ಗೋಕರ್ಣದಲ್ಲಿ ವೈಭವದ ಶಿವರಾತ್ರಿ, ಸಾವಿರಾರು ಭಕ್ತರಿಂದ ಆತ್ಮಲಿಂಗ ದರ್ಶನ

ಗೋಕರ್ಣದ  ಮಹಾಬಲೇಶ್ವರ ದೇವಸ್ಥಾನ ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ಬಂದ ಬಳಿಕ 12ನೇ ವರ್ಷದ ಮಹಾ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಆತ್ಮಲಿಂಗ
ಆತ್ಮಲಿಂಗ

ಗೋಕರ್ಣ: ಗೋಕರ್ಣದ  ಮಹಾಬಲೇಶ್ವರ ದೇವಸ್ಥಾನ ಶ್ರೀರಾಮಚಂದ್ರಾಪುರ ಮಠದ ಸುಪರ್ದಿಗೆ ಬಂದ ಬಳಿಕ 12ನೇ ವರ್ಷದ ಮಹಾ ಶಿವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು.

ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀಮಹಾಸ್ವಾಮೀಜಿ ರಾತ್ರಿ 11.30ಕ್ಕೆ ಮಹಾಬಲನ ಸಾನ್ನಿಧ್ಯಕ್ಕೆ ಆಗಮಿಸಿ, ಆತ್ಮಲಿಂಗಕ್ಕೆ ವಿಶೇಷ ಪೂಜೆ  ಸಲ್ಲಿಸಿದರು.

ಒಂಬತ್ತು ದಿನಗಳ ಶಿವರಾತ್ರಿ ಉತ್ಸವದ ಐದನೇ ದಿನವಾದ ಶುಕ್ರವಾರ ಆತ್ಮಲಿಂಗ ದರ್ಶನ ಪಡೆದು ಅಭಿಷೇಕ ಸೇವೆ ನೆರವೇರಿಸಲು ಗುರುವಾರ  ರಾತ್ರಿಯಿಂದಲೇ ದೊಡ್ಡ ಸಂಖ್ಯೆಯ ಭಕ್ತಾದಿಗಳು ಸರದಿ ಸಾಲುಗಳಲ್ಲಿ ನಿಂತಿದ್ದರು.  

ಮುಂಜಾನೆ 2.55ಕ್ಕೆ ಸರಿಯಾಗಿ ದೇವಸ್ಥಾನದ ಮುಖ್ಯದ್ವಾರ ತೆರೆಯುತ್ತಿದ್ದಂತೇ, ಶ್ರೀಮಠದ  ಪ್ರಧಾನ ಅರ್ಚಕರು ಹಾಗೂ ಉಪಾದಿವಂತ ಮಂಡಲಿಗಳ ಸದಸ್ಯರಿಗೆ ಶಿವನ ಪೂಜೆ ನೆರವೇರಿಸುವ ಅವಕಾಶ ಕಲ್ಪಿಸಲಾಯಿತು.

ಸಂಸದ ಪ್ರಭಾಕರ ಕೋರೆ ಸೇರಿದಂತೆ ಹಲವು ಮಂದಿ ಗಣ್ಯರು, ಹಿರಿಯ ಅಧಿಕಾರಿಗಳು ಮತ್ತು ವಿವಿಧ ಸಮಾಜಗಳ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿದ್ದರು. ಮಧ್ಯಾಹ್ನ 12 ರಿಂದ 1.30ರವರೆಗೆ ಮಹಾಪೂಜೆ ಮತ್ತು ಮಹಾಮಂಗಳಾರತಿ ಸಲುವಾಗಿ ಬಾಗಿಲು ಮುಚ್ಚಿದ್ದು ಹೊರತುಪಡಿಸಿ ಇಡೀ ದಿನ ಭಕ್ತರ ದರ್ಶನಕ್ಕೆ ಅವಕಾಶ  ಕಲ್ಪಿಸಲಾಗಿತ್ತು. ಆದರೂ ರಾತ್ರಿ 11ರವರೆಗೂ ಕಡಲ ಕಿನಾರೆಯವರೆಗೂ ಉದ್ದದ ಸರತಿ ಸಾಲು ಕಂಡುಬಂತು.

50 ಸಾವಿರಕ್ಕೂ ಅಧಿಕ ಭಕ್ತರು ಶಿವರಾತ್ರಿ ಉಪವಾಸವಾಗಿದ್ದರಿಂದ ದೇಗುಲದ ಅಮೃತಾನ್ನಗೃಹದಲ್ಲಿ ಲಘು ಉಪಾಹಾರ ಸೇವಿಸಿದರು. ಶಿವಯೋಗದ ಮಹಾಪರ್ವ, ರುದ್ರಹವನ, ಮಹಾಕುಂಭಾಭಿಷೇಕ ಪೂರ್ವಕ ಮಹಾಪೂಜೆ, ಪುಷ್ಪರಥೋತ್ಸವ, ಜಲಯಾನೋತ್ಸವ, ದೀಪೋತ್ಸವ, ಭೂತಬಲಿಯಂಥ ಧಾರ್ಮಿಕ ಕಾರ್ಯಕ್ರಮಗಳು ಶುಕ್ರವಾರ ನಡೆದವು.

ಶನಿವಾರ (ಫೆ. 22) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀಸ್ವಾಮೀಜಿಯವರ ನೇತೃತ್ವದಲ್ಲಿ ಮಧ್ಯಾಹ್ನ 2.30ಕ್ಕೆ ಧರ್ಮಸಭೆ ನಡೆಯಲಿದೆ. 24ರಂದು ಮಹಾರಘೋತ್ಸವ ಹಾಗೂ  25ರಂದು ಅವಭೃತ ಸ್ನಾನ ನಡೆಯಲಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com