ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣ: ಅಪಾಯಕಾರಿ ಸ್ಥಿತಿಯಲ್ಲಿ ನದಿ ತೀರದ ಗ್ರಾಮಗಳು

ಮನುಷ್ಯನ ಮಿತಿಯಿಲ್ಲದ ದುರಾಸೆಯಿಂದ ನಾಯಿಕೊಡೆಗಳಂತೆ ನದಿ, ಹಳ್ಳಕೊಳ್ಳಗಳಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಸೇತುವೆ, ಜಲ ಸಂಗ್ರಹಣೆ ನಡೆಯುತ್ತಿದೆ. ಪರಿಣಾಮವಾಗಿ ಕುಡಿಯಲು ನೀರು, ಸುಗಮ ಸಂಚಾರಕ್ಕೆ ಅನೂಕಲವಾಗಿದ್ದರೂ ನದಿ ತೀರದ ಗ್ರಾಮಗಳು ಇಂದು ಮುಳುಗಡೆ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.
ವಿಜಯಪುರ-ಹುಬ್ಬಳ್ಳಿ ರಾಷ್ಟೀಯ ಹೆದ್ದಾರಿಯಲ್ಲಿನ ಕೊಣ್ಣೂರ ಬ್ರಿಡ್ಜ್
ವಿಜಯಪುರ-ಹುಬ್ಬಳ್ಳಿ ರಾಷ್ಟೀಯ ಹೆದ್ದಾರಿಯಲ್ಲಿನ ಕೊಣ್ಣೂರ ಬ್ರಿಡ್ಜ್

ಬಾಗಲಕೋಟೆ: ಮನುಷ್ಯನ ಮಿತಿಯಿಲ್ಲದ ದುರಾಸೆಯಿಂದ ನಾಯಿಕೊಡೆಗಳಂತೆ ನದಿ, ಹಳ್ಳಕೊಳ್ಳಗಳಲ್ಲಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಸೇತುವೆ, ಜಲ ಸಂಗ್ರಹಣೆ ನಡೆಯುತ್ತಿದೆ. ಪರಿಣಾಮವಾಗಿ ಕುಡಿಯಲು ನೀರು, ಸುಗಮ ಸಂಚಾರಕ್ಕೆ ಅನೂಕಲವಾಗಿದ್ದರೂ ನದಿ ತೀರದ ಗ್ರಾಮಗಳು ಇಂದು ಮುಳುಗಡೆ ಭೀತಿಯಲ್ಲಿ ಕಾಲ ಕಳೆಯುವಂತಾಗಿದೆ.

ಅವೈಜ್ಞಾನಿಕ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣದಿಂದ ಎಷ್ಟೆಲ್ಲ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಪಾಠವನ್ನು ಕಳೆದ ವರ್ಷ ಉಂಟಾದ ಪ್ರವಾಹ ತಕ್ಕ ಪಾಠ ಕಲಿಸಿದೆ.

ನದಿಗಳಲ್ಲಿ ಎಲ್ಲೆಂದರಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣದಿಂದ  ನದಿಗಳಲ್ಲಿ ಹೂಳು ಪ್ರಮಾಣ ಹೆಚ್ಚಾಗಿದೆ. ಜತೆಗೆ ನದಿಗಳ ಇಕ್ಕೆಲಗಳಲ್ಲಿ ಜಮೀನುಗಳ ಒತ್ತುವರಿ ಬೇರೆ. ಇದರಿಂದಾಗಿ ನದಿಗಳ ಪಾತಳಿ ಮಟ್ಟ ಕಡಿಮೆ ಆಗುತ್ತಿದೆ. ನದಿಗಳಲ್ಲಿ ಹೂಳು ತುಂಬುತ್ತಿರುವುದು, ಜಮೀನುಗಳ ಒತ್ತುವರಿ ಅಪಾಯಕಾರಿ ಎನ್ನುವುದು ಗೊತ್ತಿದ್ದರೂ ಅದನ್ನು ಲೆಕ್ಕಿಸದೇ ಕುಡಿವ ನೀರಿನ ಉದ್ದೇಶ ಮತ್ತು ಸುಗಮ ಸಂಚಾರದ ನೆಪ ಮುಂದು ಮಾಡಿಕೊಂಡು ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣ ಎಗ್ಗಿಲ್ಲದೆ ನಡೆದಿದೆ.

