ಗೂಂಡಾಗಿರಿ ನಡೆಸಿ ಪರಾರಿಯಾಗಿದ್ದ ರೌಡಿಗೆ ಪೊಲೀಸರ ಗುಂಡು

ತುಮಕೂರು ಜಿಲ್ಲೆಯಲ್ಲಿ ಗುಂಡಾಗಿರಿ ನಡೆಸಿ ಬೆಂಗಳೂರಿಗೆ ಬಂದು ಆಶ್ರಯ ಪಡೆಯುತ್ತಿದ್ದ ಕುಖ್ಯಾತ ರೌಡಿಯೊಬ್ಬನ ಮೇಲೆ ಬಾಗಲಗುಂಟೆ ಸಮೀಪ ಪೊಲೀಸರು ಗುಂಡು ಹಾರಿಸಿ ಬಂಧನಕ್ಕೊಳಪಡಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿ ಗುಂಡಾಗಿರಿ ನಡೆಸಿ ಬೆಂಗಳೂರಿಗೆ ಬಂದು ಆಶ್ರಯ ಪಡೆಯುತ್ತಿದ್ದ ಕುಖ್ಯಾತ ರೌಡಿಯೊಬ್ಬನ ಮೇಲೆ ಬಾಗಲಗುಂಟೆ ಸಮೀಪ ಪೊಲೀಸರು ಗುಂಡು ಹಾರಿಸಿ ಬಂಧನಕ್ಕೊಳಪಡಿಸಿದ್ದಾರೆ. 

ತುಮಕೂರಿನ ಜನಗರದ ಸ್ಟೀಫನ್ ಫರ್ನಾಂಡೀಸ್ ಅಲಿಯಾಸ್ ಗೂಂಡಾ (29) ಎಂಬಾತನಿಗೆ ಗುಂಡೇಟು ಬಿದ್ದಿದ್ದು, ಮಲ್ಲಸಂದ್ರ ಸಮೀಪ ತುಮಕೂರಿನ ತಿಲಕನಗರ ಹಾಗೂ ಸೋಲದೇವನಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
 
15 ದಿನಗಳ ಹಿಂದೆ ತುಮಕೂರಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಆರೋಪಿ, ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಸ್ಟೀಫನ್ ಬಂಧಿಸಿ ಕೃತ್ಯಕ್ಕೆ ಬಳಿಸಿದ್ದ ಮಾರಕಾಸ್ತ್ರ ಜಪ್ತಿಗೆ ಮಲ್ಲಸಂದ್ರ ಸಮೀಪ ಕರೆದೊಯ್ದಿದ್ದರು. 

ಸ್ಟೀಫನ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂಗ ಸುಖಾ ಸುಮ್ಮನೆ ಹಲ್ಲೆ ನಡೆಸಿ ದಾದಾಗಿರಿ ನಡೆಸುವುದು ಆತನ ಖಯಾಲಿಯಾಗಿತ್ತು. ತುಮಕೂರಿನ ತಿಲಕನಗರ ಠಾಣೆ ಇನ್ಸ್ ಪೆಕ್ಟರ್ ಪಾರ್ವತಮ್ಮ, ಸೋಲದೇವನಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಶಿವಸ್ವಾಮಿಯವರಿಗೆ ಸ್ಟೀಫನ್ ಚಟುವಟಿಕೆಗಳ ಕುರಿತು ಸುಳಿವು ಸಿಕ್ಕಿತ್ತು. 

ಶುಕ್ರವಾರ ರಾತ್ರಿ ಬಾಗಲಗುಂಟೆ ಸಮೀಪ ಗೆಳೆಯರ ಜೊತೆಯಲ್ಲಿದ್ದಾಗ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಂತರ ಮಲ್ಲಸಂದ್ರ ಕೆರೆ ಬಳಿಗೆ ಕಾರು ಮತ್ತು ಮಾರಕಾಸ್ತ್ರ ಜಪ್ತಿಗೆ ಆತನನ್ನು ಪೊಲೀಸರು ಕರೆದೊಯ್ದಿದ್ದರು. ಆಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕಳ್ಳಲು ಆರೋಪಿ ಮುಂದಾಗಿದ್ದಾನೆ. ಈ ಹಂತದಲ್ಲಿ ಕಾನ್ಸ್ಟೇಬಲ್ ಗಳಾದ ತಿಲಕನಗರ ಠಾಣೆಯ ಮಂಜುನಾಥ್ ಹಾಗೂ ಸೋಲದೇವನಹಳ್ಳಿಯ ಶ್ರೀನಿವಾಸ್ ಅವರಿಗೆ ಗಾಯವಾಗಿದೆ. 

ಎಚ್ಚೆತ್ತ ಪೊಲೀಸರು ತಮ್ಮ ಸರ್ವೀಸ್ ಪಿಸ್ತೂಲ್ ನಿಂದ ಸ್ಟೀಫನ್ ಗೆ ಗುಂಡು ಹೊಡೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ಬಾಗಲಗುಂಟೆ ಠಾಣೆಯಲ್ಲಿ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com