ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ: ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಭಾಸ್ಕರ್ ರಾವ್

ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಸಹಿಸುವುದಿಲ್ಲ ಎಂದು ನಗರ  ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನಕಾರರಿಗೆ ಎಚ್ಚರಿಕೆ‌ ನೀಡಿದ್ದಾರೆ.
ಅಮೂಲ್ಯ ಲಿಯೋನಾ-ಭಾಸ್ಕರ್ ರಾವ್
ಅಮೂಲ್ಯ ಲಿಯೋನಾ-ಭಾಸ್ಕರ್ ರಾವ್

ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಸಹಿಸುವುದಿಲ್ಲ ಎಂದು ನಗರ  ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಭಟನಕಾರರಿಗೆ ಎಚ್ಚರಿಕೆ‌ ನೀಡಿದ್ದಾರೆ.

ಪಾಕಿಸ್ತಾನ  ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಬಸವರಾಜ್  ಬೊಮ್ಮಾಯಿ ಅವರಿಗೆ ಈ ಕುರಿತು ಮಾಹಿತಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ  ಅವರು, ಕಾನೂನು ಸುವ್ಯವಸ್ಥೆ ಹಾಳು ಮಾಡಿದರೆ ಸಹಿಸಲು  ಸಾಧ್ಯವಿಲ್ಲ. ನಾವು ಪ್ರತಿಭಟನೆಗಳಿಗೆ ಅವಕಾಶ ನೀಡುತ್ತಲೇ ಇದ್ದೇವೆ. ಇದುವರೆಗೂ  ಯಾವುದೇ ಪ್ರತಿಭಟನೆಯಲ್ಲಿಯೂ ಈ ರೀತಿಯಾಗಿ ಆಗಿರಲಿಲ್ಲ. ಕಾನೂನು ಸುವ್ಯವಸ್ಥೆ ಹಾಳು  ಮಾಡುವ ಇಂತಹ ಕಾರ್ಯಕ್ರಮಗಳನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು,   ಮಾಡುವುದೆಲ್ಲವನ್ನು ಮಾಡಿ ಏನು ಮಾಡಿಲ್ಲ ಎಂದು ನಾಟಕ ಮಾಡುವುದು ಸರಿಯಲ್ಲ ಎಂದು  ಕಾರ್ಯಕ್ರಮ ಆಯೋಜಕರಿಗೆ ಆಯುಕ್ತರು ತರಾಟೆಗೆ ತೆಗೆದುಕೊಂಡರು.

ಪ್ರಕರಣಕ್ಕೆ  ಸಂಬಂಧಿಸಿಂತೆ ಅಮೂಲ್ಯಳ ವಿರುದ್ಧ ದೇಶದ್ರೋಹದ ಕೇಸ್ ಹಾಕಲಾಗಿದ್ದು,  ಆಯೋಜಕರ ವಿರುದ್ಧ  ದೂರು ದಾಖಲಿಸಿ ಅಗತ್ಯ ತನಿಖೆ ಮಾಡುತ್ತೇವೆ,  ಯಾರನ್ನು ಕೂಡ ಸುಮ್ಮನೆ  ಬಿಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.

ವೇದಿಕೆ  ಕಾರ್ಯಕ್ರಮ ಆಯೋಜನೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಜನರಿದ್ದಾರೆ ಎಂದು ಉದ್ರೇಕಕಾರಿ ಮಾತು ಆಡುವುದು ಸರಿಯಲ್ಲ. ಅದೆಲ್ಲವನ್ನು ನೋಡಿ ಕಣ್ಣುಮುಚ್ಚಿ ಕುಳಿತುಕೊಳ್ಳಲು  ಸಾಧ್ಯವಿಲ್ಲ. ಬೆಂಗಳೂರು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ.  ಬೇರೆ ಬೇರೆ ಕಡೆ ಪ್ರತಿಭಟನೆ ಆದಾಗ ಲಾಠಿ ಚಾರ್ಜ್ ಆಗಿದೆ. ಬೆಂಗಳೂರಿನಲ್ಲಿ ಅಂತಹ ಒಂದು  ಘಟನೆ ಸಹ ಆಗಿಲ್ಲ. ನಿಮ್ಮ ಸ್ವಾರ್ಥಕ್ಕೆ ವೇದಿಕೆ ಬಳಸಿಕೊಂಡು ಕಾನೂನು ಸುವ್ಯವಸ್ಥೆ  ಹಾಳು ಮಾಡಬೇಡಿ ಎಂದು ಆಯುಕ್ತರು ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com