ಒಂದೆಡೆ ಮೂಲ ಸೌಕರ್ಯಗಳನ್ನು ಪಡೆದುಕೊಳ್ಳಲು ಪ್ರಕೃತಿಯನ್ನು ಬಗೆದು ತಿನ್ನುವ ಕಾರ್ಯ ನಡೆದಿದ್ದು, ಇನ್ನೊಂದು ಕಡೆ ಮನುಷ್ಯ ತಾನೆ ತನಗೆ ಅಪಾಯ ತಂದೊಡ್ಡಿಕೊಳ್ಳುತ್ತಿದ್ದಾನೆ. ಮಳೆಗಾಲದಲ್ಲಿ ನದಿಗಳಲ್ಲಿ ಉಂಟಾಗುವ ಪ್ರವಾಹದಿಂದ ಇಡೀ ಬದುಕನ್ನೇ ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾನೆ. ಊರಿಗೆ ಊರೇ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ತೀರಾ ಅಪಾಯಕಾರಿ ಸ್ಥಿತಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.

ಕಳೆದ ವರ್ಷ ಜಿಲ್ಲೆಯ ನದಿಗಳಲ್ಲಿ ಉಂಟಾಗಿದ್ದ ನೆರೆಯಿಂದ ಮಲಪ್ರಭ, ಘಟಪ್ರಭ ಮತ್ತು ಕೃಷ್ಣಾ ನದಿ ತೀರದಲ್ಲಿನ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ಇಂದಿಗೂ ಕಳೆದು ಹೋಗಿರುವ ಬದುಕನ್ನು ಕಟ್ಟಿಕೊಳ್ಳಲು ಗ್ರಾಮಸ್ಥರು ಹೆಣಗುತ್ತಿದ್ದಾರೆ. ಇಂತಹ ಅಪಾಯ ಭವಿಷ್ಯದ ದಿನಗಳಲ್ಲಿ ಹೆಚ್ಚಾಗಲಿದೆಯೇ ಹೊರತು ಕಡಿಮೆ ಆಗುವ ಯಾವ ಲಕ್ಷಣಗಳೂ ಇಲ್ಲ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ನದಿ ತೀರದ ಗ್ರಾಮಗಳನ್ನು ಸಂಪುರ್ಣವಾಗಿ ಸ್ಥಳಾಂತರಿಸುವುದೊಂದೆ ಇರುವ ಏಕೈಕ ಮಾರ್ಗ. ಇವುಗಳ ಸ್ಥಳಾಂತರ ಕೂಡ ಅಂದುಕೊಂಡಷ್ಟು ಸುಲಭದ್ದ ಎನ್ನುವುದು ಸರ್ಕಾರದ ಅರಿವಿಗೆ ಬಂದಿದೆ.

ಕಳೆದ ವರ್ಷ ಮಲಪ್ರಭ ನದಿಗೆ ಪ್ರವಾಹ ಬಂದಾಗ ಬಾದಾಮಿ ತಾಲೂಕು ಗೋವನಕೊಪ್ಪದ ಬಳಿ ಹುಬ್ಬಳ್ಳಿ- ವಿಜಯಪುರ ಹೆದ್ದಾರಿಗೆ ಮಲಪ್ರಭ ನದಿಗೆ ಅಡ್ಡಲಾಗಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ ಬೃಹತ್ ಸೇತುವೆಯಿಂದಾಗಿ ಎಂದೂ ಪ್ರವಾಹದ ಭೀತಿಯನ್ನೇ ಕಾಣದ ಕೊಣ್ಣೂರು ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಈ ಸೇತುವೆ ನಿರ್ಮಾಣದ ದುಷ್ಪರಿಣಾಮ ಕೇವಲ ಕೊಣ್ಣೂರು ಗ್ರಾಮಕ್ಕೆ ಮಾತ್ರವಲ್ಲ ಸೇತುವೆ ಮೇಲ್ಭಾಗದ ಬೀರನೂರು, ಆಲೂರು, ಕರ್ಲಕೊಪ್ಪ, ವಾಸನ ಸೇರಿದಂತೆ ಸುರೇಬಾನ ಗ್ರಾಮಗಳು ಜಲಾವೃತಗೊಂಡವು. ಸೇತುವೆ ಇಕ್ಕೆಲಗಳಲ್ಲಿ ನಿರ್ಮಿಸಲಾಗಿರುವ ಬೃಹದಾಕಾರ ಗೊಡೆಯಿಂದಾಗಿಯೇ ಪ್ರವಾಹದ ನೀರು ಗ್ರಾಮಗಳಲ್ಲಿ ಹೊಕ್ಕಿತು ಎನ್ನುವುದು ಯಾರಿಗಾದರೂ ಅರ್ಥವಾಗುವಂತಹದ್ದು, ಇದಕ್ಕೆ ಯಾವುದೇ ತಜ್ಞರ ವರದಿ ಅಗತ್ಯವಿಲ್ಲ. ಜನಸಾಮಾನ್ಯರಿಗೂ ಅರ್ಥವಾಗುತ್ತದೆ.

