೆ ರಾಜಕಾರಣದಲ್ಲೂ ಸಾಕಷ್ಟು ಬದಲಾವಣೆ ಆಗಿವೆ. ಕಳೆದ ವರ್ಷ ಕರ್ನಾಟಕ, ಮಹಾರಾಷ್ಟ್ರ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿತ್ತು. ಮೂರು ಕಡೆ ಒಂದೇ ಪಕ್ಷದ ಸರ್ಕಾರವಿದ್ದರೂ ರಾಜ್ಯದಲ್ಲಿನ ಕೃಷ್ಣೆಯ ಮಕ್ಕಳಿಗೆ ಬೇಸಿಗೆಯಲ್ಲಿ ಮುಕ್ಕು ನೀರು ಸಿಕ್ಕಲಿಲ್ಲ.

ರಾಜ್ಯಕ್ಕೆ ಕುಡಿವ ನೀರಿನ ಉದ್ದೇಶಕ್ಕಾಗಿ ೨ ಟಿಎಂಸಿ ನೀರು ಬಿಡಿಸಲು ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಮುಂದೆ ಬರಲಿಲ್ಲ. ಸದ್ಯ ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದ್ದು, ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವಿದೆ. 
ಈಗಾಗಲೇ ಮಹಾರಾಷ್ಟ್ರದಲ್ಲಿನ ಶಿವಸೇನೆ ನೇತೃತ್ವದ ಸಮ್ಮಿಶ್ರ ಸರ್ಕಾರ ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಮಗ್ಗಲು ಮುಳ್ಳಾಗಿ ಕಾಡುತ್ತಿದೆ. ಬೇಸಿಗೆಯಲ್ಲಿ ಉಂಟಾಗಲಿರುವ ಕುಡಿವ ನೀರಿನ ಸಮಸ್ಯೆ ವಿಷಯದಲ್ಲೂ ಅದು ಕಠಿಣವಾಗಿ ನಡೆದುಕೊಳ್ಳದು ಎಂದು ಹೇಳಲಿಕ್ಕಾಗದು.

ಕಳೆದ ವರ್ಷ ಮೂರು ಕಡೆಗಳಲ್ಲೂ ಒಂದೇ ಪಕ್ಷದ ಸರ್ಕಾರವಿದ್ದರೂ ಕರ್ನಾಟಕಕ್ಕೆ ಮಾತ್ರ ಹನಿ ನೀರು ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಪರಿಸ್ಥಿತಿ ಕಳೆದ ವರ್ಷಕ್ಕಿಂತ ಭಿನ್ನವಾಗಿದ್ದು, ಕುಡಿವ ಉದ್ದೇಶಕ್ಕೆ ನೀರು ಸಿಗುವುದು ಸಾಧ್ಯವೆ? ಎನ್ನುವ ಚಿಂತೆ ಕೃಷ್ಣಾ ತೀರದ ಜನತೆಯಲ್ಲಿ ಮನೆ ಮಾಡಲಾರಂಭಿಸಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿ ಆಡಳಿತವಿದ್ದಾಗ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಕರ್ನಾಟಕಕ್ಕೆ ಕುಡಿವ ನೀರು ಬಿಡುಗಡೆ ಮಾಡಲು ಪರಸ್ಪರ ಒಪ್ಪಂದದ ಪ್ರಸ್ತಾಪ ಮಾಡಿದ್ದರು. ನಾವು ನಿಮಗೆ ನೀರು ಕೊಡುತ್ತೇವೆ. ನೀವು ನಮಗೆ ನೀರು ಕೊಡಿ ಎನ್ನುವ ಷರತ್ತು ಮುಂದಿಟ್ಟಿದ್ದರು. ಕರ್ನಾಟಕ ಸರ್ಕಾರ ಷರತ್ತಿಗೆ ಬದ್ದವಾದರೂ ಮಹಾ ಸರ್ಕಾರ ಮಾತ್ರ ಒಪ್ಪಂದಕ್ಕೆ ಮುಂದಾಗಲೇ ಇಲ್ಲ. ಪರಿಣಾಮವಾಗಿ ಬೇಸಿಗೆಯಲ್ಲಿ ನೀರು ಬಿಡಲೇ ಇಲ್ಲ. ನೀರಿಗಾಗಿ ಜನತೆ ಬತ್ತಿದ ನದಿಯಲ್ಲೇ ಉಪವಾಸ ಸತ್ಯಾಗ್ರಹ ಹೋರಾಟ ಮಾಡಿದರೂ ಪ್ರಯೋಜವಾಗದೇ ಕರ್ನಾಟಕ ಸರ್ಕಾರ ಅಸಹಾಯಕ ಸ್ಥಿತಿ ಎದುರಿಸಿತು.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಈಗಲೇ ಕೃಷ್ಣಾ ನದಿ ತೀರದಲ್ಲಿ ಬೇಸಿಗೆಯಲ್ಲಿ ಉಂಟಾಗಲಿರುವ ಕುಡಿವ ನೀರಿನ ತೊಂದರೆಗೆ ಪರಿಹಾರ ಕಂಡುಕೊಳ್ಳಲು ಮಹಾರಾಷ್ಟ್ರದೊಂದಿಗೆ ಪರಸ್ಪರ ಒಪ್ಪಂದದ ಮೂಲಕವೋ ಇಲ್ಲವೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಮೂಲಕವೋ ಕುಡಿವ ನೀರು ಪಡೆದುಕೊಳ್ಳಲು ರಣತಂತ್ರ ಹೆಣೆಯಬೇಕಿದೆ. ಈಗಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಬೇಸಿಗೆಯಲ್ಲಿ ಕಳೆದ ಬಾರಿಗಿಂತಲೂ ಪ್ರಸಕ್ತ ವರ್ಷ ತೀವ್ರ ಕುಡಿವ ನೀರಿನ ತೊಂದರೆ ಎದುರಿಸಬೇಕಾಗಿ ಬರಲಿದೆ.

ರಾಜ್ಯ ಸರ್ಕಾರ ಪ್ರಸಕ್ತ ಅಧಿವೇಶದಲ್ಲಿಯೇ ಕೃಷ್ಣಾ ನದಿಗೆ ಮಹಾದಿಂದ ಕುಡಿವ ನೀರು ಹರಿಸುವ ಕುರಿತು ಗಂಭೀರ ಚಿಂತನೆ ನಡೆಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ. ಈ ಬಗ್ಗೆ ಸ್ವಲ್ಪವೇ ನಿರ್ಲಕ್ಷ್ಯ ವಹಿಸಿದರೂ ಕೃಷ್ಣೆಯ ಮಕ್ಕಳ ಹಿಡಿ ಶಾಪಕ್ಕೆ ಗುರಿಯಾಗುವ ಸನ್ನಿವೇಶ ನಿರ್ಮಾಣವಾದಲ್ಲಿ ಅಚ್ಚರಿ ಪಡಬೇಕಿಲ್ಲ.

-ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com