ಸೇತುವೆ ಪರಿಣಾಮವಾಗಿಯೇ ಗ್ರಾಮಗಳಿಗೆ ನೀರು ನುಗ್ಗಿದೆ ಎನ್ನುವುದನ್ನು ಅರಿತ ಜನತೆ ಸೇತುವೆಯ ಬಳಿಯ ಅಡ್ಡಲಾಗಿದ್ದ ಗೊಡೆಯನ್ನೇ ಒಡೆದು ಹಾಕಿದರು. ಇಂದಿಗೂ ಸೇತುವೆ ದುರಸ್ತಿ ಕಾಣದೇ ಹಾಗೆ ಸ್ಮಾರಕವಾಗಿ ನಿಂತಿದೆ. ಪ್ರವಾಹದ ಪರಿಣಾಮ ಅರಿತ ಮೇಲೂ ಬ್ರಿಡ್ಜ್ ಕಂ ಬ್ಯಾರೇಜ್‌ಗಳ ನಿರ್ಮಾಣ, ಜಮೀನುಗಳ ಒತ್ತುವರಿ ಮುಂದುವರಿದಲ್ಲಿ ನದಿಗಳು ತಮ್ಮ ಸಮಪಾತಳಿ ಕಳೆದುಕೊಂಡು, ಪ್ರವಾಹ ಉಂಟಾದಾಗಲೆಲ್ಲ ಆ ನೀರು ಗ್ರಾಮಗಳಲ್ಲೇ ನುಗ್ಗಲಿದೆ. ಗ್ರಾಮಗಳ ಜಲಾವೃತ ಪರಿಣಾಮ ಹೆಚ್ಚುತ್ತಲೇ ಹೋಗಲಿದೆ. ಇದು ಒಂದು ಸೇತುವೆಯಿಂದಾದ ದುಷ್ಪರಿಣಾಮ ಇಂತಹ ಸಾಕಷ್ಟು ಬ್ರಿಡ್ಜ್ ಕಂ ಬ್ಯಾರೇಜ್‌ಗಳನ್ನು ಜಿಲ್ಲೆಯಲ್ಲಿನ ನದಿಗಳಿಗೆ ಅಲ್ಲಲ್ಲಿ ಅಡ್ಡಲಾಗಿ ನಿರ್ಮಿಸಲಾಗಿದೆ.

ಮನುಷ್ಯ ತನ್ನ ದುರಾಸೆಗೆ ಈಗಲೇ ಕಡಿವಾಣ ಹಾಕದೇ ಹೋದಲ್ಲಿ ಭವಿಷ್ಯದಲ್ಲಿ ನದಿ ತೀರದ ಗ್ರಾಮಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ. ಈಗಲೇ ಭವಿಷ್ಯದ ಅಪಾಯವನ್ನು ಜನತೆ ಮತ್ತು ಸರ್ಕಾರ ಅರಿತುಕೊಳ್ಳಬೇಕಿದೆ. ಪ್ರವಾಹ ಬಂದಾಗ ನೋಡಿದರಾಯಿತು ಎನ್ನುವ ನೀತಿಗೆ ಸರ್ಕಾರ ಮತ್ತು ಜನತೆ ಜೋತು ಬೀಳದೇ ಈಗಲೇ ಸುರಕ್ಷತಾ ಕ್ರಮಗಳತ್ತ ಎಚ್ಚರಿಕೆ ಹೆಜ್ಜೆ ಹಾಕಬೇಕಿದೆ.

ವರದಿ: ವಿಠ್ಠಲ ಆರ್. ಬಲಕುಂದಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com